ಮೂಡುಬಿದಿರೆ:ಯಕ್ಷಗಾನಕ್ಕೆ ರಂಗಭೂಮಿಯಲ್ಲಿದ್ದಂತೆ ಮಾತು, ಸನ್ನಿವೇಶಗಳಿಗೆ ಸ್ವಾತಂತ್ರ್ಯ ನಿರ್ಬಂಧವಿಲ್ಲ. ಯಕ್ಷಗಾನ ಆಶುಪಠ್ಯವಾಗಿದೆ. ಹಾಗಾಗಿ ಯಕ್ಷಗಾನದಲ್ಲಿ ಮಾತು, ಸನ್ನಿವೇಶಗಳನ್ನು ಕಲಾವಿದ ಸಮಯ ಹಾಗೂ ಸಂಧರ್ಭಕ್ಕೆ ಅನುಗುಣವಾಗಿ ಪರಿವರ್ತಿಸಿಕೊಳ್ಳಬಹುದು. ಈ ಕಾರಣದಿಂದಾಗಿಯೇ ಯಕ್ಷರಂಗದಲ್ಲಿ ಪ್ರಸಂಗದ ಶೇ 70 ರಷ್ಟು ಸಂಭಾಷಣೆಗಳಲ್ಲಿ ಕಲಾವಿದನಿಗೆ ಸ್ವಾತಂತ್ರ್ಯವಿದೆ. ಹಾಗಾಗಿಯೇ ಇಲ್ಲಿ ಸ್ವಾರಸ್ಯಪೂರ್ಣ ಸಂವಾದಗಳು, ಸಂಭಾಷಣೆಗಳು, ವಿದ್ವತ್ವಾಕ್ಯಗಳು ಸದಾ ಪ್ರಸಂಗಕ್ಕೆ ಹೊಸತನ ನೀಡುತ್ತವೆ ಎಂದು ಹಿರಿಯ ಯಕ್ಷಗಾನ ಅರ್ಥಧಾರಿ, ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಹೇಳಿದರು.
ಸಮಾಜ ಮಂದಿರ ಸಭಾದ ವತಿಯಿಂದ ಜರಗಿದ 73ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕøತಿಕ ಉತ್ಸವದ ಸಂಸ್ಕøತಿ ಚಿಂತನ ಕಾರ್ಯಕ್ರಮದಲ್ಲಿ ಶುಕ್ರವಾರ ಸಂಜೆ ಯಕ್ಷಗಾನ ರಂಗ ಸ್ವಾರಸ್ಯಗಳು ಕುರಿತು ಅವರು ಉಪನ್ಯಾಸ ನೀಡಿದರು.

ಎಲ್ಲ ರಂಗಗಳಲ್ಲಿದ್ದಂತೆ ಯಕ್ಷಗಾನವೂ ಹಾಸ್ಯ ಪ್ರಸಂಗಗಳಿಂದ ಹೊರತಾಗಿಲ್ಲ. ಕಲಾವಿದರ ವಿನೋದ, ವಿರೋಧ ಭಾವಗಳು ಇಂಟರ್ನಲ್ವಾರ್ ಕೆಲವೊಮ್ಮೆ ಪ್ರಸಂಗಗಳಲ್ಲಿ ಹಾಸ್ಯ ಉಕ್ಕಿಸುವುದು ಮಾತ್ರವಲ್ಲ ಸಂದಿಗ್ಧತೆಗೂ ಕಾರಣವಾಗುತ್ತವೆ. ತನಗೆ ರಾಮಾಯಣ ಪ್ರಸಂಗದಲ್ಲಿ ಗುಹನಂತಹ ಸಣ್ಣ ಪಾತ್ರ ದೊರೆತದ್ದಕ್ಕೆ ರಾಮನೆದುರು ಗುಹ ಪಾತ್ರಧಾರಿ ಅಪ್ರಸ್ತುತ ವಾದಕ್ಕಿಳಿದು ಪ್ರಸಂಗ ಹಿಗ್ಗಿಸಿ ಪೇಚಿಗೆ ಸಿಕ್ಕಿಸಿದ್ದು, ಕೃಷ್ಣ ಸಂಧಾನದಲ್ಲಿ ಕೌರವ ಪಾಂಡವರಿಗೆ ಭೂಮಿ ಕೊಡಲಾರೆ ಎಂದು ಹಠಕ್ಕೆ ಬಿದ್ದ ತಾಳಮದ್ದಳೆ ಕೂಟದಲ್ಲಿದ್ದ ಪ್ರೇಕ್ಷಕನೋರ್ವ ಅವ ಕೊಡದಿದ್ದರೆ ಹೋಗಲಿ ನನಗೆ ಎಸ್ಟೇಟಿದೆ.. ನಾನು ಕೊಡ್ತೇನೆ ಎಂದು ಪಾತ್ರಗಳ ಜತೆ ತನ್ಮಯತೆಯಿಂದ ಪ್ರತಿಕ್ರಿಯೆ ನೀಡಿದ್ದು, ಅರ್ಥದಾರಿಯ ಅಪ್ರಸ್ತುತ ವಿವರಣೆ ಕೇಳಿ ಭಾಗವತರು ಇದು ನಮ್ಮ ಪ್ರಸಂಗದಲ್ಲಿಲ್ಲ ಎಂದದ್ದು, ಸಹಕಲಾವಿದರ ರಂಗ ಪ್ರವೇಶದಲ್ಲಿ ಎಡವಿದ್ದನ್ನೂ ಹಿರಿಯ ಕಲಾವಿದರು ಮಾತಿನಲ್ಲೇ ಸಮರ್ಥಿಸಿಕೊಂಡು ಸರಿದೂಗಿಸಿದ್ದು ಹೀಗೆ ಹಲವು ಉದಾಹರಣೆಗಳಿಂದ ಜೋಶಿ ಸಭೆಯಲ್ಲಿ ಹಾಸ್ಯದ ಹೊನಲು ಹರಿಸಿದರು.
ಎಂ.ಸಿ.ಎಸ್.ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಮಾಜ ಮಂದಿರ ಸಭಾದ ಉಪಾಧ್ಯಕ್ಷ ಶಿರ್ತಾಡಿ ಸಂಪತ್ ಡಿ.ಸಾಮ್ರಾಜ್ಯ ಸ್ವಾಗತಿಸಿ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಕೆ.ಆರ್. ಪಂಡಿತ್ ವಂದಿಸಿದರು. ಪತ್ರಕರ್ತ ಧನಂಜಯ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿದರು.