ಬಂಟ್ವಾಳ: ತಾಲೂಕಿನ ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಕಾರಿಂಜೇಶ್ವರ ಕ್ಷೇತ್ರದ ಪವಿತ್ರ ತೀರ್ಥ ಸ್ನಾನದ ಕೆರೆಯ ಹೂಳೆತ್ತುವ ನೆಪದಲ್ಲಿ ಈ ಕೆರೆಯ ನೀರನ್ನು ಹೆದ್ದಾರಿ ರಸ್ತೆ ಕಾಮಗಾರಿಗೆ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿಗೆ ಹಾಹಾಕಾರ ವ್ಯಕ್ತವಾಗಿರುವ ಈ ಕಾಲಘಟ್ಟದಲ್ಲಿ ದೇವಳದ ತೀರ್ಥಸ್ನಾನದ ಕೆರೆಯ ನೀರನ್ನು ರಸ್ತೆಗೆ ಚೆಲ್ಲಿ ಪೋಲು ಮಾಡುತ್ತಿರುವುದು ಸ್ಥಳೀಯ ಭಕ್ತ ಜನರಲ್ಲಿ ಆಕ್ರೋಶವನ್ನು ಮೂಡಿಸಿದೆ. ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆ ಯವರೆಗೆ ನಡೆಯುವ ಚತುಷ್ಪತ ಕಾಮಗಾರಿ ಪ್ರಗತಿಯಲ್ಲಿದ್ದು, ಕಾರಿಂಜೇಶ್ವರ ದೇವಳದ ಗದಾ ತೀರ್ಥದ ನೀರನ್ನು ಕಾಮಗಾರಿಯಗುತ್ತಿಗೆ ವಹಿಸಿರುವ ಸಂಸ್ಥೆ ಬಳಸಿ ದುರ್ಬಳಕೆ ಮಾಡುತ್ತಿದೆ ಎಂಬುದು ಸ್ಥಳೀಯ ಭಕ್ತ ಜನರ ಆರೋಪವಾಗಿದ್ದು,ಪರಿಣಾಮ ಈ ಕೆರೆಯಲ್ಲಿ ನೀರು ಬರಿದಾಗುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ. 
ಈ ದೇವಸ್ಥಾನ ಹಿಂದೂ ಧಾರ್ಮಿಕ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು,ವರ್ಷದಲ್ಲಿ ಆಟಿ ಅಮಾವಾಸೆ ಸಹಿತ ಎರಡು ಬಾರಿ ಕಾರಿಂಜ ಕ್ಷೇತ್ರದ ಈ ಗದಾತೀರ್ಥಸ್ನಾನದ ಕೆರೆಯಲ್ಲಿ ಭಕ್ತರು ಮಿಂದುಪುನೀತರಾಗುತ್ತಾರೆ. ಅಂತಹ ಪವಿತ್ರಕೆರೆಯ ನೀರನ್ನು ಪಂಪ್ ಬಳಸಿ ಮೇಲಕ್ಕೆತ್ತಿ ಟ್ಯಾಂಕರ್ ಮೂಲಕ ಸಾಗಿಸಲಾಗುತ್ತಿದೆ.ಇದಕ್ಕೆ ಸ್ಥಳೀಯ ಪಂಚಾಯತ್ ಆಗಲೀ,ದೇವಳದ ವ್ಯವಸ್ಥಾಪನಾ ಸಮಿತಿಯಿಂದ ಲಿಖಿತ ಅನುಮತಿ ಇಲ್ಲವೆನ್ನಲಾಗಿದ್ದು, ಇವರ ಮೌಖಿಕ ಸೂಚನೆಯ ಮೇರೆಗೆ ಅನಧಿಕೃತವಾಗಿ ನೀರನ್ನು ಸಾಗಿಸಲಾಗುತ್ತಿದೆ ಎಂದು ಅಪಾದಿಸಲಾಗಿದೆ.
ಶೀಘ್ರದಲ್ಲಿ ಕೆರೆಯ ಹೂಳೆತ್ತುವ ಕಾರ್ಯ ನಡೆಯಲಿದ್ದು, ಈ ಹಿನ್ನಲೆಯಲ್ಲಿ ನೀರನ್ನು ಖಾಲಿ ಮಾಡಲಾಗುತ್ತಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿಯ ಮತ್ತು ಪಂಚಾಯತ್ ನ ಸಮಾಜಾಯಿಷಿಕೆಯಾಗಿದೆ. ಆದರೆ ಸ್ಥಳೀಯರು ಇದನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲದಿದ್ದು, ತಮ್ಮದೇ ಆದ ರೀತಿಯಲ್ಲಿ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.ಈಗಾಗಲೇ 100 ಕ್ಕು ಅಧಿಕವಾಗಿ ಟ್ಯಾಂಕರ್ ನಲ್ಲಿ ಸಾಗಿಸಲಾಗಿದ್ದು,ಗದಾ ತೀರ್ಥದ ಕೆರೆಯು ಪಾವಿತ್ರ್ಯತೆಗೆ ದಕ್ಕೆ ಬರಬಹುದೆಂಬ ಭೀತಿ ಸ್ಥಳೀಯ ಭಕ್ತರನ್ನು ಅವರಿಸಿದೆ.
ಮಳೆಯಾಗಲಿ,ಬೇಸಿಗೆಕಾಲದಲ್ಲಾಗಲಿ ಈ ಕೆರೆಯ ನೀರು ಬತ್ತಿರುವ ಉದಾಹರಣೆ ಇಲ್ಲ ,ಇದೀಗ ಅಂತಹ ಪಾವಿತ್ರ್ಯವುಳ್ಳ ಈ ಕೆರೆಯ ನೀರನ್ನು ದುರ್ಬಳಕೆಮಾಡುತ್ತಿದ್ದರೂ ದೇವಳದ ಆಡಳಿತ ಸಮಿತಿ,ಸ್ಥಳೀಯ ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ಮೌನಕ್ಕೆ ಶರಣಾಗಿರುವುದು ಸ್ಥಳೀಯರ ಅನುಮಾನಕ್ಕೆ ಪುಷ್ಠಿ ನೀಡಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಸ್ಥಳೀಯರು ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿದ್ದಾರೆ. ಹಾಗೆಯೇ ಶಾಸಕ ರಾಜೇಶ್ ನಾಯ್ಕ್ ಅವರ ಗಮನಕ್ಕು ತಂದಿದ್ದಾರೆ .