ಬಂಟ್ವಾಳ: ಪ್ರಕೃತಿ ಬೆಳಕು ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಗಿಡನೆಡುವ ಹಾಗೂ “ವನಮಹೋತ್ಸವ ಹಬ್ಬ” ಕಾರ್ಯಕ್ರಮ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರಲ್ಲಿ ಶನಿವಾರ ನಡೆಯಿತು.

ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷ ಟಿ.ಡಿ.ನಾಗರಾಜ್ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕಾಡು ನಾಶದಿಂದಾಗಿ ನಮ್ಮ ಮಳೆನಾಡಿನಲ್ಲಿ ಮಳೆ, ಬೆಳೆ ಅತಂತ್ರವಾಗಿದೆ. ಕರಾವಳಿಗೂ ಇದರ ಬಿಸಿಮುಟ್ಟಿದೆ. ಪ್ರಕೃತಿ ಇದ್ದರೆ ಮಾತ್ರ ಗಾಳಿ, ಮಳೆ ಆರೋಗ್ಯ ಎಂದ ಅವರು, ಪ್ರಕೃತಿಯ ಉಳಿವಿಗಾಗಿ ವನಮಹೋತ್ಸವವನ್ನು ಅನುಷ್ಠಾನಗೊಳಿಸಬೇಕಾಗಿದೆ ಎಂದರು.
ಉಪಅರಣ್ಯಾಧಿಕಾರಿ ಅನಿಲ್ ಮಾತನಾಡಿ, ಪರಿಸರದಲ್ಲಿಯೇ ಮಾನವ ಜನ್ಮದ ಉಗಮವಾಗಿದೆ. ಇದರಿಂದ ಮಾನವನು ಪ್ರಕೃತಿಗೆ ಕಾಣಿಕೆಯನ್ನು ನೀಡಲೇ ಬೇಕು. ನಮ್ಮ ಹುಟ್ಟು ಹಬ್ಬನ್ನು ನೆಡುವ ಮೂಲಕ ಆಚರಿಸಿ, ಪ್ರಕೃತಿಯ ಋಣ ತೀರಿಸೋಣ ಎಂದು ಹೇಳಿದರು.
ಪ್ರಕೃತಿ ಬೆಳಕು ಸಂಘದ ಬಂಟ್ವಾಳ ತಾಲೂಕು ಕಾರ್ಯದರ್ಶಿ ಪ್ರಿಯಾ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮೊಡಂಕಾಪು ಚರ್ಚ್‍ನ ಧರ್ಮಗುರು ಫಾ.ವಿಲೇರಿಯನ್ ಡಿಸೋಜ, ಟ್ರಾಫಿಕ್ ಎಸ್ಸೈ ಕುಟ್ಟಿ ಎಂ.ಕೆ., ಸ್ಪರ್ಶಾ ಮಂದಿರಲ್ಲಿ ಸುಭಾಶ್‍ಚಂದ್ರ ಜೈನ್, ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ, ಸಾಮಾಜಿಕ ಕಾರ್ಯಕತೇ ಬಿ.ಎಸ್. ಕೈರುನ್ನೀಸಾ, ಉಪಅರಣ್ಯಾಧಿಕಾರಿ ಕ್ಯಾರೆಲ್ ಹಾಗೂ ಇಲಾಖೆಯ ಅರಣ್ಯ ರಕ್ಷಕರು ಹಾಜರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಸ್ಪರ್ಶ ಕಲಾ ಮಂದಿರದಲ್ಲಿ ಗಿಡನೆಡಲಾಯಿತು.
ಸದಸ್ಯ ಅಮಾನುಲ್ಲಾ ಸ್ವಾಗಿತಿಸಿ, ರಂಗಕಲಾವಿದ ಎಚ್.ಕೆ. ನಯನಾಡು ವಂದಿಸಿ, ನಿರೂಪಿಸಿದರು. ಪ್ರಕೃತಿ ಬೆಳಕು ಸಂಘದ ಅಧ್ಯಕ್ಷ ಜೀವನ್ ಪಾವ್ಲ್ ಡಿಕುನ್ಹಾ ಸಹಕರಿಸಿದರು.