ಮೂಡುಬಿದಿರೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಗಳೂರು, ಸಂತಾನೋತ್ಪತ್ತಿ ಹಾಗೂ ಮಕ್ಕಳ ಆರೋಗ್ಯ ಕಾರ್ಯಕ್ರಮ ಅಧಿಕಾರಿ, ರೋಟರಿ ಕ್ಲಬ್ ಮೂಡುಬಿದಿರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ ಇವುಗಳ ಸಹಯೋಗದೊಂದಿಗೆ ಬುಧವಾರ ಸ್ವರ್ಣ ಮಂದಿರದಲ್ಲಿ ‘ಗಂಡಾಂತರ ಗರ್ಭಿಣಿಯರಿಗೆ ಗರ್ಭಿಣಿ ಆರೈಕೆ, ಪೌಷ್ಠಿಕ ಆಹಾರದ ಕುರಿತ ಮಾಹಿತಿ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

garbhini araike
ಕಾರ್ಯಕ್ರಮವನ್ನು ರೋಟರಿ ಕ್ಷಬ್ ಅಧ್ಯಕ್ಷ ಡಾ. ರಮೇಶ್ ಉದ್ಘಾಟಿಸಿ, ಆರೋಗ್ಯವಂತ ಮಗುವಿನ ಜನನಕ್ಕೆ ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಅಗತ್ಯ. ಪ್ರಾಥಮಿಕ ಹಂತದಲ್ಲಿಯೇ ಪೌಷ್ಠಿಕಾಂಶ ಆಹಾರಗಳನ್ನು ಸೇವಿಸುವುದರಿಂದ ಗರ್ಭಿಣಿಯರ ಮತ್ತು ಮಗುವನ್ನು ಗಂಡಾಂತರದಿಂದ ಪಾರು ಮಾಡಿ ಆರೋಗ್ಯ ಉತ್ತಮ ಪಡಿಸಲು ಸಾಧ್ಯವಿದೆ ಎಂದು ಹೇಳಿದರು.
ಗರ್ಬಿಣಿಯವರು ಗರ್ಭ ಧರಿಸುವಾಗ ಪೌಷ್ಠಿಕಾಂಶದ ಕೊರತೆಯಿಂದ ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆಹಾರ ಪದ್ದತಿಯಲ್ಲಿ ಸ್ವಲ್ಪ ಏರುಪೇರು ಕಂಡರು ಹತ್ತಿರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಆಹಾರ ಪದ್ದತಿಯ ಬಗ್ಗೆ ತಿಳಿದುಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅನಿವಾರ್ಯ. ಸರ್ಕಾರಗಳು ಕೂಡಾ ಗರ್ಭಿಣಿಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಇವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಪುರಸಭಾ ಸದಸ್ಯ ಎಂ.ಬಾಹುಬಲಿ ಪ್ರಸಾದ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಗರ್ಭಿಣಿಯರ ಆರೈಕೆಯಲ್ಲಿ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ ತುಂಬಾ ಉತ್ತಮವಾಗಿ ಸೇವೆ ಸಲ್ಲಿಸುತ್ತಿದೆ. ಕೇಂದ್ರ ಸರ್ಕಾರವು ಗರ್ಭಿಣಿ ಮತ್ತು ಬಾಣಂತಿಯರಿಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು ಇದನ್ನು ಅರಿತುಕೊಳ್ಳಬೇಕೆಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ನವೀನ್ ಕುಲಾಲ್ ಪ್ರಾಸ್ತವಿಕ ಮಾತುಗಳನ್ನಾಡಿ ಒಂದು ದೇಶದ ಸ್ಥಿತಿಯನ್ನು ತಾಯಿ ಮತ್ತು ಮಗುವಿನ ಮರಣ ಪ್ರಮಾಣದಿಂದ ಅಳೆಯುತ್ತಾರೆ. ಮಂಗಳೂರು ವಿಭಾಗದಲ್ಲಿ ತಾಯಿ ಮರಣ ಪ್ರಮಾಣ ಕಡಿಮೆ ಆಗಿದೆ. ಗರ್ಭಿಣಿ ಮತ್ತು ಬಾಣಂತಿಯರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡುವುದಲ್ಲದೆ ಆಹಾರದ ಕಡೆಗೂ ಗಮನ ನೀಡಬೇಕು. ಮಾರ್ಕೆಟ್‍ನಲ್ಲಿ ಸಿಗುವ ಹಣ್ಣು ಹಂಪಲುಗಳನ್ನು ಸೇವಿಸುವುದಕ್ಕಿಂತ ನಮ್ಮ ಮನೆಗಳಲ್ಲೇ ಬೆಳೆಸುವ ಪೇರಳೆ ಹಣ್ಣುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ ಎಂದು ಹೇಳಿದರು.
ಪ್ರಸೂತಿ ತಜ್ಞೆ ಡಾ. ಸಂಗೀತ ಮಾಹಿತಿಯನ್ನು ನೀಡಿದರು. ಜಿ.ಪಂ ಕುಟುಂಬ ಕಲ್ಯಾಣ ಅಧಿಕಾರಿ ಪಾಷಾ, ಜಿ.ಪಂ ಸರ್ವೇಕ್ಷಣಾಧಿಕಾರಿ ಡಾ.ರಾಜೇಶ್, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಜ್ಯೋತಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲಾ ಸ್ವಾಗತಿಸಿದರು. ಹಿರಿಯ ಆರೋಗ್ಯ ನಿರೀಕ್ಷಕ ಕುಮಾರ್ ಪಿ.ಕಾರ್ಯಕ್ರಮ ನಿರೂಪಿಸಿದರು. ಕಿರಿಯ ಆರೋಗ್ಯಾಧಿಕಾರಿ ಶಾಂತಮ್ಮ ವಂದಿಸಿದರು.

By suddi9

Leave a Reply

Your email address will not be published. Required fields are marked *