ಬಂಟ್ವಾಳ: ಮಂಗಳೂರಿನಲ್ಲಿ ಗುರುವಾರ ನಡೆದ ಅಹಿತಕರ ಘಟನೆಯ ಹಿನ್ನಲೆಯಲ್ಲಿ ಮಂಗಳೂರಿನ ಕಪ್ಯೂ೯ ನ ಬಿಸಿ ಶುಕ್ರವಾರ ಸಂಜೆಯವರೆಗೆ ಬಂಟ್ವಾಳ ತಾಲೂಕಿನಲ್ಲು ಕಂಡು ಬಂತು. ಜಿಲ್ಲೆಯಾದ್ಯಂತ ಸೆ.144 ರನ್ವಯ ಜಾರಿಯಲ್ಲಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸದ್ಯ ತಾಲೂಕಿನಲ್ಲಿ ಸಂಪೂರ್ಣ ಶಾಂತಯುತವಾಗಿದ್ದು,ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಬಂಟ್ವಾಳ,ಬಿ.ಸಿ.ರೋಡ್,ಫರಂಗಿಪೇಟೆ, ಮೆಲ್ಕಾರ್,ಕಲ್ಲಡ್ಕ ಪರಿಸರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರಿಂದ ಜನಸಂಚಾರ ಕೂಡ ವಿರಳವಾಗಿತ್ತು. ಸದಾ ಗಿಜಿಗುಡುತ್ತಿದ್ದ ಬಿ.ಸಿ.ರೋಡ್ ಬಸ್ ತಂಗುದಾಣ ಬಿಕೋ ಅನಿಸಿತ್ತು.

ಬಂಟ್ವಾಳ ತಾಲೂಕಿನ ಕೇಂದ್ರಸ್ಥಾನ ಬಿ.ಸಿ.ರೋಡ್, ಬಂಟ್ವಾಳ ಪೇಟೆಗಳಲ್ಲಿ ವಾಹನ ಸಂಚಾರ ಕಡಿಮೆ ಇತ್ತು. ಟ್ಯಾಕ್ಸಿ ಸ್ಟ್ಯಾಂಡ್ ಗಳಲ್ಲಿ, ಆಟೊ ಸ್ಟ್ಯಾಂಡ್ ಗಳಲ್ಲಿ ವಾಹನಗಳು ಕಂಡುಬಂದರೂ ಬಾಡಿಗೆ ಇರಲಿಲ್ಲ. ಖಾಸಗಿ ವಾಹನಗಳ ಓಡಾಟವೂ ಕಡಿಮೆ ಇತ್ತು. ಮಂಗಳೂರಿನಲ್ಲಿ ಕರ್ಪ್ಯೂ ಘೋಷಿಸಿರುವುದರಿಂದ ಮಂಗಳೂರಿನತ್ತ ತೆರಳುವ ಯಾವುದೇ ಸರಕಾರಿ, ಸಿಸಿ ಬಸ್ ಗಳು ರಸ್ತೆಗೇ ಇಳಿಯಲಿಲ್ಲ. ಹಾಗೆಯೇ ಮೂಡಬಿದ್ರೆ ಮೊದಲಾದೆಡೆಯಿಂದ ಬಿ.ಸಿ.ರೋಡಿಗೆ ಬರುತ್ತಿದ್ದ ಖಾಸಗಿ ಸರ್ವಿಸ್ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನಲ್ಲೂ ಕೆಲವರು ಬಸ್ಸಿಗಾಗಿ ಕಾಯುತ್ತಿದ್ದ ದೃಶ್ಯ ಕಂಡುಬಂದವು.

ಕಚೇರಿ ಖಾಲಿ ಖಾಲಿ: ಬಿ.ಸಿ.ರೋಡ್, ಬಂಟ್ವಾಳದಲ್ಲಿ ಜನಸಂಚಾರ, ವಾಹನ ಸಂಚಾರ ಇಲ್ಲದ ಕಾರಣ ಇಲ್ಲಿ ತೆರೆದಿದ್ದ ಕೆಲವೊಂದು ಮಳಿಗೆಗಳಲ್ಲಿ ವ್ಯಾಪಾರ, ವಹಿವಾಟು ಕಾಣಿಸದೇ ಇದ್ದರೆ, ಸರಕಾರಿ ಕಚೇರಿಗಳು ಅಘೋಷಿತ ರಜೆ ಆಚರಿಸಿದವು. ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಕಚೇರಿ ಸಿಬ್ಬಂದಿ ಹೊರತುಪಡಿಸಿದರೆ, ಸಾರ್ವಜನಿಕರು ಬರಲೇ ಇಲ್ಲ. ಶಾಲೆಗಳಿಗೆ ರಜೆ ಘೋಷಿಸಿದ ಹಿನ್ನಲೆಯಲ್ಲಿ ಲೊರೆಟ್ಟೊ,ಬೊಂಡಾಲ ಸಹಿತ ವಿವಿಧ ಶಾಲೆಯಲ್ಲಿ ಶುಕ್ರವಾರ,ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವವನ್ನು ರದ್ದುಗೊಳಿಸಲಾಗಿದೆ. ಹಾಗೆಯೇ ಬಿ.ಸಿ.ರೋಡಿನಲ್ಲಿ ಶನಿವಾರದಂದು ಆರಂಭಗೊಳ್ಳಬೇಕಾಗಿದ್ದ ಕರಾವಳಿ ಕಲೋತ್ಸವ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ.ಹಾಗೆಯೇ ವಿವಿಧ ಕಾರ್ಯಕ್ರಮಗಳು ಕೂಡ ರದ್ದುಗೊಂಡಿದೆ.
ರಾಷ್ಟ್ರೀಯ ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲೂ ಹೆಚ್ಚಿನ ನಿಗಾ ವಹಿಸಲಾಗಿದ್ದು, ಉಪ್ಪಿನಂಗಡಿಯಲ್ಲಿ ೨ ಬಸ್ಸುಗಳಿಗೆ ಕಲ್ಲು ಹೊಡೆದ ಪ್ರಕರಣ ಹೊರತು ಪಡಿಸಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ದ.ಕ.ಜಿಲ್ಲಾ ಎಸ್‌ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.ಶುಕ್ರವಾರ ಬಂಟ್ವಾಳ ಐಬಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಗುರುವಾರ ರಾತ್ರಿ ಅರ್ಕುಳದಲ್ಲಿ ವೊಲ್ವೋ ಹಾಗೂ ಕೆಎಸ್‌ಆರ್‌ಟಿಸಿ ಕೆಂಪು ಬಸ್ಸಿಗೆ ಕಲ್ಲು ಬಿದ್ದಿರುವ ಪ್ರಕರಣ ನಡೆದಿದೆ.
ಸೂಕ್ಷ್ಮ ಪ್ರದೇಶವಾಗಿರುವ ಬಂಟ್ವಾಳದಲ್ಲಿ ೪ ಕೆಎಸ್‌ಆರ್‌ಪಿ, ೨ ಟಿಯರ್ ಪಾರ್ಟಿ, ಚಿಕ್ಕಮಗಳೂರು ಜಿಲ್ಲೆಯಿಂದ ೫೦ ಪೊಲೀಸ್ ಸಿಬಂದಿ ಜತೆಗೆ ೪ ಮಂದಿ ಪೊಲೀಸ್ ಅಽಕಾರಿಗಳು ಆಗಮಿಸಿದ್ದಾರೆ.ತಾನು ಬಂಟ್ವಾಳ ತಾಲೂಕಿನಲ್ಲಿ ಬಂದೋಬಸ್ತ್ ಉಸ್ತುವಾರಿ ವಹಿಸಿಕೊಂಡಿದ್ದು, ಕೈಕಂಬ, ಕಲ್ಲಡ್ಕ, ವಿಟ್ಲ ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ಪುತ್ತೂರಿನಲ್ಲಿ ಹೆಚ್ಚುವರಿ ಎಸ್‌ಪಿ ವಿಕ್ರಂ ಅಮಟೆ ಅವರು ಬಂದೋಬಸ್ತ್ ಉಸ್ತುವಾರಿ ವಹಿಸಿಕೊಂಡಿದ್ದರು ಎಂದರು. ಜಿ.ಪಂ.ಸಿಇಓ ಡಾ| ಸೆಲ್ವಮಣಿ, ಬಂಟ್ವಾಳ ಎಎಸ್‌ಪಿ ಸೈದುಲ್ ಅಡಾವತ್ ಅವರು ಎಸ್‌ಪಿಯವರ ಜತೆಗಿದ್ದರು.