ಮೂಡುಬಿದಿರೆ : ತಾಲೂಕು ಆಡಳಿತ, ಅರಣ್ಯ ಇಲಾಖೆ ಹಾಗೂ ಅರಣ್ಯ ತಳಿಶಾಸ್ತ್ರ (ಸಂಶೋಧನೆ) ವಲಯ ಇವುಗಳ ವತಿಯಿಂದ ಪ್ರಕೃತಿ ಶಿಕ್ಷಣ ಕೇಂದ್ರದಲ್ಲಿ ನಡೆದ ಹಸಿರು ಕರ್ನಾಟಕ ಆಂದೋಲನವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ನೀರು ಆಹಾರವಿಲ್ಲದೆ ಬದುಕಲು ಸಾಧ್ಯವಿದೆ ಆದರೆ ಗಾಳಿಯನ್ನು ಸೇವಿಸದೆ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲ. ಹಸಿರು ಗಿಡ ಮರಗಳನ್ನು ಬೆಳೆಸುವುದರಿಂದ ನಮಗೆ ಬೇಕಾದ ಸ್ವಚ್ಛವಾದ ಗಾಳಿ ಸಿಗುತ್ತದೆ. ಬಡವರು ಸ್ವಂತ ಉಪಯೋಗಕ್ಕಾಗಿ ತಮ್ಮ ಜಾಗದಲ್ಲಿರುವ ಮರಗಳನ್ನು ಕಡಿದರೆ ಅದಕ್ಕೆ ಮಾನವೀಯತೆಯ ದೃಷ್ಠಿಯಿಂದ ಅಧಿಕಾರಿಗಳು ಸಹಕರಿಸಿ ಆದರೆ ಹಣವನ್ನು ಮಾಡುವ ಉದ್ದೇಶದಿಂದ ಕದ್ದು ಮರಗಳನ್ನು ಕಡಿದು ಸಾಗಿಸುವುದಕ್ಕೆ ಅದಕ್ಕೆ ಕಡಿವಾಣ ಹಾಕಿ ಎಂದು ಹೇಳಿದರು.
ನಂತರ ಸರಕಾರಿ ಶಾಲೆಯಲ್ಲಿ ಕಲಿತು 10ನೇ ತರಗತಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದಿರುವ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಡಾಕ್ಟರ್, ಇಂಜಿನಿಯರ್ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಮೂಡುಬಿದಿರೆ ತಹಶೀಲ್ದಾರ್ ರಶ್ಮಿ ಮಾತನಾಡಿ ವಸುದೈವ ಕುಟುಂಬಕಂ ಎನ್ನುವಂತೆ ಪ್ರಕೃತಿಯಲ್ಲಿರುವ ಎಲ್ಲಾ ಜೀವರಾಶಿಗಳು ಕೂಡಾ ಒಂದು ಕುಟುಂಬವಿದ್ದಂತೆ. ಇಂತಹ ಪ್ರಕೃತಿಯನ್ನು ನಾವು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಅಗತ್ಯವಿದೆ ಎಂದರು.
ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ತಾ.ಪಂ ಸದಸ್ಯರಾದ ಪ್ರಕಾಶ್ ಗೌಡ, ರೀಟಾ ಕುಟಿನ್ಹಾ, ಪ್ರಶಾಂತ್ ಅಮೀನ್, ಪುರಸಭಾ ಸದಸ್ಯರಾದ ಪಿ.ಕೆ.ಥೋಮಸ್, ಲಕ್ಷ್ಮಣ್ ಪೂಜಾರಿ, ಪ್ರಸಾದ್ ಕುಮಾರ್, ನಾಗರಾಜ ಪೂಜಾರಿ, ದಿನೇಶ್ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ಅಚ್ಚಪ್ಪ, ತಳಿಶಾಸ್ತ್ರ(ಸಂಶೋಧನೆ)ದ ವಲಯಾರಣ್ಯಾಧಿಕಾರಿ ಸತೀಶ್ ಆಚಾರ್ಯ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು ಮತ್ತು ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಲಾಯಿತು. ವಲಯಾರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ಸ್ವಾಗತಿಸಿದರು. ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಾಂತ್ ಪಿ.ಪೋಳ್ ವಂದಿಸಿದರು.
