ಬಂಟ್ವಾಳ: ನಾರ್ವೆ ಹಾಗೂ ಸ್ವಿಜರ್ಲೆಂಡಿನ 5 ಮಂದಿ ರೋಟರಿ ಕ್ಲಬ್ ಸದಸ್ಯರ ತಂಡ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದಲ್ಲಿರುವ ಸಿದ್ದಕಟ್ಟೆ ಸರಕಾರಿ ಪ್ರೌಢಶಲೆಗೆ ಶುಕ್ರವಾರ ಭೇಟಿ ನೀಡಿತು.
ಈ ಶಾಲೆಯಲ್ಲಿ ನಾರ್ವೆ ಹಾಗೂ ಸ್ವಿಜರ್ಲೆಂಡ್ ರೋಟರಿ ಕ್ಲಬ್ನ ಆರ್ಥಿಕ ನೆರವಿನಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಬಾಲಕಿಯರ ಶೌಚಾಲಯ, ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಶಾಲಾ ಕೊಠಡಿಗಳ ಪುನರ್ ನವೀಕರಣ ಹಾಗೂ ಟೈಲ್ಸ್ ಅಳವಡಿಕೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಶಾಲೆಯ ಸಮಗ್ರ ಅಭಿವೃದ್ದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಂಟ್ವಾಳ ರೋಟರಿ ಕ್ಲಬ್ನ ಸಹಕಾರದಿಂದ ಕಳೆದ ವರ್ಷ ವಿವಿಧ 12 ರಾಷ್ಟ್ರಗಳ ರೋಟರಿ ಪ್ರತಿನಿಧಿಗಳು ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ್ದರು. ಇಲ್ಲಿನ ಪ್ರಾಂಶುಪಾಲ ರಮಾನಂದ ಅವರ ನೇತೃತ್ವದಲ್ಲಿ ಶಿಕ್ಷಕರು ಹಾಗೂ ಶಾಲಾಭಿವೃದ್ದಿ ಸಮಿತಿಯ ಸಹಕಾರದಿಂದ ಶಾಲೆಯ ಸಮಗ್ರ ಅಭಿವೃದ್ದಿ ಹಾಗೂ ಮಕ್ಕಳ ಕಲಿಕೆಗೆ ಅನುಗುಣವಾದ ಪೂರಕ ವಾತವರಣ ನಿರ್ಮಾಣವನ್ನು ಗಮನಿಸಿ ಹಾಗೂ ಇಲ್ಲಿನ ಇಂಟರಾಕ್ಟ್ ಕ್ಲಬ್ನ ಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತೆರಳಿದ್ದರು. ಈ ಭೇಟಿಯ ಪರಿಣಾಮವಾಗಿ ನಾರ್ವೆ ರೋಟರಿ ಕ್ಲಬ್, ಬಾಲಕಿಯರ ಶೌಚಾಲಯ ನಿರ್ಮಾಣ ಹಾಗೂ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ 3.6 ಲಕ್ಷ ರೂಪಾಯಿ ಹಾಗೂ ಸ್ವಿಜರ್ಲೆಂಡ್ ರೋಟರಿ ಕ್ಲಬ್ ಶಾಲಾ ಕೊಠಡಿ ನವೀಕರಣ ಹಾಗೀ ಟೈಲ್ಸ್ ಅಳವಡಿಕೆಗೆ 2.83 ಲಕ್ಷ ರೂಪಾಯಿಯನ್ನು ಕೊಡುಗೆಯಾಗಿ ನೀಡಿತ್ತು. ಈ ಎಲ್ಲಾ ಪ್ರಗತಿ ಕಾಮಗಾರಿಗಳನ್ನು ವೀಕ್ಷಿಸುವ ನಿಟ್ಟಿನಲ್ಲಿ ಈ ವಿದೇಶಿ ರೋಟರಿ ಸದಸ್ಯರ ತಂಡ ಶಾಲೆಗೆ ಭೇಟಿ ನೀಡಿದೆ.
ರೋಟರಿ ಕ್ಲಬ್ ವಲಯ 3181ರ ಗವರ್ನರ್ ಜೋಸೆಫ್ ಮ್ಯಾಥ್ಯು ಕಾರ್ಯಕ್ರಮ ಉದ್ಘಾಟಿಸಿದರು. ಆರ್ಥಿಕ ಸಹಕಾರ ನೀಡಿದ ವಿದೇಶಿ ರೋಟರಿ ಸದಸ್ಯರಿಗೆ ವಿದ್ಯಾರ್ಥಿಗಳು ಆರತಿ ಬೆಳಗಿ, ತಿಲಕ ಇಟ್ಟು, ತಾಂಬುಲ ನೀಡಿ ಸಾಂಪ್ರದಾಯಿಕವಾಗಿ ಸ್ವಾಗತಿಸಿಕೊಂಡರು. ಶಾಲೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಮಾತನಾಡಿ ನಾರ್ವೇ ಹಾಗೂ ಸ್ವಿಜರ್ಲೆಂಡಿನ ರೋಟರಿ ಸಂಸ್ಥೆಗಳ ಸಹಕಾರದಿಂದ ಸಿದ್ದಕಟ್ಟೆ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವುದು ಅಭಿನಂದನೀಯ ಕಾರ್ಯ ಎಂದರು.
ರೋಟರಿ ಗವರ್ನರ್ ಜೋಸೆಫ್ ಮ್ಯಾಥ್ಯು ಮಾತನಾಡಿ ಬಂಟ್ವಾಳ ರೋಟರಿ ಕ್ಲಬ್ನ ಸಹಕಾರದಿಂದಾಗಿ ವಿದೇಶದ ರೋಟರಿ ಸಂಸ್ಥೆಗಳು ಇಲ್ಲಿನ ಸರಕಾರಿ ಶಾಲೆಗೆ ಆರ್ಥಿಕ ನೆರವು ನೀಡಿದೆ. ಬಂಟ್ವಾಳ ರೋಟರಿ ಕ್ಲಬ್ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಿದೆ ಎಂದರು. ಮೂಲತಃ ಭಾರತೀಯರಾದ ನಾರ್ವೆಯ ರೋಟರಿ ಸದಸ್ಯ ರಾಜ್ ಪಟೋಲಿ ಮಾತನಾಡಿ ರೋಟರಿ ಕ್ಲಬ್ ನೀಡಿದ ಅನುದಾನದ ಮೊತ್ತವನ್ನು ಸದುಪಯೋಗ ಪಡಿಸಿಕೊಂಡು ಶಾಲೆಯನ್ನು ಅಭಿವೃದ್ದಿ ಪಡಿಸಲು ಶ್ರಮಿಸುತ್ತಿರುವುದು ಪ್ರಶಂಸನೀಯ ಎಂದರು.
ಈ ಸಂದರ್ಭ ಶಾಲಾ ಉಪಪ್ರಾಂಶುಪಾಲ ರಮಾನಂದ, ರೋಟರಿ ಕ್ಲಬ್ 3181ರ ಸಹಾಯಕ ಗವರ್ನರ್ ರಿತೇಶ್ ಬಾಳಿಗ, ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಶಿವಾನಿ ಬಾಳಿಗ, ಕಾರ್ಯದರ್ಶಿ ಸ್ಮಿತಾ ಸಲ್ದಾನ, ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಗುಲಾಬಿ ಶೆಟ್ಟಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಉಮೆಶ್ ಗೌಡ ಹಾಗೂ ಶಾಲಾ ಶಿಕ್ಷಕರು ಮೊದಲಾದವರು ಉಪಸ್ಥಿತರಿದ್ದರು.
ಬಿಟಿಡಬ್ಲ್ಯು_ಜ18_1
ಚಿತ್ರ: ನಾರ್ವೆ ಹಾಗೂ ಸ್ವಿಜರ್ಲೆಂಡಿನ ರೋಟರಿ ಕ್ಲಬ್ ಆರ್ಥಿಕ ಸಹಕಾರದಲ್ಲಿ ಸಿದ್ದಕಟ್ಟೆ ಶಾಲೆಗೆ ನೀಡಲಾದ ಮೂಲಭೂತ ಸೌಲಭ್ಯಗಳನ್ನು ರೋಟರಿ ಕ್ಲಬ್ ಗವರ್ನರ್ ಜೋಸೆಫ್ ಮ್ಯಾಥ್ಯು ಉದ್ಘಾಟಿಸಿದರು. ಈ ಸಂದರ್ಭ ಶಾಲಾ ಉಪಪ್ರಾಂಶುಪಾಲ ರಮಾನಂದ, ರೋಟರಿ ಕ್ಲಬ್ 3181ರ ಸಹಾಯಕ ಗವರ್ನರ್ ರಿತೇಶ್ ಬಾಳಿಗ, ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಶಿವಾನಿ ಬಾಳಿಗ, ಕಾರ್ಯದರ್ಶಿ ಸ್ಮಿತಾ ಸಲ್ದಾನ, ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಗುಲಾಬಿ ಶೆಟ್ಟಿ ಉಪಸ್ಥಿತರಿದ್ದರು.