ಮೂಡುಬಿದಿರೆ: ಮನೆಯ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದು ಕಳ್ಳತನವಾದ ಘಟನೆ ಮೂಡುಬಿದಿರೆ ಸಮೀಪದ ಕೊಡ್ಯಡ್ದಕ ಕಾಪಿಕಾಡು ಎಂಬಲ್ಲಿ ನಡೆದಿದೆ.
ಕಳ್ಳತನವಾದ ಬೈಕ್ ಬೆಳುವಾಯಿ ಗ್ರಾಮದ ನಡಿಗುಡ್ಡೆಯ ಪ್ರಶಾಂತ್ ಎಂಬವರಿಗೆ ಸೇರಿದ್ದಾಗಿದೆ. ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿರುವ ಇವರು ಕೆಲವು ದಿನಗಳಿಂದ ಕೊಡ್ಯಡ್ಕದ ತನ್ನ ಅಜ್ಜಿ ಮನೆಗೆ ಹೋಗಿ ಬರುತ್ತಿದ್ದರು.
ಎಂದಿನಂತೆ ಭಾನುವಾರ ಸಂಜೆ ಕೊಡ್ಯಡ್ಕದಲ್ಲಿರುವ ತನ್ನ ಮನೆಗೆ ಸ್ವಲ್ಪ ದೂರದ ಮುಖ್ಯ ರಸ್ತೆ ಬಳಿ ಪ್ರಶಾಂತ್ ಅವರ ಕೆ.ಎ 19 ಇಎನ್ 7458 ಅಪಾಚಿ ಬೈಕನ್ನು ಹಾಗೂ ಅವರ ಮಿತ್ರನೊಬ್ಬರ ಇನ್ನೊಂದು ಬೈಕನ್ನು ಇರಿಸಿ ಮನೆಗೆ ಹೋಗಿದ್ದರು. ಮರುದಿನ ಬೆಳಿಗ್ಗೆ ನೋಡುವಾಗ ಅಪಾಚಿ ಬೈಕ್ ಕಳವಾಗಿದ್ದರೆ ಇನ್ನೊಂದು ಬೈಕನ್ನು ಕಳವಿಗೆ ಯತ್ನಿಸಿ ಸಾಧ್ಯವಾಗದೆ ಸ್ವಲ್ಪ ದೂರದಲ್ಲಿ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ಹತ್ತಿರದಲ್ಲಿದ್ದ ಸಿಸಿ ಕೆಮರಾಗಳನ್ನು ಪರಿಶೀಲನೆ ನಡೆಸಿದ್ದಾರೆ.