ಮೂಡುಬಿದಿರೆ : ರೋಟರಿ ಕ್ಲಬ್ ಮೂಡುಬಿದಿರೆ ವತಿಯಿಂದ ನಡೆದ ಸಂವಾದ ಕಾರ್ಯಕ್ರಮವು ಸಮ್ಮಿಲನ್ ಹಾಲ್ನಲ್ಲಿ ಸೋಮವಾರ ನಡೆಯಿತು.
ಸಮರ್ಪಕ ಒಳಚರಂಡಿ, ವಿವಿಧ ಇಲಾಖೆಗಳು ಒಂದೇ ಸೂರಿನಲ್ಲಿರುವಂತೆ “ಮಿನಿ ವಿಧಾನಸೌಧ”, ಸರಕಾರಿ ಕಾಲೇಜು, ಸರಕಾರಿ ಬಸ್ಸು ತರಲು ಪ್ರಯತ್ನ, ಮೂಡಾ ಸಮಸ್ಯೆಗೆ ಪರಿಹಾರ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ಕೈಗಾರಿಕಾ ತರಬೇತಿ ಕೇಂದ್ರ ಅಭಿವೃದ್ಧಿ, ಸುಸಜ್ಜಿತ ಸರಕಾರಿ ಆಸ್ಪತ್ರೆ, ಶೀಘ್ರವಾಗಿ ಮಾರ್ಕೆಟ್ ಕಟ್ಟಡದ ನಿರ್ಮಾಣ, ರಾಜಕೀಯ ಹಸ್ತಕ್ಷೇಪವಿಲ್ಲದೆ ಹಾಗೂ ಸ್ವಚ್ಛ ಪರಿಸರದೊಂದಿಗೆ ನನ್ನ ಕನಸ್ಸಿನ ಮೂಡುಬಿದಿರೆಯನ್ನು ನಿರ್ಮಾಣ ಮಾಡುವ ಮೂಲಕ ಹೊಸ ಬದಲಾವಣೆಯನ್ನು ತರುತ್ತೇನೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಭರವಸೆಯನ್ನು ನೀಡಿದ್ದಾರೆ.
ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ನೆನೆಗುದಿಗೆ ಬಿದ್ದಿರುವ ಬಗ್ಗೆ ಪ್ರಶ್ನಿಸಿದಾಗ, ಹೈವೇಗೆ ಡಿಪಿಆರ್ ಸಿದ್ಧಗೊಂಡಿದ್ದು ನೋಟಿಫಿಕೇಶನ್ ಆಗಿಲ್ಲ. ಈ ಹಿಂದೆ ರಾಜ್ಯ ಸರಕಾರವು ಅಸಹಕಾರ ತೋರಿಸಿದ್ದರಿಂದ ಕೆಲಸ ಮುಂದುವರೆದಿಲ್ಲ. ಜಾಗ ಸರ್ವೆ ಆಗಿ ನೀಲಿ ನಕ್ಷೆ ರೆಡಿಯಾಗಿದೆ ಈ ಬಗ್ಗೆ ಎಲ್ಲಾ ಅಧಿಕಾರಿಗಳನ್ನು ಶನಿವಾರ ಸಭೆ ಕರೆದಿದ್ದು ಮುಂದಿನ 5-6 ತಿಂಗಳಲ್ಲಿ ಇದಕ್ಕೆ ಉತ್ತರ ಸಿಗಬಹುದು ಎಂದು ತಿಳಿಸಿದರು.
ಬೆಳೆಯುತ್ತಿರುವ ಮೂಡುಬಿದಿರೆಯಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ಸರಕಾರಿ ಕಾಲೇಜು ಅನಿವಾರ್ಯವಾಗಿದ್ದು ಈ ಬಗ್ಗೆ ಕ್ರಮಕೈಗೊಳಬಹುದೇ..? ಎಂಬ ಪ್ರಶ್ನೆಗೆ ಉತ್ತರಿಸಿದ ಕೋಟ್ಯಾನ್ ಸರಕಾರಿ ಪ.ಪೂ ಹಾಗು ಪದವಿ ಕಾಲೇಜು ಮೂಡುಬಿದಿರೆ ವ್ಯಾಪ್ತಿಗೆ ಅಗತ್ಯವಾಗಿ ಬೇಕಾಗಿರುವುದು ನಿಜ. ನೀರ್ಕೆರೆ, ಅಳಿಯೂರು ಅಥವಾ ಮಾರ್ನಾಡಿನಲ್ಲಿ ಕಾಲೇಜು ತರಬೇಕೆಂದು ಇಚ್ಛೆ ಇದೆ. ಅಳಿಯೂರಿನಿಂದ ಪ್ರಪೋಸಲ್ ಹೋಗಿದೆ ಆದರೆ ಇಲಾಖೆಗೆ ಹೋಗಿ ತನಿಖೆ ನಡೆಸಿದಾಗ ಪ್ರಪೋಸಲೇ ಇರಲಿಲ್ಲ ಎಂದು ತಿಳಿಸಿದ ಅವರು ಒಂದೆರಡು ವರ್ಷದಲ್ಲಿಯೇ ಸರಕಾರಿ ಕಾಲೇಜಿಗೆ ಅನುದಾನ ಬರುವಂತೆ ಪ್ರಯತ್ನಿಸಲಾಗುವುದು ಎಂದರು.
ತಾಂತ್ರಿಕ ಶಿಕ್ಷಣವನ್ನು ಪೂರೈಸಿರುವವರಿಗೆ ಐಟಿಐ ಕಾಲೇಜಿನ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ಈಗಾಗಲೇ ಬನ್ನಡ್ಕದಲ್ಲಿ ಪಾಳು ಬಿದ್ದಿರುವ ಕೈಗಾರಿಕ ಶಿಕ್ಷಣ ಸಂಸ್ಥೆಯನ್ನು ಎಂಆರ್ಪಿಎಲ್ಗೆ ಹಸ್ತಾಂತರಿಸುವ ಮಾತುಕತೆ ನಡೆದಿದ್ದು ಈ ಮೂಲಕ ಅದನ್ನು ಅಭಿವೃದ್ಧಿಗೊಳಿಸಿ ಕೌಶಲಾಭಿವೃದ್ಧಿಗಾಗಿ ಉಪಯೋಗಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಗುರುಪುರ ಬ್ರಿಡ್ಜ್ ಕಾಮಗಾರಿಯನ್ನು ಪ್ರಥಮ ಹಂತದಲ್ಲಿ ಕೈಗೊಳ್ಳಲಾಗುವುದು. ಇದಕ್ಕಾಗಿ ಹೈವೇಯನ್ನು ಹೊಸ ರೂಟ್ಗಳಿಗೆ ಜಾಗದ ಗುರುತಿಸಲಾಗಿದೆ. ಟೆಂಡರ್ ಆದ ತಕ್ಷಣ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಪಾರ್ಕಿಂಗ್ ಮತ್ತು ಟ್ರಾಫಿಕ್ ಸಮಸ್ಯೆಯ ಬಗ್ಗೆಯೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನೂತನವಾಗಿ ಆಯ್ಕೆಯಾಗಿರುವ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ರೋಟರಿ ಕ್ಲಬ್ನ ಅಧ್ಯಕ್ಷ ಡಾ| ರಮೇಶ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆ.ಆರ್.ಪಂಡಿತ್ ಶಾಸಕರನ್ನು ಸಭೆಗೆ ಪರಿಚಯಿಸಿದರು. ಕಾರ್ಯದರ್ಶಿ ಸಿ.ಹೆಚ್. ಗಫೂರ್ ವಂದಿಸಿದರು.
