ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಮಕರ ಸಂಕ್ರಮಣ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭ ಮಕರ ಸಂಕ್ರಮಣದ ವಿಶೇಷತೆಯನ್ನು ತಿಳಿಸಿದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಪದವಿ ವಿಭಾಗದ ಕನ್ನಡ ಉಪನ್ಯಾಸಕ ಯತಿರಾಜ್ ಧನುರ್ ಮಾಸದಿಂದ ಮಕರ ಮಾಸಕ್ಕೆ ಸೂರ್ಯ ಪಥ ಬದಲಿಸುತ್ತಿದ್ದಂತೆಯೇ ಉತ್ತರಾಯಣ ಅಡಿಯಿಡುತ್ತದೆ.
ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ, ಲೋಕದ ಕರಿರುಳನ್ನು ಹೋಗಲಾಡಿಸುವಂತೆ, ಜನರು ಈ ಪುಣ್ಯಕಾಲದಲ್ಲಿ ಆಧ್ಯಾತ್ಮಿಕ ಚಿಂತೆಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ಮುಕ್ತಿ ಮಾರ್ಗದಲ್ಲಿ ಸಾಗುವಂತೆ ಈ ಆಚರಣೆಯು ಪ್ರೇರಣೆಯನ್ನು ನೀಡುತ್ತದೆ ಎಂದರು.
ಈ ಹಬ್ಬದಂದು ಎಳ್ಳು- ಬೆಲ್ಲ ಹಂಚಿ, ಪರಸ್ಪರ ದ್ವೇಷ, ಅಸೂಯೆ, ಶತ್ರುತ್ವಗಳನ್ನೆಲ್ಲ ಮರೆತು ಸಾಮರಸ್ಯದಿಂದ ಬದುಕುವ, ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಸಾಗುವ ಎಂದು ಆಶಯ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ 7ನೇ ತರಗತಿಯ ಅಕ್ಷತಾ, ಲಕ್ಷ್ಮೀ, ಪ್ರೇರಣಾ, ಗೀತೆ ಹಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಎಳ್ಳು ಬೆಲ್ಲ ನೀಡಿ ಮಕರ ಸಂಕ್ರಮಣದ ಶುಭ ಹಾರೈಸಲಾಯಿತು. ವೇದಿಕೆಯಲ್ಲಿ ಶಾಲಾ ಮುಖ್ಯಶಿಕ್ಷಕ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಶಿಕ್ಷಕಿಯರಾದ ರಮ್ಯ ಸ್ವಾಗತಿಸಿ, ಶಾರದಾ ನಿರೂಪಿಸಿ, ಅನುಷಾ ವಂದಿಸಿದರು.