ಉಡುಪಿ : ಕರಾವಳಿ ಬೈಪಾಸ್- ಶಾರದ ಹೊಟೇಲ್ ಸನಿಹದ, ರಾಷ್ಟ್ರೀಯ ಹೆದ್ದಾರಿ 66-ರ ಪಕ್ಕದಲ್ಲಿಯೇ ಜೋಪಾಡಿ ಕಟ್ಟಿಕೊಂಡು ಅಪಾಯದ ಸ್ಥಿತಿ ಎದುರುಸುತ್ತಿದ್ದ ನಾಲ್ಕು ಕುಟುಂಬಗಳನ್ನು ತೆರವುಗೊಳಿಸಿ ಬೇರಡೆಗೆ ಸ್ಥಳಾಂತರ ಮಾಡಿಸಲಾಯಿತು. ಮತ್ತೊಂದು ಕುಟುಂಬವು ಊರಿಗೆ ಹೋಗುವ ಇಚ್ಚೆ ವ್ಯಕ್ತಪಡಿಸಿದರಿಂದ ಅವರ ಊರಾದ ಗದಗ ಜಿಲ್ಲೆಗೆ ರವಾನಿಸಲಾಯಿತು. ಕಾರ್ಯಚರಣೆಯನ್ನು ಮಕ್ಕಳ ರಕ್ಷಣಾ ಘಟಕವು, ಉಡುಪಿ ಜಿಲ್ಲಾ ನಾಗರಿಕ ಸಮಿತಿ, ಹಾಗೂ ಪಂಚರತ್ನ ಸೇವಾ ಟ್ರಸ್ಟಿನ ಸಹಕಾರದಿಂದ ನಡೆಸಿದವು. ಲಯನ್ಸ್ ಕಲ್ಬ್ ಬ್ರಹ್ಮಗಿರಿ ಇವರು, ಗದಗ ಜಿಲ್ಲೆಗೆ ಪ್ರಯಾಣ ಬೆಳೆಸಲು, ಅಲೆಮಾರಿ ಕುಟುಂಬದ 11 ಜನ ಸದಸ್ಯರ ಪ್ರಯಾಣದ ವೆಚ್ಚ, ಲಗೇಜು ಸಾಗಟ ವೆಚ್ಚವನ್ನು ಭರಿಸಿ ಮಾನವಿಯತೆ ತೋರಿದರು.
ಗದಗ ಮೂಲದ ಕತ್ತರಿ ಸಾಣೆಗಾರರ ಅಲೆಮಾರಿ ಕುಟುಂಬಗಳು ರಾಷ್ಟ್ರೀಯ ಹೆದ್ದಾರಿ ಸನಿಹ ಜೋಪಡಿ ಕಟ್ಟಿಕೊಂಡು ಅಕ್ರಮವಾಗಿ ವಾಸಗಿದ್ದವು. ಹೆದ್ದಾರಿಯಲ್ಲಿ ವಾಹನ ಸಂಚಾರ ಇರುವುದರಿಂದ ವಾಸದ ಕುಟೀರಗಳು ಅಪಾಯವನ್ನು ಎದುರಿಸುತ್ತಿದ್ದವು. ಸಣ್ಣ ಮಕ್ಕಳು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಆಟ ಆಡುವುದು, ತಿರುಗಾಡುವದನ್ನು ಗಮನಿಸಲಾಗಿತ್ತು.
ಇಲ್ಲಿಯ ಪರಿಸರವು ಸೊಳ್ಳೆಗಳ ತಾಣವು ಆಗಿರುವುದರಿಂದ, ಮಲೇರಿಯಾ, ಡೆಂಗ್ಯೂ ಕಾಯಿಲೆಗಳು ಹರಡುವ ಭೀತಿಯು ಇತ್ತು. ಇಲ್ಲಿಯ ಸ್ಥಿತಿ ಗತಿಯ ಬಗ್ಗೆ ಸಾರ್ವಜನಿಕರಿಂದ, ಸಮಾಜಸೇವಕರಿಂದ ದೂರುಗಳು ಕೇಳಿಬಂದಿದ್ದವು. ಜಾಗ್ರತರಾದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕೆಲವು ದಿನಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದರು. ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆ ನೀಡಿದ್ದರು. ಎಚ್ಚರಿಸಿದ್ದರೂ ಕುಟುಂಬಗಳು ಸ್ಥಳಾಂತರಗೊಳ್ಳದೆ, ಅದೆ ಸ್ಥಳದಲ್ಲಿ ವಾಸವಾಗಿದ್ದವು. ಹಾಗಾಗಿ ಇಲಾಖೆಯು ಸೋಮವಾರ ಯಶಸ್ವಿ ಕಾರ್ಯಚರಣೆ ನಡೆಸಿತು.
ಕಾರ್ಯಚರಣೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವಿಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಯಾನಂದ್, ಸಮಾಜ ಕಾರ್ಯಕರ್ತ ಯೊಗೇಶ್ ಉಪಸ್ಥಿತರಿದ್ದರು. ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಪಂಚರತ್ನ ಸೇವಾ ಟ್ರಸ್ಟಿನ ಉಪಧ್ಯಾಕ್ಷ ತಾರಾನಾಥ್ ಮೇಸ್ತ ಶಿರೂರು, ಲಯನ್ಸ್ ಕ್ಲಬ್ ಬ್ರಹ್ಮಗಿರಿ ಇದರ ಪದಾಧಿಕಾರಿಗಳಾದ ವಾದಿರಾಜ್ ರಾವ್, ಉಮೇಶ್ ನಾಯಕ್, ವಾಸುದೇವ ಚಿತ್ಪಾಡಿ ಉಪಸ್ಥಿತರಿದ್ದರು.
