ಮೂಡುಬಿದಿರೆ:ಮೂಡುಬಿದಿರೆ ತಾಲ್ಲೂಕು ಮಾರ್ಪಾಡಿ ಗ್ರಾಮದ ಸರ್ವೆ ನಂಬ್ರ 192ರಲ್ಲಿರುವ ಸುಮಾರು 7.99 ಎಕ್ರೆ ಸರಕಾರಿ ಜಾಗವನ್ನು ಕೆಎಸ್ಆರ್ಟಿಸಿ ಬಸ್ನಿಲ್ದಾಣ ಮತ್ತು ಡಿಪೊಗೆ ಕಾಯ್ದಿರಿಸಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಮೂಡುಬಿದಿರೆಯ ಭ್ರಷ್ಟಾಚಾರ ವಿರೋಧ ಜಾಗೃತ ಸೇವಾದಳ ಆಗ್ರಹಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇವಾದಳದ ಅಧ್ಯಕ್ಷ ಹರಿಪ್ರಸಾದ್ ಪ್ರಸ್ತಾವಿತ ಸರಕಾರಿ ಜಾಗವನ್ನು ಕೆಎಸ್ಆರ್ಟಿಸಿ ಡಿಪೊಗೆ ಕಾದಿರಿಸುವಂತೆ ಈಗಾಗಲೇ ದ.ಕ ಜಿಲ್ಲಾಧಿಕಾರಿಗೆ, ತಹಶಿಲ್ದಾರ್ ಹಾಗೂ ಸಂಬಂಧಿತ ಇಲಾಖೆಗೆ ನಾವು ಈಗಾಗಲೇ ಮನವಿ ಸಲ್ಲಿಸಿದ್ದೇವೆ. ಆದರೆ ಸದ್ರಿ ಜಾಗ ಡೀಮ್ಡ್ ಅರಣ್ಯ ವ್ಯಾಪ್ತಿಗೆ ಒಳಪಟ್ಟಿದೆಯೆಂಬ ಕಾರಣವೊಡ್ಡಿ ಇಲಾಖೆ ಈ ಕುರಿತ ನಮ್ಮ ಅರ್ಜಿಯನ್ನು ತಡೆಹಿಡಿದಿದೆ. ಡೀಮ್ಡ್ ಅರಣ್ಯಕ್ಕೆ ಸೇರಿದ ಜಾಗವಾದರು ಸಾರ್ವಜನಿಕ ಉದ್ದೇಶಕ್ಕೆ ಕಾದಿರಿಸಲು ಸರಕಾರಕ್ಕೆ ಅಧಿಕಾರವಿದೆ. ಈ ಕುರಿತ ಪ್ರಕರಣ ಇತ್ಯರ್ಥವಾದ ನಂತರ ಸೂಚಿತ ಉದ್ದೇಶಕ್ಕೆ ಜಾಗ ಮಂಜೂರು ಮಾಡಬಹುದು. ಆದರೆ ಸರಕಾರಿ ಅಧಿಕಾರಿಗಳು ನಮ್ಮ ಅರ್ಜಿಯ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್ ಅವರು ಕೂಡ ನಮ್ಮ ಮನವಿ ಬಗ್ಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದಿರುವುದು ಬೇಸರ ತಂದಿದೆ. ಇದರ ಹಿಂದೆ ಖಾಸಗಿ ಲಾಬಿ ಕೆಲಸ ಮಾಡುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ಸರಕಾರ ಮಟ್ಟದಲ್ಲಿ ಒತ್ತಡ ಹೇರಿ ಡಿಪೊಗೆ ಜಾಗ ಮಂಜೂರುಗೊಳಿಸಲು ಶಾಸಕರು ಪ್ರಯತ್ನಿಸಬೇಕು ಎಂದು ಅವರು ಆಗ್ರಹಿಸಿದರು.
ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ನಾವು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರಿಗು ಮನವಿ ನೀಡಿದ್ದೇವೆ. ಮೂಡುಬಿದಿರೆ ನಾಗರಿಕ ಅನುಕೂಲಕ್ಕಾಗಿ ಮತ್ತು ಇಲ್ಲಿಗೆ ಬರುವ ದೂರದ ಊರಿನ ವಿದ್ಯಾರ್ಥಿಗಳು, ಅವರ ಹೆತ್ತವರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಮೂಡುಬಿದಿರೆಗೆ ಕೆಎಸ್ಆರ್ಟಿಸಿ ಬಸ್ನಿಲ್ದಾಣ ಮತ್ತು ಡಿಪೊಗೆ ಜಾಗ ಮಂಜೂರುಗೊಳಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಈ ನಿಟ್ಟಿನಲ್ಲಿ ಇಲ್ಲಿನ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಸರಕಾರಕ್ಕೆ ಒತ್ತಡ ತರಬೇಕು ಎಂದು ವಿನಂತಿಸಿದರು. ಭ್ರಷ್ಟಾಚಾರ ವಿರೋಧ ಜಾಗೃತ ಸೇವಾದಳದ ಪ್ರಮುಖರಾದ ವಕೀಲ ನಾರಾಯಣ ಕಡಲಕೆರೆ, ವಿಶ್ವನಾಥ ಬೋವಿ, ಶಿವರಾಮ ಶೆಟ್ಟಿ, ದಯಾನಂದ ನಾಯಕ್ ಉಪಸ್ಥಿತರಿದ್ದರು.