ಬಂಟ್ವಾಳ : ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್ ಸಮಿತಿಯಿಂದ ಬಿ ಗ್ರೇಡ್ ಮಾನ್ಯತೆಯನ್ನು ಪಡೆದಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೋ. ಹರಿಪ್ರಸಾದ್ ಬಿ. ಶೆಟ್ಟಿ ತಿಳಿಸಿದ್ದಾರೆ.
ಮೂರನೇ ಆವೃತ್ತಿಯ ನ್ಯಾಕ್ ಮಾನ್ಯತೆಗಾಗಿ ಹೊಸ ವಿಧಾನದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಪ್ರೋ. ಸುಧಾಲೈ ಮುತ್ತುರವರ ಅಧ್ಯಕ್ಷತೆಯಲ್ಲಿ ಪಶ್ಚಿಮ ಬಂಗಾಳದ ಶಾಂತಿನಿಕೇತನ ಕೇಂದ್ರಿಯ ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಪ್ರೋ.ಕುಂಕುಂ ಭಟ್ಟಾಚಾರ್ಯ ತಂಡದ ಸದಸ್ಯ ಸಂಯೋಜಕರಾಗಿದ್ದು, ಮಧ್ಯಪ್ರದೇಶದ ಇಂದೋರ್ನ ಎಂ.ಬಿ. ಕಾಲ್ಸ ಕಾಲೇಜಿನ ಪ್ರಾಂಶುಪಾಲರಾದ ಡಾ. ತರಂಜಿತ್ ಸೂದ್ ಸದಸ್ಯರಾಗಿದ್ದ ನ್ಯಾಕ್ ಪೀರ್ ತಂಡವು ಕಾಲೇಜಿಗೆ ಭೇಟಿ ನೀಡಿ, ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳು, ಬೋಧನೆ ಮತ್ತು ಕಲಿಕೆ, ಮೂಲ ಸೌಕರ್ಯ, ಸಂಶೋಧನೆ, ನಾಯಕತ್ವ, ವಿಸ್ತರಣಾ ಚಟುವಟಿಕೆಗಳು ಇವುಗಳನ್ನು ವಿಶ್ಲೇಷಿಸಿ ಅಂಕಗಳನ್ನು ನೀಡಿತ್ತು. 2018 ರಲ್ಲಿ ಮೂರನೇ ಆವೃತ್ತಿಯ ಹೊಸ ವಿಧಾನದಲ್ಲಿ 2.28 ಸಿಜಿಪಿಎ ಅಂಕಗಳೊಂದಿಗೆ ಕಾಲೇಜು ಗ್ರೇಡ್ ಬಿ ಮಾನ್ಯತೆ ಪಡೆದಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ 2011 ರಲ್ಲಿ ಎರಡನೇ ಆವೃತ್ತಿಯಲ್ಲಿ 2.16 ಸಿಜಿಪಿಎ ಅಂಕಗಳೊಂದಿಗೆ ಗ್ರೇಡ್ ಬಿ ಮಾನ್ಯತೆ ಪಡೆಯಲಾಗಿತ್ತು. ನ್ಯಾಕ್ ಮೌಲ್ಯಾಂಕ ಪ್ರಕ್ರಿಯೆಯಲ್ಲಿ ಸಹಕರಿಸಿದ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ, ಶಿಕ್ಷಕ – ರಕ್ಷಕ ಸಂಘಕ್ಕೆ, ಹಳೆ ವಿದ್ಯಾರ್ಥಿಗಳಿಗೆ, ಬೋಧಕ -ಬೋಧಕೇತರ ವೃಂದಕ್ಕೆ ಕಾಲೇಜಿನ ಪ್ರಾಂಶುಪಾಲ ಪ್ರೋ. ಹರಿಪ್ರಸಾದ್ ಬಿ. ಶೆಟ್ಟಿ ಮತ್ತು ಕಾಲೇಜಿನ ನ್ಯಾಕ್ ಸಂಯೋಜಕರಾದ ಡಾ. ರವಿ ಎಂ. ಎನ್. ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
