ಬಂಟ್ವಾಳ: ವರ್ಗದ ಕುಮ್ಕಿ ಸ್ಥಳವನ್ನು ವರ್ಗ ಜಮೀನು ಮಾಲಕರಿಗೆ ಖಾಯಂ ಮಾಡದೆ ಸರಕಾರಿ ಕಚೇರಿ ನಿರ್ಮಾಣ, ನಿವೇಶನ ರಹಿತರಿಗೆ ನಿವೇಶನ ನಿರ್ಮಾಣ ಹಾಗೂ ನಿವೃತ್ತ ಸೈನಿಕರಿಗೆ ಹಂಚಬೇಕು ಎಂದು ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಅವರ ನೇತ್ರತ್ವದ ನಿಯೋಗ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಅವರ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿತು.
ರಾಜ್ಯದಲ್ಲಿ ಎಷ್ಟೋ ವರ್ಗದಾರರು ಅವರ ವರ್ಗ ಜಮೀನಿನ ಲಗ್ತಿ ಕುಮ್ಕಿ ಸ್ಥಳ ಎಂದು ಎಕ್ರಾನುಗಟ್ಟಲೆ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಅದರೆ ಅದೇ ರೀತಿ ಎಷ್ಟೋ ಕುಟುಂಬಗಳು ಜಮೀನಿನ ಕೊರತೆಯಿಂದ ನಿವೇಶನ ರಹಿತವಾಗಿದ್ದಾರೆ ಎಂದು ಸದಾಶಿವ ಬಂಗೇರ ಮನವಿಯಲ್ಲಿ ವಿವರಿಸಿದ್ದಾರೆ. ಈ ನಡುವೆ ಆದೆಷ್ಟೋ ಕಡು ಬಡವರು ವಾಸ್ತವ್ಯಕ್ಕೆ ಜಾಗದ ಸಮಸ್ಯೆ ಯಿಂದ ಕೊರಗುತ್ತಿದ್ದು, ಹಾಗಾಗಿ ಬಡವರ ಕಣ್ಣೀರೋರಸುವ ಉದ್ದೇಶದಿಂದ ಅಂತಹ ಜಾಗವನ್ನು ಅಧಿಕಾರಿಗಳು ಗುರುತಿಸಿ ಸರಕಾರಿ ಕಚೇರಿ ನಿರ್ಮಾಣ, ನಿವೇಶನ ರಹಿತರಿಗೆ ನಿವೇಶನ ನಿರ್ಮಾಣ , ಮತ್ತು ನಿವೃತ್ತ ಸೈನಿಕರಿಗೆ ಕಾಯ್ದಿರಿಸುವಂತೆ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಕ್ರಮದಿಂದಾಗಿ ಹೇರಳವಾಗಿ ಜಮೀನು ಹೊಂದಿದವರು ಸರಕಾರಿ ಜಮೀನನ್ನು ಕಬಳಿಸುವುದು ಕೂಡಾ ತಪ್ಪುತ್ತದೆ ಎಂದು ತಿಳಿಸಿರುವ ಅವರು ಭವಿಷ್ಯದಲ್ಲಿ ಬಂಟ್ವಾಳ ತಾಲೂಕು ಜಿಲ್ಲಾ ಕೇಂದ್ರ ವಾಗುವ ಸಾಧ್ಯತೆ ಇರುವುದರಿಂದ ಅಂತಹ ಸಂದರ್ಭದಲ್ಲಿ ಸರಕಾರಿ ಜಮೀನಿನ ಅವಶ್ಯಕತೆ ಕೂಡ ಇರುತ್ತದೆ ಎಂದು ಅವರು ತಿಳಿಸಿದ್ದಾರೆ. ನಿಯೋಗದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಸದಸ್ಯ ಸಿದ್ದೀಕ್, ತಾಲೂಕು ಯುವಕಾಂಗ್ರೇಸ್ ಅಧ್ಯಕ್ಷ ಪ್ರಶಾಂತ್ ಕಲ್ಲಡ್ಕ, ಸಮಾಜಿಕ ಕಾರ್ಯಕರ್ತ ಬಾನುಪ್ರಕಾಶ್, ಪ್ರಮುಖರಾದ ಮಹಮ್ಮದ್ ನಂದಾವರ, ವಾಸು ಪೂಜಾರಿ ಕಡೇಶಿವಾಲಯ ಮತ್ತಿತರರಿದ್ದರು.

