ಬಂಟ್ವಾಳ: ಫರಂಗೇಪೇಟೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ವಿಶೇಷ ವಾಗಿ ‘ಎ’ ನೆಗೆಟಿವ್ ಗುಂಪಿನ 106ನೇ ರಕ್ತದಾನ ಶಿಬಿರವು ಸೇವಾಂಜಲಿ ಪ್ರತಿಷ್ಠಾನದ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್.ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಪ್ರತೀ 2 ಸೆಕೆಂಡ್ ಗೆ 1 ಯುನಿಟ್ ರಕ್ತದ ಅವಶ್ಯಕತೆ ಇರುತ್ತದೆ.ರಕ್ತದ ಕೊರತೆಯನ್ನು ಮನಗಂಡು ಶಿಬಿರಗಳ ಮೂಲಕ ರಕ್ತದಾನದ ಜಾಗೃತಿಯನ್ನು ಮೂಡಿಸುವ ಕಾರ್ಯ ಸೇವಾಂಜಲಿ ಪ್ರತಿಷ್ಠಾನದಿಂದ ನಡೆಯುತ್ತಿರುವುದು ಅಭಿನಂದನೀಯವಾಗಿದೆ ಎಂದರು. ತಾಲೂಕಿನ ಅಮ್ಟಾಡಿ ಗ್ರಾಮದ ಕುಮಾರಿ ನಕ್ಷಿತಾ ರವರ ಶಸ್ತ್ರಚಿಕಿತ್ಸೆಗೆ ಅವಶ್ಯವಿರುವ ಸುಮಾರು 15 ಯುನಿಟ್ ಬಹಳ ವಿರಳವಾದ ‘ ಎ’ ನೆಗೆಟಿವ್ ರಕ್ತದ ಅವಶ್ಯಕತೆಗಾಗಿ ಈ ರಕ್ತದಾನದ ಶಿಬಿರವನ್ನು ಆಯೋಜಿಸುವುದರೊಂದಿಗೆ ರಕ್ತದಾನದ ಬಗ್ಗೆ ಸಂಸ್ಥೆಗಿರುವ ಕಾಳಜಿ ಅರಿವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಮೇಜರ್ ಡಾ| ಶಿವಕುಮಾರ್ ಹಿರೇಮಠ , ಕೆ. ಎಸ್ .ಹೆಗ್ಡೆ ಆಸ್ಪತ್ರೆ ಯ ಪೇಶಂಟ್ ಕೇರ್ ಆಫೀಸರ್ ಶ್ರೀರಾಮ್ ,ಸೇವಾಂಜಲಿ ಅಧ್ಯಕ್ಷರಾದ ಅರ್ಕುಳ ಬೀಡು ವಜ್ರನಾಭ ಶೆಟ್ಟಿ , , ಕಳ್ಳಿಗೆ ಪಂಚಾಯತ್ ಉಪಾಧ್ಯಕ್ಷರಾದ ಪುರುಷ ಎನ್ ಸಾಲ್ಯಾನ್ , ಭಾಸ್ಕರ್ ಚೌಟ ಕುಮ್ಡೇಲು , ದಿನೇಶ್ ಎನ್. ತುಂಬೆ , ಪ್ರಶಾಂತ್ ಕುಮಾರ್ ತುಂಬೆ , ಎಮ್. ಕೆ ಖಾದರ್ ಮಾರಿಪಳ್ಳ , ಕರುಣ್ ಶೆಟ್ಟಿ ಕೊಟ್ಟಿಂಜ , ನಾರಾಯಣ ಬೆಳ್ಚಾಡ ಮೇರಮಜಲು , ಜನಾರ್ಧನ ಪೂಜಾರಿ ಬೆಂಜನಪದವು ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ‘ಎ ‘ನೆಗೆಟಿವ್ ಗುಂಪಿನ 20 ಯೂನಿಟ್ ಇತರ ಒಟ್ಟು 78 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ತಾರಾನಾಥ ಕೊಟ್ಟಾರಿ ತೇವು ಸ್ವಾಗತಿಸಿದರು , ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ ಪೂಂಜರವರು ಪ್ರಸ್ತಾಪಿಸಿದರು , ಅರ್ಜುನ್ ಪೂಂಜಾ ವಂದಿಸಿದರು.