ಬಂಟ್ವಾಳ : ದ.ಕ.ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಂಟ್ವಾಳ ವಿಧಾನ ಕ್ಷೇತ್ರದಲ್ಲಿ ಶೇ. 80.31 ರಷ್ಟು ಮತದಾನವಾಗಿದೆ ಎಂದು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮಹೇಶ್ ತಿಳಿಸಿದ್ದಾರೆ. ಮೊಡಂಕಾಪು ಮಸ್ಟರಿಂಗ್ ಕೇಂದ್ರದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಬಂಟ್ವಾಳ ಕ್ಷೇತ್ರ್ ೫ ಕಡೆಗಳಲ್ಲಿ ಮತಯಂತ್ರದಲ್ಲಿ ತಾಂತ್ರಿಕ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಕೆಲಹೊತ್ತು ಮತದಾನ ಪ್ರಕ್ರಿಯೆ ವಿಳಂಬವಾಗಿತ್ತು. ಉಳಿದಂತೆ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ ಎಂದರು.ಕ್ಷೇತ್ರದಲ್ಲಿರುವ ಮತಗಟ್ಟೆ ಸಂಖ್ಯೆ ೨೧ರ ಮೂಡುಪಡುಕೋಡಿ, ೭೫ರ ಕಾವಳಪಡೂರು ಮಧ್ವ, ೫೨ರ ನಲ್ಕೆಮಾರು, ೨೪೪ರ ಕನ್ಯಾನ ಬಂಡಿತ್ತಡ್ಕ, ೨೧೧ರ ನೇರಳಕಟ್ಟೆ ಮತಗಟ್ಟೆಗಳಲ್ಲಿ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ತಕ್ಷಣ ಅಲ್ಲಿಗೆ ಬದಲಿ ಮತಯಂತ್ರದ ವ್ಯವಸ್ಥೆಗೊಳಿಸಲಾಗಿದೆ. ಕ್ಷೇತ್ರದ ಎಲ್ಲಿಯೂ ನಕಲಿ ಮತದಾನದ ಪ್ರಕರಣಗಳು ದಾಖಲಾಗಿಲ್ಲ ಎಂದು ಚುನಾವಣಾಧಿಕಾರಿ ಮಹೇಶ್ ತಿಳಿಸಿದ್ದಾರೆ.

IMG-20190418-WA0057

೨೪೮ ಮತಗಟ್ಟೆಗಳಲ್ಲಿ ಒಂದು ಸಾವಿರಕ್ಕಿಂತ ಹೆಚ್ಚಿನ ಮತದಾರರಿದ್ದ ಕಡೆಗಳಲ್ಲಿ ಹೆಚ್ಚುವರಿ ಸಿಬಂದಿಯನ್ನು ಬಳಸಲಾಗಿತ್ತು. ೨೧ ಸೆಕ್ಟರ್ ಅಧಿಕಾರಿಗಳು, ಪೊಲೀಸ್ ಸಿಬಂದಿ ಸೇರಿದಂತೆ ಎಲ್ಲರೂ ಶಾಂತಿಯುತ ಚುನಾವಣೆಗೆ ಸಹಕಾರ ನೀಡಿದ್ದಾರೆ ಅವರೆಲ್ಲರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಭದ್ರತೆಯ ದೃಷ್ಟಿಯಿಂದ ೧೫ ಕಡೆಗಳಲ್ಲಿ ವೆಬ್ ಕಾಸ್ಟಿಂಗ್, ೧೫ ಕಡೆ ವೀಡಿಯೋ ರೆಕಾರ್ಡಿಂಗ್, ೩೫ ಕಡೆ ಸೂಕ್ಷ್ಮ ನಿಗಾ ವಹಿಸಲಾಗಿತ್ತು. ಜಿ.ಪಂ.ಸಿಇಓ ಡಾ.ಸೆಲ್ವಮಣಿ ಅವರು ಮೊಡಂಕಾಪಿನ ಮಸ್ಟರಿಂಗ್ ಕೇಂದ್ರ ಸೇರಿದಂತೆ ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಿದ್ದಾರೆ. ಎಲ್ಲಾ ಯಂತ್ರಗಳ ಪರಿಶೀಲನೆಯ ಬಳಿಕ ರಾಜಕೀಯ ಪಕ್ಷಗಳ ಸಮ್ಮಖದಲ್ಲಿಯೇ ಸುರತ್ಕಲ್ ಎನ್.ಐ.ಟಿ.ಕೆ.ಯ ಭದ್ರತಾ ಕೊಠಡಿಗೆ ಸಾಗಿಸಲಾಗುತ್ತದೆ. ಎಂದು ಎಆರ್ ಒ ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸಣ್ಣರಂಗಯ್ಯ, ತಾ.ಪಂ.ಇಒ ರಾಜಣ್ಣ ಉಪಸ್ಥಿತರಿದ್ದರು. 2014ರ ಲೋಕಸಭಾ ಚುನಾವಣೆಯನ್ನು ಹೋಲಿಸಿದರೆ ಬಂಟ್ವಾಳ ಕ್ಷೇತ್ರದಲ್ಲಿ ಕೊಂಚ ಕಡಿಮೆಯೇ ಮತದಾನವಾಗಿದೆ.ಅಂದು ಶೇ. 80.52 ಮತದಾನವಾಗಿದ್ದರೆ ,ಈ ಬಾರಿ ಶೇ. 80.31 ರಷ್ಟು ಮತದಾನವಾಗಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.82 ರಷ್ಟು ಮತದಾನವಾಗಿತ್ತು. ಕೃತಜ್ಣತೆ: ಶಾಂತಯುತ ಮತದಾನಕ್ಕೆ ಸಹಕರಿಸಿದ ಎಲ್ಲಾ ಮತದಾರರು,ಪಕ್ಷದ ಮುಖಂಡರು,ಕಾರ್ಯಕರ್ತರು ಹಾಗೂ ಅಧಿಕಾರಿವರ್ಗಕ್ಕೆ ಶಾಸಕ ಯು.ರಾಜೇಶ್ ನಾಯ್ಕ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.ಹಾಗೆಯೇ ಮಾಜಿ ಸಚಿವ ರಮಾನಾಥ ರೈ ಅವರು ತಮ್ಮ ಪಕ್ಷದ ಕಾರ್ಯಕರ್ತರು,ಮುಖಂಡರು,ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ

By suddi9

Leave a Reply

Your email address will not be published. Required fields are marked *