ಬಂಟ್ವಾಳ:ಕಳೆದ ಒಂದು ತಿಂಗಳ ಹಿಂದೆ ನಡೆದ ಇಲ್ಲಿನ ಸಂಗಬೆಟ್ಟು ತಾಲ್ಲೂಕು ಪಂಚಾಯಿತಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಜಾತಿ ಓಲೈಕೆ ಮತ್ತು ಸುಳ್ಳು ಕರಪತ್ರ ವಿತರಣೆ ಮತ್ತಿತರ ಅಪಪ್ರಚಾರದ ನಡುವೆಯೂ ಬಿಜೆಪಿಗೆ ಗೆಲುವು ದೊರೆತಿರುವುದು ಕಾಂಗ್ರೆಸ್ಸಿನ ದುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಹೇಳಿದ್ದಾರೆ. ಇಲ್ಲಿನ ಸಿದ್ಧಕಟ್ಟೆಯಲ್ಲಿ ಸಂಗಬೆಟ್ಟು ತಾಲ್ಲೂಕು ಪಂಚಾಯಿತಿ ಉಪ ಚುನಾವಣೆ ಗೆಲುವಿನ ಹಿನ್ನೆಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ವಿಜೇತ ಸದಸ್ಯ ಪ್ರಭಾಕರ ಪ್ರಭು ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ರೂ 1,413 ಕೋಟಿ ಸಂಸದರ ಅನುದಾನ: ಹರಿಕೃಷ್ಣ ಬಂಟ್ವಾಳ್ಜಿಲ್ಲೆಯಲ್ಲಿ ಕಳೆದ 4 ವರ್ಷಗಳ ಅವಧಿಯಲ್ಲಿ ಸಂಸದ ನಳಿನ್ ಕುಮಾರ್ ಅವರು ಒಟ್ಟು ರೂ 15,125 ಕೋಟಿ ಮೊತ್ತದ ಅನುದಾನ ನೀಡಿದ್ದು, ಈ ಪೈಕಿ ಬಂಟ್ವಾಳ ಕ್ಷೇತ್ರಕ್ಕೆ ಒಟ್ಟು ರೂ 1,413 ಕೋಟಿ ಅನುದಾನ ದೊರೆತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಹೇಳಿದರು.ದೇಶದಲ್ಲಿ ನೆಹರೂ, ದೇವೇಗೌಡ, ಮುಲಯಾಂ ಸಿಂಗ್, ಲಾಲೂ ಪ್ರಸಾದ್, ಮಾಯಾವತಿ, ಮಮತಾ ಬ್ಯಾನರ್ಜಿ ಮತ್ತಿತರ ಕುಟುಂಬ ರಾಜಕಾರಣಿಗಳು ಜಗತ್ತಿನ ಬಲಿಷ್ಟ ಕುಟುಂಬ ರಾಜಕೀಯ.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಒಟ್ಟಾಗಿರುವುದು ನಾಚಿಕೆಗೇಡು ಎಂದರು. ಕಳೆದ ಅವಧಿಯಲ್ಲಿ ಕೇವಲ ಪ್ರವಾಸಕ್ಕಾಗಿ ರೂ 1.52 ಕೋಟಿ ಮೊತ್ತದ ಸರ್ಕಾರಿ ಹಣ ವಿನಿಯೋಗಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಅವರು ರೌಡಿಶೀಟರ್, ಹೊಗಳು ಭಟ್ಟರು, ಮರ ಮತ್ತು ಮರಳು ದಂಧೆಕೋರರನ್ನು ಮಾತ್ರ ಅಭಿವೃದ್ಧಿಪಡಿಸುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ಸಿನ ಅವನತಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.
ಹತ್ಯೆ ರಾಜಕೀಯ:
ಸಿದ್ಧಕಟ್ಟೆಯಲ್ಲಿ ಭಾರತಿ ಕೊಲೆ ಬಗ್ಗೆ ಕರಪತ್ರ ಹಂಚಿದ ಕಾಂಗ್ರೆಸ್ಸಿಗರು ಪುಣ್ಯಕ್ಷೇತ್ರದಲ್ಲಿ ಪ್ರಮಾಣಕ್ಕೆ ಸಿದ್ಧರಾಗಬೇಕು. ಕಳೆದ 18ವರ್ಷಗಳ ಹಿಂದೆ ಕಾವಳಮೂಡೂರು ಕಂಬಳ ಸಂದರ್ಭದಲ್ಲಿ ನಡೆದ ದಲಿತ ಮುಖಂಡ ಶಿವಪ್ಪ ಬಂಗೇರ ಹತ್ಯೆ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ …? ಎಂದು ಅವರು ಪ್ರಶ್ನಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ಎಂ.ತುಂಗಪ್ಪ ಬಂಗೇರ, ಬಿಜೆಪಿ ಮುಖಂಡ ಕೆ.ಪಿ.ಜಗದೀಶ ಅಧಿಕಾರಿ ಮತ್ತಿತರರು ಮಾತನಾಡಿದರು.ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ ಪೂಜಾರಿ, ಪ್ರಮುಖರಾದ ದಿನೇಶ ಅಮ್ಟೂರು, ವಿಜಯ ರೈ ಆಲದಪದವು, ಉಮೇಶ ಗೌಡ ಮಂಚಕಲ್ಲು ಮತ್ತಿತರರು ಇದ್ದರು.
ರತ್ನಕುಮಾರ್ ಚೌಟ ಸ್ವಾಗತಿಸಿ, ರಾಜೇಶ ಶೆಟ್ಟಿ ವಂದಿಸಿದರು. ಸಂದೇಶ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.