ಬಂಟ್ವಾಳ: ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ  ಉಳ್ಳಾಲ ತಾಲೂಕಿಗೆ ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾ.ಪಂ.ವ್ಯಾಪ್ತಿ ಸೇರ್ಪಡೆಗೆ ಈ ಮೊದಲೇ ಆಕ್ಷೇಪ ದಾಖಲಿಸಿರುವ ಗ್ರಾ.ಪಂ.ನ ಆಡಳಿತ ಸಮಿತಿ ಇದರ ಬೆನ್ನಿಗೆ   ಪುದು , ಮೇರಮಜಲು ಕೊಡ್ಮನ್ , ತುಂಬೆ ಗ್ರಾಮಗಳನ್ನು ಸೇರ್ಪಡೆಗೂ ವಿರೋಧ ವ್ಯಕ್ತವಾಗಿದೆ.

IMfarangipete
ಪುದು ಜಿಪಂ ಸದಸ್ಯ ರವೀಂದ್ರ ಕಂಬಳಿ ಅವರನ್ನೊಳಗೊಂಡ ನಿಯೋಗ ಮಂಗಳವಾರ ಜಿಲ್ಲೆಗಾಗಮಿಸಿದ ಕರ್ನಾಟಕ ಸರಕಾರದ  ಕಂದಾಯ ಸಚಿವರಾದ ಆರ್. ವಿ. ದೇಶಪಾಂಡೆ ಯವರನ್ನು ಭೇಟಿಯಾಗಿ ನೂತನ ಉಳ್ಳಾಲ ತಾಲೂಕು ರಚನೆಯ ವೇಳೆ ಮೇಲೆ ಉಲ್ಲೇಖಿಸಿರುವ ಗ್ರಾಮಗಳ ಸೇರ್ಪಡೆಗೆ ಆಕ್ಷೇಪಣೆಯನ್ನು ಸಲ್ಲಿಸಿದ್ದಾರೆ.    ಈ ಸಂದರ್ಭ ಹಾಜರಿದ್ದ ಸ್ಥಳೀಯ ಶಾಸಕರು,ಜಿಲ್ಲಾ ಉಸ್ತುವಾರಿಸಚಿವ ಯು.ಟಿ.ಖಾದರ್ ಅವರಿಗೂ ಆಕ್ಷೇಪ ಪತ್ರದ ಪ್ರತಿಯನ್ನು ಸಲ್ಲಿಸಿದ್ದಾರೆ.   ನಿಯೋಗದಲ್ಲಿ ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ನಾಯ್ಗ , ಉಪಾಧ್ಯಕ್ಷೆ ಜಯಶ್ರೀ , ಪುದು ಪಂಚಾಯತ್ ಸದಸ್ಯ ಮನೋಜ್ ಆಚಾರ್ಯ ನಾಣ್ಯ ,  ಎ  ಪಿ ಎಂ ಸಿ ಸದಸ್ಯ ವಿಠ್ಠಲ್ ಸಾಲ್ಯಾನ್ ,  ದಿನೇಶ್ ಶೆಟ್ಟಿ ಕೊಟ್ಟಿಂಜ  ಈ ಭಾಗದ ಪ್ರಮುಖರಾದ ದಿನೇಶ್ ಶೆಟ್ಟಿ ಕೊಟ್ಟಿಂಜ, ಪ್ರವೀಣ್ ಶೆಟ್ಟಿ , ಅಶ್ರಫ್ ಫರಂಗಿಪೇಟೆ , ಸುರೇಶ ಶೆಟ್ಟಿ ಬರ್ಕೆ , ಸುಬ್ರಮಣ್ಯ ರಾವ್ , ಅಶ್ರಫ್ ಮಾರಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.   ಮನವಿಯಲ್ಲಿ ಏನೇನಿದೆ: ಪುದು,ಮೇರಮಜಲು,ಕೊಡ್ಮಾಣ್,ತುಂಬೆ ಗ್ರಾಮಗಳ ಸಹಿತ ಅಸುಪಾಸಿನ ಪ್ರದೇಶಗಳು ಹಲವು ವರ್ಷಗಳಿಂದ ಬಂಟ್ವಾಳತಾಲೂಕಿನ ಕೇಂದ್ರ ಸ್ಥಾನವಾದ ಬಿ.ಸಿ.ರೋಡಿನ ಅವಿಭಾಜ್ಯ ಅಂಗವಾಗಿದೆ. ಉಲ್ಲೇಖಿತ ಗ್ರಾಮಗಳ ಗ್ರಾಮಸ್ಥರ   ಕಂದಾಯ ವ್ಯವಹಾರ ಸಹಿತ ಇತರೆ ಸರಕಾರಿ ಕಚೇರಿಗಳಲ್ಲಿ ನಡೆಯುವ ಕೆಲಸ ಕಾರ್ಯಗಳು ಸಮೀಪದ ಬಿ.ಸಿ.ರೋಡಿನಲ್ಲಿ  ನಡೆದುಕೊಂಡು ಬರುತ್ತಿದೆ.ಒಂದು ವೇಳೆ ಹೊಸ ತಾಲೂಕು ರಚನೆಗಾಗಿ ಈ ಗ್ರಾಮಗಳನ್ನು ಸೇರಿಸಿಕೊಂಡರೆ ಇಲ್ಲಿನ ನಾಗರಿಕರು ತಮ್ಮ ಕಚೇರಿ ಕೆಲಸ ಕಾರ್ಯಕ್ಕೆ ನೇತ್ರಾವತಿ ನದಿಯನ್ನು ದಾಟಿ ಸುಮಾರು 35 ಕಿ.ಮೀ.ಗಿಂತಲೂ ಅಧಿಕವಾಗಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಹಾಗೆಯೇ ಬೌಗೋಳಿಕವಾಗಿಯೂ ಈ ಗ್ರಾಮಗಳು ಬಂಟ್ವಾಳ ತಾಲೂಕಿಗೆ ಕೇಂದ್ರಿಕೃತವಾಗಿದ್ದು,ಇಲ್ಲಿನ ನಾಗರಿಕರಿಗೂ ಅನುಕೂಲಕರವಾಗಿದೆ.ಹೊಸ ತಾಲೂಕು ರಚನೆಗೆ ಜನಸಂಖ್ಯೆಯ ಅವಶ್ಯಕತೆಯಿದೆ ಎಂಬ ಕಾರಣಕ್ಕಾಗಿ ಬಂಟ್ವಾಳ ತಾಲೂಕಿನಿಂದ ಪುದು,ಮೇರಮಜಲು,ಕೊಡ್ಮಾಣ್,ತುಂಬೆ ಗ್ರಾಮಗಳನ್ನು ಬೇರ್ಪಡಿಸಿ ಹೊಸ ತಾಲೂಕಿಗೆ ಸೇರಿಸಿದರೆ ಇಲ್ಲಿನ ನಾಗರಿಕರು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಹೊಸ ತಾಲೂಕಿನ ಅಗತ್ಯವಿದ್ದಲ್ಲಿ ಜನರಬೇಡಿಕೆ,ಅನಿವಾರ್ಯತೆಯನ್ನು ಗಮನಿಸಿಕೊಂಡು ಮುಂದಡಿಡಬೇಕಾಗಿದ್ದು,ಇಲ್ಲಿ ಉಲ್ಲೇಖಿಸಿರುವ ಗ್ರಾಮಗಳ ಗ್ರಾಮಸ್ಥರು ಯಾರು ಕೂಡ ಇಂತಹ ಬೇಡಿಕೆ,ಅನಿವಾರ್ಯತೆಯನ್ನು ಮುಂದಿಟ್ಟಿಲ್ಲ.ಹಾಗಾಗಿ ಹೊಸ ಉಳ್ಳಾಲ ತಾಲೂಕು ರಚನೆಯ ವೇಳೆ ಪುದು,ಮೇರಮಜಲು,ಕೊಡ್ಮಾಣ್ ,ತುಂಬೆ ಗ್ರಾಮಗಳ ಸೇರ್ಪಡೆಗೆ ಸ್ಪಷ್ಟವಾದ ವಿರೋಧವಿದ್ದು,ಈ ಗ್ರಾಮಗಳನ್ನು ಹೊಸ ತಾಲೂಕು ರಚನೆಯಿಂದ ಕೈ ಬಿಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಸಜೀಪನಡು ಗ್ರಾಮಸ್ಥರು ಪಂಚಾಯತ್ ಅಧ್ಯಕ್ಷ ನಾಸೀರ್ ಅವರ ನೇತೃತ್ವದಲ್ಲಿ ಸಭೆ ಸೇರಿ ಸಜೀಪನಡು ಗ್ರಾಮ ಪಂಚಾಯತ್ ವ್ಯಾಪ್ತಿ ಸೇರ್ಪಡೆಗೆ ಈ ಮೊದಲೇ ವಿರೊಇಧವನ್ನು ದಾಖಲಿಸಿರುವುದನ್ನು ಇಲ್ಲಿ ನೆನಪಿಸಬಹುದು.
ಬಂಟ್ವವಾಾಾದಿಂದ ಮುಕ್ತಿ
ನೂತನ ತಾಲೂಕು ರಚನೆಯಾದರೆ ಬಂಟ್ವಾಳ ತಾಲೂಕಿನಿಂದ ತುಂಬೆ, ಪೊಳಲಿ, ಸಜಿಪನಡು, ಸಜಿಪಪಡು, ಪುದು, ಚೇಳೂರು, ಇರಾ, ಕೈರಂಗಳ, ಕುರ್ನಾಡು, ಬಾಳೆಪುಣಿ, ಪಜೀರ್, ನರಿಂಗಾನ ಸಹಿತ 11 ಗ್ರಾಮಗಳು ಉಳ್ಳಾಲಕ್ಕೆ ಸೇರ್ಪಡೆಯಾಗಲಿವೆ. ಈಗಾಗಲೇ ಈ ಪ್ರಸ್ತಾಪವನ್ನು ಸಜಿಪನಡು ಗ್ರಾಮಸ್ಥರು ವಿರೋಧಿಸಿದ್ದರೂ ತಾಲೂಕು ರಚನೆ ಪ್ರಕ್ರಿಯೆಯಲ್ಲಿ ಈ ಗ್ರಾಮವನ್ನೂ ಸೇರಿಸಲಾಗಿದೆ. ಇವುಗಳ ಪೈಕಿ ಮೇರಮಜಲು, ಕೊಡ್ಮಣ್, ತುಂಬೆ, ಪೊಳಲಿ, ಸಜಿಪನಡು ಮತ್ತು ಪಡು ಗ್ರಾಮಗಳು ಉಳ್ಳಾಲಕ್ಕೆ ದೂರವಾಗಲಿದ್ದು,  ಬಂಟ್ವಾಳವೇ ಹತ್ತಿರ ಎನಿಸಿದೆ. ಇನ್ನು ಚೇಳೂರು ಬಂಟ್ವಾಳ ಮತ್ತ ಉಳ್ಳಾಲ ಎರಡೂ ಭಾಗಕ್ಕೆ ಹೊಂದಿಕೊಳ್ಳಲು ಸಮಸ್ಯೆಯಿಲ್ಲ. ಹರೇಕಳದಲ್ಲಿ ಸೇತುವೆ ನಿರ್ಮಾಣವಾದರೆ ಕೊಡ್ಮಣ್, ಮೇರಮಜಲುವಿಗೆ ಉಳ್ಳಾಲ ಮಂಗಳೂರಿನಷ್ಟೇ ಹತ್ತಿರವಾಗಲುಬಹುದು, ಸದ್ಯ ಅಧಿಕಾರಿಗಳ ನಕ್ಷೆಯಲ್ಲಿರುವ ಎಲ್ಲ ಗ್ರಾಮಗಳು ಉಳ್ಳಾಲ ತಾಲೂಕಿಗೆ ಸರ್ಪಡೆಗೊಳ್ಳುತ್ತವೆ ಎನ್ನುವಂತಿಲ್ಲ.

By suddi9

Leave a Reply

Your email address will not be published. Required fields are marked *