ಬಂಟ್ವಾಳ:ಪ್ರತೀ ಗ್ರಾಮ ಪಂಚಾಯಿತಿ ಮತ್ತಿತರ ಸಾರ್ವಜನಿಕ ಸಂಸ್ಥೆಗಳಿಗೆ ಅತ್ಯುತ್ತಮ ಕಟ್ಟಡ ಮತ್ತು ಮೂಲಭೂತ ಸೌಕರ್ಯ ಮಾತ್ರ ಇದ್ದರೆ ಸಾಲದು. ವಿವಿಧ ಸರ್ಕಾರಿ ಸೌಲಭ್ಯಕ್ಕಾಗಿ ಅಲ್ಲಿಗೆ ಬರುವ ನಾಗರಿಕರಿಗೆ ಸೂಕ್ತ ಮಾರ್ಗದರ್ಶನ ಸಹಿತ ತ್ವರಿತ ಸೇವೆ ನೀಡುವ ಪ್ರಾಮಾಣಿಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಹಿತ ದೂರಾಲೋಚನೆಯೂ ಅಗತ್ಯವಿದೆ ಎಂದು ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಹೇಳಿದ್ದಾರೆ.
ತಾಲ್ಲೂಕಿನ ಇರ್ವತ್ತೂರು ಗ್ರಾಮ ಪಂಚಾಯಿತಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ರೂ 18ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ‘ಭಾರತ್ ನಿರ್ಮಾಣ್ ರಾಜೀವ ಗಾಂಧಿ ಸೇವಾ ಕೇಂದ್ರ’ ಕಟ್ಟಡವನ್ನು ಶನಿವಾರ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಪ್ರತಿಯೊಂದು ಗ್ರಾಮ ಮತ್ತು ನಗರ ಪ್ರದೇಶದಲ್ಲಿ ದೂರಾಲೋಚನೆ ಮೂಲಕ ಮುನ್ನಡೆದಾಗ ಮಾತ್ರ ಒಟ್ಟು ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದಕ್ಕಾಗಿ ಪರಸ್ಪರ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣವೂ ಅಗತ್ಯವಿದೆ.
‘ಅನಾರೋಗ್ಯಪೀಡಿತ ವ್ಯಕ್ತಿಯೊಬ್ಬರಿಗೆ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆ ಸೌಲಭ್ಯ ಒದಗಿಸಲು ನನ್ನ ವಿನಂತಿ ಮೇರೆಗೆ ಜಿಲ್ಲೆಯಲ್ಲಿ ಮಾನವೀಯ ಗುಣ ಹೊಂದಿರುವ ಅಧಿಕಾರಿಯೊಬ್ಬರು ಸ್ವತಃ ಆಸ್ಪತ್ರೆಗೆ ಬಂದು ರೋಗಿಗೆ ಆಧಾರ್ ಕಾರ್ಡ್ ಸಿದ್ಧಪಡಿಸಿ ವಿತರಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಇದ್ದಾಗ ಸಾಮಾಜಿಕ ಸ್ಪಂದನೆ ಸುಲಭವಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿ, ಜನಸಾಮಾನ್ಯರಿಗೆ ಸರ್ಕಾರಿ ಸೌಲಭ್ಯ ಸಿಗಲು ಅಧಿಕಾರಿಗಳು ಕಾನೂನಿನ ಜೊತೆಗೆ ಮಾನವೀಯತೆ ಮೆರೆಯಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ, ಸದಸ್ಯ ರಮೇಶ ಕುಡ್ಮೇರು, ಸಹಾಯಕ ನಿರ್ದೇಶಕ ಪ್ರಶಾಂತ್ ಜೈನ್, ಕಿರಿಯ ಎಂಜಿನಿಯರ್ ಕೃಷ್ಣ ಎಂ. ಮತ್ತಿತರರು ಇದ್ದರು.
ಇದೇ ವೇಳೆ ಗುತ್ತಿಗೆದಾರ ದಿನೇಶ್ ಶೆಟ್ಟಿ ಹರ್ಕಾಡಿ, ಗ್ರಾಮಕರಣಿಕ ಕುಮಾರ್, ಪಿಡಿಒ ಗಣೇಶ ಶೆಟ್ಟಿಗಾರ್ ಇವರನ್ನು ಸನ್ಮಾನಿಸಲಾಯಿತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್. ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಶಂಕರ ಶೆಟ್ಟಿ ವಂದಿಸಿದರು. ಮಂಜು ವಿಟ್ಲ ಮತ್ತು ಭರತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.