ಕೋಲಾರ:- ಜಿಲ್ಲೆಯ ಜನಮೆಚ್ಚಿದ ರಾಜಕಾರಣಿ ರಮೇಶ್‍ಕುಮಾರ್ ಸ್ಪೀಕರ್ ಸ್ಥಾನದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಮತದಾರ ಪ್ರಭುಗಳು ಧಿಕ್ಕರಿಸಿದ್ದಾರೆ. ಜನತಾ ಜನಾರ್ಧನರ ನ್ಯಾಯಾಲಯದಲ್ಲಿ ಅನರ್ಹ ಅಣೆಪಟ್ಟಿಕೊಂಡಿದ್ದ ಶಾಸಕರಿಗೆ ಸಿಕ್ಕಿದ ಗೆಲುವಿನ ತೀರ್ಪು, ಕೋಲಾರ ಜಿಲ್ಲೆಯ ಪ್ರಭಾವಿ ರಾಜಕಾರಣಿ, ಮಾಜಿ ಸ್ಪೀಕರ್ ರಮೇಶ್‍ಕುಮಾರ್ ತೀರ್ಪನ್ನು ಒರೆಗಚ್ಚುವಂತೆ ಮಾಡಿದೆ. ಉಪ ಚುನಾವಣೆಯ ಫಲಿತಾಂಶದಿಂದ ತಾವು ನೀಡಿದ್ದ ತೀರ್ಪಿಗೆ ಸೋಲುಂಟಾಗಿರುವುದು ರಮೇಶ್‍ಕುಮಾರ್ ಅವರ ಭ್ರಮನಿರಸನಕ್ಕೆ ಕಾರಣವಾಗಿದೆ.

IMG_20191211_175936
ದ್ವಂದ್ವ ನಿಲುವುಗಳು ಇತ್ತೀಚಿನ ವರ್ಷಗಳಲ್ಲಿ ದ್ವಂದ್ವಮಯ ನಿಲುವುಗಳಿಂದ ವಿವಾದಕ್ಕೆ ಗುರಿಯಾಗಿದ್ದ ರಮೇಶ್‍ಕುಮಾರ್, ಇತ್ತೀಚಿಗೆ ಅವರು ತೆಗೆದುಕೊಂಡ ಬಹುತೇಕ ನಿರ್ಣಯಗಳು ಟೀಕೆಗೆ ಗುರಿಯಾಗಿತ್ತು. ವಿವಾದಗಳಾಗಿ ಮಾರ್ಪಟಿದ್ದವು. ಕಾಂಗ್ರೆಸ್ ಪಕ್ಷದಲ್ಲಿದ್ದರೂ ತಮ್ಮ ಪಕ್ಷಕ್ಕೆ ಬದ್ಧರಾಗಿರದ ಹಾಗೂ ತಾವು ವಿರೋಧಿಸಿದ ವಿಚಾರ ಮತ್ತು ವ್ಯಕ್ತಿ, ಪಕ್ಷಗಳ ಜೊತೆಗೆ ಕೈಜೋಡಿಸಿದ್ದು, ಕೋಲಾರದ ಎಡಚಿಂತನೆಗಳ, ಡಿಎಸ್‍ಎಸ್ ಹೋರಾಟದ ನೆಲದಲ್ಲಿಯೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಮಲ ಅರಳುವಂತೆ ಮಾಡಿದ್ದ ವಿಚಾರಗಳು ವಿವಾದಗಳಾಗಿದ್ದವು.
ಸಾಮಾನ್ಯವಾಗಿ ಯಾವುದೇ ವಿಷಯವನ್ನು ಆಳವಾಗಿ ಅಧ್ಯಯನ ಮಾಡಿ, ಬುದ್ಧಿವಂತಿಕೆಯಿಂದ ಪ್ರಬುದ್ಧತೆಯಿಂದ ಮಾತನಾಡುತ್ತಿದ್ದ ರಮೇಶ್‍ಕುಮಾರ್‍ರ ಮಾತುಗಳಿಗೆ ಹಿಂದೆಲ್ಲಾ ಟೀಕೆ ಟಿಪ್ಪಣಿಗಳು ವ್ಯಕ್ತವಾಗುತ್ತಿರಲೇ ಇಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಅವರು ತೆಗೆದುಕೊಳ್ಳುತ್ತಿದ್ದ ದ್ವಂದ್ವ ನಿಲುವುಗಳು ಜನಸಾಮಾನ್ಯರ ಹಂತದಲ್ಲಿಯೂ ಚರ್ಚೆಗೆ ಗ್ರಾಸವಾಗುವಂತಾಗಿತ್ತು.
ವರ್ತೂರಿಗೆ ಗುಟುರು
ಕೊತ್ತೂರಿಗೆ ಬೆಂಬಲ
ರಿಯಲ್ ಎಸ್ಟೇಟ್ ರಾಜಕಾರಣ ಹಿನ್ನೆಲೆಯ ಮಾಜಿ ಸಚಿವ ವರ್ತೂರು ಪ್ರಕಾಶ್‍ರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರಕ್ಕೆ ರಮೇಶ್‍ಕುಮಾರ್‍ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅನಿಲ್‍ಕುಮಾರ್ ನಾಮಪತ್ರಕ್ಕೆ ಸೂಚಕರಾಗಿ ವರ್ತೂರು ಪ್ರಕಾಶ್ ಸಹಿ ಮಾಡಿದ್ದನ್ನು ಕಟುವಾಗಿ ಖಂಡಿಸಿದ್ದರು. ವರ್ತೂರು ಸಮ್ಮುಖದಲ್ಲಿಯೇ ನೇರವಾಗಿ ಗುಟುರು ಹಾಕಿದ್ದರು. ವರ್ತೂರು ಪ್ರಕಾಶ್ ಪರವಾಗಿ ನಿಂತಿದ್ದ ಕೆ.ಎಚ್.ಮುನಿಯಪ್ಪರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿ ರಾಜಕೀಯವಾಗಿ ವೈಷಮ್ಯ ಬೆಳೆಸಿಕೊಂಡಿದ್ದರು.
ಆದರೆ, ಅದೇ ರಿಯಲ್ ಎಸ್ಟೇಟ್ ಹಿನ್ನೆಲೆಯ ಕೊತ್ತೂರು ಮಂಜುನಾಥ್‍ರೊಂದಿಗೆ ಕೈಜೋಡಿಸಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರ ಪರವಾಗಿ ಗಟ್ಟಿಯಾಗಿ ನಿಂತಿದ್ದರು. ಕೆ.ಎಚ್.ಮುನಿಯಪ್ಪ ವಿರುದ್ಧದ ಕಾರ್ಯತಂತ್ರಗಳನ್ನು ಕೊತ್ತೂರು ಮಂಜುನಾಥ್‍ರ ಗೆಸ್ಟ್ ಹೌಸ್‍ನಲ್ಲಿಯೇ ಕುಳಿತು ಎಣೆಯುತ್ತಿದ್ದರು. ರಾಜಕೀಯವಾಗಿ ಒಂದೇ ರೀತಿಯ ನಡೆ ನುಡಿಯ ವರ್ತೂರು, ಕೊತ್ತೂರು ಕುರಿತ ರಮೇಶ್‍ಕುಮಾರ್‍ರ ದ್ವಂದ್ವ ರಾಜಕೀಯ ತೀರ್ಮಾನಗಳು ಜನರ ಟೀಕೆಗೂ ಗುರಿಯಾಗುವಂತಾಗಿತ್ತು.
ರಾಜಕೀಯ ಕಡು ವಿರೋಧಿ
ಬಿಜೆಪಿಯನ್ನೇ ಬೆಂಬಲಿಸಿದರು.
ಹಿರಿಯ ರಾಜಕಾರಣ ರಮೇಶ್‍ಕುಮಾರ್ ವಿವಿಧ ವೇದಿಕೆಗಳಲ್ಲಿ ಸಾಕಷ್ಟು ಬಾರಿ ಬಿಜೆಪಿ ಸಿದ್ದಾಂತವನ್ನು ಅತ್ಯುಗ್ರವಾಗಿ ಟೀಕಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿಯನ್ನು ಕೋಲಾರ ಜಿಲ್ಲೆಯ ಯಾವುದೇ ರಾಜಕಾರಣಿ ವಿರೋಧಿಸದಷ್ಟು ವಿರೋಧಿಸಿ ಹೇಳಿಕೆಗಳನ್ನು ನೀಡುತ್ತಿದ್ದರು.
ಆದರೆ, ತಮ್ಮದೇ ಕಾಂಗ್ರೆಸ್ ಪಕ್ಷದ ಕೆ.ಎಚ್.ಮುನಿಯಪ್ಪರನ್ನು ಸೋಲಿಸುವ ಸಲುವಾಗಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಸಂಸದರಾಗಿ ಎಸ್.ಮುನಿಸ್ವಾಮಿಗೆ ಪರೋಕ್ಷವಾಗಿ ಕಾರ್ಯತಂತ್ರ ರೂಪಿಸಿ ಬೆಂಬಲಿಸಿ, ಗೆಲ್ಲಿಸಿದ್ದರು.
ಭಾಷಣದಲ್ಲಿ ಅಂಬೇಡ್ಕರ್‍ರ ಸಾಮಾಜಿಕ ನ್ಯಾಯವನ್ನು ಹೊಗಳುತ್ತಾ, ದಲಿತ, ಎಡ ಚಿಂತನೆಗಳ ವಿಚಾರ ಧಾರೆಯ ಪರವಾಗಿ ಪರಿಣಾಮಕಾರಿಯಾಗಿ ಮಾತನಾಡುತ್ತಿದ್ದ ಸ್ಪೀಕರ್ ರಮೇಶ್‍ಕುಮಾರ್, ಅದೇ ದಲಿತ ಮುಖಂಡರನ್ನು ತಮ್ಮೊಂದಿಗೆ ಸಂಘಟಿಸಿ ಬಿಜೆಪಿ ಪರವಾಗಿ ದುಡಿಯುವಂತೆ ಮಾಡಿದ ಕೀರ್ತಿಯನ್ನು ಗಳಿಸಿಕೊಂಡಿದ್ದರು.
ಜಾಧವ್‍ಗೊಂದು ನ್ಯಾಯ
ಮೈತ್ರಿ ಶಾಸಕರಿಗೊಂದು ನ್ಯಾಯ!
ಲೋಕಸಭಾ ಚುನಾವಣೆಗೂ ಮುನ್ನ ಡಾ.ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಸ್ಪೀಕರ್ ರಮೇಶ್‍ಕುಮಾರ್ ತೀರಾ ವಿಳಂಬ ಮಾಡದಂತೆ ಲೋಕಸಭಾ ಚುನಾವಣೆಗೂ ಮುನ್ನವೇ ಅಂಗೀಕರಿಸಿದ್ದರು.
ರಮೇಶ್‍ಕುಮಾರ್‍ರ ಈ ನಿರ್ಧಾರದಿಂದಲೇ ಉಮೇಶ್‍ಜಾಧವ್ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವಂತಾಗಿತ್ತು. ತಾವು ರಾಜೀನಾಮೆ ನೀಡಿದ್ದ ಸ್ಥಾನದಲ್ಲಿ ತಮ್ಮ ಪುತ್ರನನ್ನು ಬಿಜೆಪಿಯಿಂದಲೇ ಗೆಲ್ಲಿಸಿಕೊಳ್ಳಲು ಸಾಧ್ಯವಾಗಿತ್ತು.
ಆದರೆ, ಮೈತ್ರಿ ಸರಕಾರವನ್ನು ತೊರೆದು ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ತಮ್ಮ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಸ್ಪೀಕರಿಸಲಿಲ್ಲ. ರಾಜೀನಾಮೆ ನೀಡಿದ ಶಾಸಕರ ನಡವಳಿಕೆ ಬಗ್ಗೆ ಸ್ಪೀಕರ್ ರಮೇಶ್‍ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜೀನಾಮೆಯನ್ನು ಅಂಗೀಕರಿಸದೆ ಶಾಸಕರನ್ನು ಅನರ್ಹಗೊಳಿಸಿದ್ದರು.
ಈ ಬಗ್ಗೆ ಹೈಕೋರ್ಟ್, ಸುಪ್ರಿಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದ ಅನರ್ಹ ಹಣೆಪಟ್ಟಿಕೊಂಡಿದ್ದ ಶಾಸಕರು ಅಂತಿಮವಾಗಿ ಜನತಾನ್ಯಾಯಾಲಯದಲ್ಲಿ ಗೆಲುವಿನ ಅರ್ಹತೆ ಸಂಪಾದಿಸಿಕೊಂಡು ರಮೇಶ್‍ಕುಮಾರ್‍ರ ತೀರ್ಪಿನಿಂದ ತಮಗೆ ಅಂಟಿಕೊಂಡಿದ್ದ ಅನರ್ಹತೆಯ ಕಳಂಕವನ್ನು ತೊಳೆದುಕೊಂಡಿದ್ದಾರೆ.
ಜನತಾ ತೀರ್ಪಿಗೆÀ ಬದ್ಧ
ಸ್ಪೀಕರ್ ಸ್ಥಾನದಲ್ಲಿ ತಾವೇ ಅನರ್ಹಗೊಳಿಸಿದ ಶಾಸಕರ ವಿರುದ್ಧ ರಮೇಶ್‍ಕುಮಾರ್ ಉಪ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದರು. ಅದರಲ್ಲೂ, ಕೋಲಾರ ನೆರೆಯ ಚಿಕ್ಕಬಳ್ಳಾಪುರ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಪ್ರಚಾರ ನಡೆಸಿ, ಅನರ್ಹ ಶಾಸಕರನ್ನು ಚಪ್ಪಲಿಗೆ ಹೋಲಿಸಿದ್ದರು. ಚಪ್ಪಲಿ ಎಷ್ಟೇ ದುಬಾರಿಯಾದರೂ ಮನೆಯಿಂದ ಹೊರಗೆ ಇಡುವುದು, ದೇವಾಲಯಕ್ಕೆ ಹಾಕಿಕೊಂಡು ಹೋಗಲಾಗುವುದಿಲ್ಲ, ಹಾಗೆಯೇ ಪವಿತ್ರವಾದ ವಿಧಾನಸೌಧದ ದೇವಾಲಯಕ್ಕೆ ಅನರ್ಹರು ಬರಬಾರದು ಎಂದು ತಾಕೀತು ಮಾಡಿದ್ದರು.
ಫಲಿತಾಂಶದ ದಿನ ಅನರ್ಹರಿಗೆ ಮಂಗಳಾರತಿ ಎತ್ತಲು ಸಿದ್ಧರಾಗಿ ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದ್ದರು.
ಆದರೆ, ಉಪಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಜನತಾ ನ್ಯಾಯಾಲಯದ ತೀರ್ಪಿನ ಮಂಗಳಾರತಿ ಎತ್ತಿದ್ದು ಯಾರಿಗೆ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆÉ. ಒಟ್ಟಾರೆ ಉಪಚುನಾವಣೆಯ ಫಲಿತಾಂಶ ರಮೇಶ್‍ಕುಮಾರ್‍ರ ಹಿಂದಿನ ದ್ವಂದ್ವ ನಿಲುವುಗಳು ಚರ್ಚೆಗೆ ಬಂದು ಟೀಕೆಗೆ ಗುರಿಯಾಗುವಂತಾಗಿದೆ.

ನಾನು ವ್ಯಯಕ್ತಿಕವಾಗಿ ಯಾರನ್ನು ಅನುರ್ಹಗೊಳಿಸಿಲ್ಲ, ಉಪ ಚುನಾವಣೆಯಲ್ಲಿ ಜನರ ತೀರ್ಪನ್ನು ಗೌರವಿಸುತ್ತೇನೆ, ಉಪ ಚುನಾವಣೆಯ ಫಲಿತಾಂಶವನ್ನು ಧೈರ್ಯದಿಂದ ಸಮಚಿತ್ತದಿಂದ ಸ್ಪೀಕರಿಸುವೆ, ಹಣ ಕೊಡುವ ಹಾಗೂ ಪಡೆಯುವ ರಾಜಕಾರಣ ನನಗೆ ಗೊತ್ತಿಲ್ಲ. – ಕೆ.ಆರ್.ರಮೇಶ್‍ಕುಮಾರ್, ಮಾಜಿಸ್ಪೀಕರ್.

9ಚಿತ್ರ-20
ಮಾಜಿ ಸ್ಪೀಕರ್‍ರಮೇಶ್‍ಕುಮಾರ್.

By suddi9

Leave a Reply

Your email address will not be published. Required fields are marked *