ಮೂಡುಬಿದಿರೆಯಲ್ಲಿ ಒಳಚರಂಡಿ ಯೋಜನೆ ಇಲ್ಲದೆ ತ್ಯಾಜ್ಯ ನೀರು ಕೃಷಿ ಗದ್ದೆಗಳಿಗೆ ಹರಿದು ಬೆಳೆ ಹಾನಿಯಾಗುತ್ತಿದೆ. ಮಳೆಗಾಲ ಮುಗಿಯುವುದರೊಳಗೆ ಒಳಚರಂಡಿ ಯೋಜನೆ ಅನುಷ್ಠಾನದ ಬಗ್ಗೆ ಸರಿಯಾದ ಕ್ರಮವನ್ನು ಕೈಗೊಳ್ಳದೇ ಇದ್ದಲ್ಲಿ ಪುರಸಭೆಗೆ ಮುತ್ತಿಗೆ ಹಾಕಲಾಗುವುದು. ನವಿಲುಗಳ ಹಾವಳಿಯನ್ನು ನಿಯಂತ್ರಿಸಲು ನವಿಲು ಪಾರ್ಕ್ ನಿರ್ಮಿಸಬೇಕು ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ರವಿಕಿರಣ್ ಪುಣಚ ಆಗ್ರಹಿಸಿದರು.

ತಹಸೀಲ್ದಾರ್ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಹಸಿರುಸೇನೆ ಆಶ್ರಯದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮೂaಡುಬಿದಿರೆ ರೈತರ ಸಮಸ್ಯೆಗಳ ಬಗ್ಗೆ ಅರಿವಿದ್ದರೂ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ವಿಧಾನಸಭೆಯಲ್ಲಿ ಯಾಕೆ ಮಾತನಾಡುತ್ತಿಲ್ಲ ಎಂದು ಕ್ಷೇತ್ರದ ಜನತೆಗೆ ಉತ್ತರ ನೀಡಬೇಕೆಂದುರೈತರ ಬೆಳೆ ಸಾಲ ಮನ್ನಾ ಆದೇಶ ಹೊರಡಿಸಿದ ಸರ್ಕಾರ ಅದನ್ನು ಇನ್ನೂ ಸಮರ್ಪಕವಾಗಿ ಅನುಷ್ಠಾನಗೊಳಿಸಲಿಲ್ಲ. ಜುಲೈ 30ರ ಒಳಗೆ ಎಲ್ಲಾ ರೈತರ ಬೆಳೆ ಸಾಲದ ಮನ್ನಾ ಹಣವನ್ನು ಅವರ ಬ್ಯಾಂಕ್ ಖಾತೆಗೆ ಪಾವತಿಸದಿದ್ದಲ್ಲಿ ನಮ್ಮ ಹೋರಾಟದ ಸ್ವರೂಪವನ್ನು ಬದಲಾಯಿಸಬೇಕಾಗುತ್ತದೆ ಎಂದುಎಚ್ಚರಿಸಿದರು.
ರೈತರ ಸಮಸ್ಯೆಗಳಿಗೆ ಸ್ಪಂದಿಸದ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ಹೊರಟಿದ್ದಾರೆ. ಮಳೆಗಾಲ ಆರಂಭವಾದ ಬಳಿಕ ಯಡ್ಯೂರಪ್ಪ ಬರ ಅಧ್ಯಯನ ಶುರು ಮಾಡಿದ್ದಾರೆ. ಇವರಿಗೆ ನಾಚಿಕೆಯಾಗಬೇಕು. ಇಂತಹ ರಾಜಕಾರಣದಿಂದಾಗಿ ಪ್ರಜಾಪ್ರಭುತ್ವದ ಕೊಲೆ ಆಗುತ್ತಿದೆ ಎಂದು ಆರೋಪಿಸಿದರು.
ಕೊಳೆರೋಗ, ಬರಗಾಲ ಇನ್ನಿತರ ಬೇರೆ ಬೇರೆ ಕಾರಣಗಳಿಂದ ಜಿಲ್ಲೆಯಲ್ಲಿ ಭತ್ತದ ಫಸಲು ಕುಂಠಿತವಾಗಿದೆ. ಆದ್ದರಿಂದ ಭತ್ತದ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮುಂಗಾರು ಕೃಷಿ ಆರಂಭದ ವೇಳೆ ಸರ್ಕಾರ ರೈತರ ಬ್ಯಾಂಕ್ ಖಾತೆಗೆ ರೂ ಮೂರು ಸಾವಿರ ಹಣವನ್ನು ಜಮೆ ಮಾಡಬೇಕು. ಕೊಳೆರೋಗದಿಂದ ಶೇ. 70ರಷ್ಟು ಬೆಳೆ ನಾಶವಾಗಿದ್ದು ಈ ಬಗ್ಗೆ ಸರ್ಕಾರದ ಬಳಿ ಅಧ್ಯಯನ ವರದಿ ಇದ್ದರೂ ಪರಿಹಾರ ಧನ ಮಂಜೂರು ಮಾಡದಿರುವುದಕ್ಕೆ ಅವರು ಆಕ್ಷೇಪ ಎತ್ತಿದರು.
ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯ ಮೊತ್ತವನ್ನು ರೂಪಾಯಿ ಆರು ಸಾವಿರದಿಂದ ಹನ್ನೆರಡು ಸಾವಿರಕ್ಕೆ ಏರಿಸಬೇಕು. ಹೈನುಗಾರಿಕೆ ರೈತರ ಉಪಕಸುಬಾಗಿರುವುದರಿಂದ ಪ್ರತಿ ಲೀಟರ್ ಹಾಲಿಗೆ ರೂ 50 ದರ ನಿಗದಿಪಡಿಸಿ ಅದರಲ್ಲಿ ರೂ 10 ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯ ಬಳಿಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಗೆ ಮೊದಲು ಕಲ್ಸಂಕದಿಂದ ತಹಸೀಲ್ದಾರ್ ಕಚೇರಿವರೆಗೆ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಮೀನ್, ರೈತ ಸಂಘ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ಲಿಯೊ ವಾಲ್ಟರ್ ನಝರತ್, ರೈತ ಮುಖಂಡರಾದ ಸುರೇಶ್ ಕುಮಾರ್, ಅಲ್ವಿನ್ ಮಿನೇಜಸ್, ರೋನಿ ಮೆಂಡೋನ್ಸಾ ಮತ್ತಿತರರು ಭಾಗವಹಿಸಿದರು.