ಉಡುಪಿ: ಉಡುಪಿ ಜಿಲ್ಲಾ ವ್ಯಾಪ್ತಿಯ ಬಿಲ್ಲವ ಸಂಘಟನೆಗಳನ್ನು ಒಂದೇ ಸೂರಿನಡಿ ಸಂಘಟಿಸಿ, ಬಿಲ್ಲವ ಸಮಾಜದ ಶ್ರೇಯಾಭಿವೃದ್ಧಿಗಾಗಿ ಚಿಂತನ ಮಂಥನ ನಡೆಸಿ, ಸರಕಾರದಿಂದ ದೊರೆಯ ಬಹುದಾದ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದ ಉಡುಪಿ ಜಿಲ್ಲಾ ಮಟ್ಟದ ಬಿಲ್ಲಾ ಮಹಾ ಸಮಾವೇಶ-2019ನ್ನು ಬಿಲ್ಲವ ಮುಂದಾಳು ಬಿ.ಎನ್. ಶಂಕರ ಪೂಜಾರಿಯವರ ಸಾರಥ್ಯದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ(ರಿ) ಇವರ ನೇತೃತ್ವದಲ್ಲಿ ಹಾಗೂ ಜಿಲ್ಲೆಯ ಸಮಸ್ತ ಬಿಲ್ಲವ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಫೆ.3ರ ರವಿವಾರ ಮಧ್ಯಾಹ್ನ 2ರಿಂದ ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಆಯೋಜಿಸಲು ನಿರ್ಣಯಿಸಲಾಗಿದೆ.IMG-20190125-WA0012 (1)

ಈ ಬಗ್ಗೆ ಉಡುಪಿ ಜಿಲ್ಲಾ ವ್ಯಾಪ್ತಿಯ ಉಡುಪಿ, ಕಾರ್ಕಳ, ಕುಂದಾಪುರ, ಕಾಪು, ಬ್ರಹ್ಮಾವರ, ಹೆಬ್ರಿ, ಬೈಂದೂರು ತಾಲೂಕಿನಾದ್ಯಂತ ಪಸರಿಸಿರುವ ಬಿಲ್ಲವ ಸಂಘಗಳು ಹಾಗೂ ಇತರ ಬಿಲ್ಲವ ಸಂಘಟನೆಗಳ ಪ್ರಮುಖರ ಸಮಾಲೋಚನಾ ಸಭೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಎಲ್ಲ ಸಭೆಗಳಲ್ಲಿ ಮಹಾ ಸಮ್ಮೇಳನದ ಬಗ್ಗೆ ಪೂರಕ ಪ್ರತಿಕ್ರಿಯೆ, ಉತ್ತಮ ಪ್ರೇರಣೆ, ಬೆಂಬಲ, ಸಹಕಾರ ವ್ಯಕ್ತವಾಗುತ್ತಿದೆ. ಬಿಲ್ಲವ ಜನಾಂಗ ಮುಂದಿನ ಪೀಳಿಗೆಯ ಬಗ್ಗೆ ಚಿಂತನೆ ನಡೆಸಲು ಇಂದು ಸಕಾಲ. ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಬಿಲ್ಲವ ಸಮಾಜದ ರಾಜಕೀಯ ಹಾಗೂ ಸಮಾಜಿಕ ಮುಖಂಡರ ಉಪಸ್ಥಿತಿಯಲ್ಲಿ ಈ `ಬಿಲ್ಲವ ಮಹಾ ಸಮಾವೇಶ 2019′ ಸಂಪನ್ನಗೊಳ್ಳಲಿದೆ.
ಬೇಡಿಕೆಗಳು:
-ಸರಕಾರವನ್ನು ಆಗ್ರಹಿಸಿ ಪಡೆಯಬಹುದಾದ ಪ್ರವರ್ಗ 2ಎಯಿಂದ ಪ್ರವರ್ಗ 1ರ ಮೀಸಲಾತಿ ಸೌಲಭ್ಯ
– ಬಿಲ್ಲವ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಬ್ರಹ್ಮಶ್ರೀ ನಾರಾಯಣ ಗುರು ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ, ಬಿಲ್ಲವ ಜನಾಂಗದ ಕಸುಬುಗಳಾದ ಕೃಷಿ ಹಾಗೂ ಇತರ ಸ್ವ ಉದ್ಯೋಗ ಚಟುವಟಿಕೆಗಳ ಬಗ್ಗೆ ಬಡ್ಡಿ ರಹಿತ ಸಾಲ ಸೌಲಭ್ಯ,
– ಶ್ರೀ ಬ್ರಹ್ಮಬೈದೆರ್‍ಗಳ ಗರೊಡಿಗಳ ಅರ್ಚಕರಿಗೆ ಮಾಶಾಸನ ಸೌಲಭ್ಯ ಹಾಗೂ ಗರೋಡಿಗಳ ಪಹಣಿ ಪತ್ರವನ್ನು ಗರೋಡಿಗಳ ಹೆಸರಿಗೆ ಮಾರ್ಪಾಡು…

ಹೀಗೆ ಹಲವು ಸೌಲಭ್ಯಗಳನ್ನು ಪಡೆಯುವ ಬಗ್ಗೆ ಈ ಸಮ್ಮೇಳನದಲ್ಲಿ ಸರಕಾರಕ್ಕೆ ಸೂಕ್ತ ಬೇಡಿಕೆಗಳನ್ನು ಸಲ್ಲಿಸಲಿದೆ. ಈ ಬೇಡಿಕೆಗಳ ಈಡೇರಿಕೆಗೆ ಯತ್ನಿಸುವುದು ಇದರ ಉದ್ದೇಶ.

ಈ ಸಮ್ಮೇಳನವನ್ನು `ನಭೋತೋ’ ಎನ್ನುವ ರೀತಿಯಲ್ಲಿ ಆಯೋಜಿಸಿ ಐತಿಹಾಸಿಕವಾಗಿಸುವ ನೆಲೆಯಲ್ಲಿ ಸುಮಾರು 50,000ಕ್ಕೂ ಮಿಕ್ಕಿ ಬಿಲ್ಲವ ಸಮಾಜದ ಬಾಂಧವರನ್ನು ಒಗ್ಗೂಡಿಸುವ ಮಹತ್ತರ ಹೊಣೆ ಬಿಲ್ಲವರ ಮೇಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮದ ಪ್ರತೀ ಬಿಲ್ಲವ ಸಂಘಟನೆಗಳಿಂದ ಗರಿಷ್ಠ ಸಂಖ್ಯೆಯ ಬಾಂಧವರು ಸಮಾವೇಶದಲ್ಲಿ ಭಾಗವಹಿಸುಂತೆ ಬಿಲ್ಲವ ಸಮಾಜಾ ಸೇವಾ ಸಂಘ (ರಿ.) ಬ್ರಹ್ಮಾವರ ಇದರ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ(ಸಮಾವೇಶದ ಅಧ್ಯಕ್ಷರು, ಉಡುಪಿ ಬಿಲ್ಲವ ಯುವ ವೇದಿಕೆ (ರಿ.) ಉಡುಪಿ ಇದರ ಅಚ್ಯುತ ಅಮೀನ್ ಕಲ್ಮಾಡಿ(ಪ್ರಧಾನ ಸಂಚಾಲಕರು), ಹಾಗೂ ಉಡುಪಿ ಬಿಲ್ಲವ ಯುವ ವೇದಿಕೆ (ರಿ.) ಉಡುಪಿ ಇದರ ಜಿಲ್ಲಾಧ್ಯಕ್ಷರಾದ ಪ್ರವೀಣ್ ಎಂ. ಪೂಜಾರಿ(ಕಾರ್ಯಾಧ್ಯಕ್ಷರು) ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರ್ಥಿಕ ಧನಸಹಾಯ ನೀಡುವವರು ಭಾರತ್ ಬ್ಯಾಂಕ್, ಉಡುಪಿ ಶಾಖೆ, ಎಸ್‍ಬಿ ಖಾತೆ: 003210500057373, ಐಎಫ್‍ಎಸ್‍ಸಿ: ಬಿಸಿಬಿಎಂ0000033 ಇದಕ್ಕೆ ಕಳಸಿದರೆ ಕೃತಜ್ಞತಾ ಪೂರಕವಾಗಿ ಸ್ವೀಕರಿಸಲಾಗುವುದು ಎಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

By suddi9

Leave a Reply

Your email address will not be published. Required fields are marked *