ಕೊರೋನಾ ಲಾಕ್ಡೌನ್ನಿಂದ ಪತ್ರಕರ್ತರ ಒಂದು ವರ್ಗ ತೀವ್ರ ಸಂಕಷ್ಟಕ್ಕೀಡಾಗಿದೆ. ವೃತ್ತಿ ಗೌರವದ ಹಿನ್ನೆಲೆಯಲ್ಲಿ ಯಾರೂ ಈ ವಿಷಯ ಬಹಿರಂಗಗೊಳಿಸಿಲ್ಲ. ಮುಖ್ಯವಾಗಿ, ಯಾವುದೇ ಒಂದು ಪ್ರಿಂಟ್ ಮೀಡಿಯಾದಲ್ಲಿ ಅರೆಕಾಲಿಕ ಅಥವಾ ಸ್ಟಿಂಗರ್ ವರದಿಗಾರರಾಗಿ ಕೆಲಸ ಮಾಡುವ ಒಂದು ವರ್ಗವಿದೆ. ಇವರು ಸ್ಥಳೀಯವಾಗಿ ತಿಂಗಳಿಗೆ ಸಿಗುವ ಒಂದೆರಡು ಜಾಹೀರಾತುಗಳ ಕಮಿಶನ್ ಮತ್ತು ಪತ್ರಿಕಾ ಸಂಸ್ಥೆಯಿಂದ ಸಿಗುವ ಲೈನೇಜ್(ನಾಲ್ಕೈದು ಸಾವಿರ ರೂ) ಸಂಭಾವನೆಯಿಂದ ಜೀವನ ಸಾಗಿಸುತ್ತಿದ್ದಾರೆ. ಈಗ ಅದೂ ಇಲ್ಲ. ಕಳೆದ ಎರಡು ತಿಂಗಳಲ್ಲಿ ಈ ವಿಷಯದ ಬಗ್ಗೆ ಯಾರೂ ಚಕಾರವೆತ್ತಿಲ್ಲ. ಅಪೂರ್ವವೆಂಬಂತೆ ಬೆಂಗಳೂರಿನ ಪತ್ರಕರ್ತರೊಬ್ಬರು ಸ್ಟಿಂಗರ್ಗಳು ಡೇಂಜರ್ ಝೋನ್ನಲ್ಲಿರುವ ಸವಿವರ ನೀಡಿ, ಸರ್ಕಾರದ ಕಣ್ಣು ತೆರೆಸಲು ಪ್ರಯತ್ನಿಸಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಧ್ಯಮ ಮಿತ್ರರ ಸೇವೆ ಗುರುತಿಸಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಕೆಲವು ಕಡೆ ಶಾಸಕರು ದಿನಸಿ ಕಿಟ್ ನೀಡಿ ಹೊಗಳಿದ್ದುಂಟು. ಆದರೆ ಮಹಾಮಾರಿ ಕೊರೊನಾ ಕೇವಲ ಒಂದೆರಡು ಕಿಟ್ ಬರಿದಾಗುವವರೆಗೆ ಸೀಮಿತವಾಗಿಲ್ಲ. ಇದು ನಿರಂತರವೆಂಬುದು ಈಗಾಗಲೇ ಜನಜನಿತವಾಗಿದ್ದು, ಲಾಕ್ಡೌನ್ಗಿಂತಲೂ ಹೆಚ್ಚಾಗಿ ಪ್ರತಿಯೊಬ್ಬರು ತಮ್ಮ ಜೀವದ ಮೇಲಿನ ಆಸೆಯಿಂದ ಬದುಕಲು ಕಲಿಯಬೇಕಾಗುತ್ತದೆ. ಯಾಕೆಂದರೆ ಭವಿಷ್ಯದ ದಿನಗಳಲ್ಲಿ ನಮಗೆ ನಾವೇ ಬುದ್ಧಿ ಹೇಳಿಕೊಳ್ಳಬೇಕಾಗುತ್ತದೆ. ಕಾಲಾಯ ತಸ್ಮೆಯೆ ನಮಃ ಎಂಬಂತೆ ಅದನ್ನೆಲ್ಲ ಕಾಲವೇ ಕಲಿಸುತ್ತದೆ ಬಿಡಿ !
ಕೆಲವು ಪತ್ರಕರ್ತರ ಸಂಘಟನೆಗಳು ಹಾಗೂ ಕೆಲವರು ವೈಯಕ್ತಿಕವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಪತ್ರಕರ್ತರಿಗೆ ೫೦ ಲಕ್ಷ ರೂ ವಿಮೆ ಮಾಡುವಂತೆ ಕೋರಿದ್ದಾರೆ. ಅಂದರೆ, ನಮ್ಮವರೂ(ಪತ್ರಕರ್ತರು) ಭವಿಷ್ಯದ ಬಗ್ಗೆ ಚಿಂತಿಸಿದ್ದಾರೆ ಎಂದಾಯಿತು. ಆದರೆ, ಮೇಲೆಯೇ ಹೇಳಿದಂತೆ ಪ್ರಸ್ತುತ ಜೀವನವೇ ದುಸ್ತರವಾಗಿರುವ ಒಂದು ವರ್ಗದ ಪತ್ರಕರ್ತರ ಬಗ್ಗೆ ಈ ವಿಮೆ ಕೆಲಸಕ್ಕೆ ಬರುತ್ತದೆಯೇ ? ಎಲ್ಲ ವರ್ಗದ ಕಾರ್ಮಿಕರಿಗೆ ಸರ್ಕಾರ ತಿಂಗಳಿಗೆ ಒಂದು, ಎರಡು, ಮೂರು….ಹೀಗೆ ಐದು, ೧೦ ಸಾವಿರ ರೂ ಪ್ರಕಟಿಸಿ ಬ್ಯಾಂಕಿಗೆ ಜಮೆ ಮಾಡಿದೆ. ಆದರೆ ಕಡು ಬಡತನದಲ್ಲಿ ಜೀವನ ಸಾಗಿಸುವ ಒಂದು ವರ್ಗದ ಪತ್ರಕರ್ತರಿಗೆ ಸರ್ಕಾರದ ಯಾವ ಸಹಾಯವೂ ಬಂದಿಲ್ಲ. ಈ ಬಗ್ಗೆ ಹೇಳಿಕೊಳ್ಳೋಣವೆಂದರೆ, “ನಾನೊಬ್ಬ ಪತ್ರಕರ್ತ ನೋಡಿ, ಹೇಳಿಕೊಳ್ಳಲು ಮುಜುಗರವಾಗುತ್ತದೆ, ವೃತ್ತಿ ಗೌರವ ಅಡ್ಡಿಯಾಗುತ್ತದೆ” ಎಂದೆಲ್ಲ ಹೇಳುವುದುಂಟು.
ಅದೇನೇ ಇರಲಿ, ಮೋದಿ ಸರ್ಕಾರ ಘೋಷಿಸಿರುವ ಆಯುಷ್ಮಾನ್ ವಿಮೆ, ವರ್ಷಕ್ಕೆ ೩೩೬ ರೂ ಮತ್ತು ೧೨ ರೂ ವಿಮೆ ಸಾಮಾನ್ಯ ನಾಗರಿಕರಂತೆ ಈ ವರ್ಗದ ಪತ್ರಕರ್ತರಿಗೂ ಲಭ್ಯವಿದೆ. ಬಹುತೇಕ ಪತ್ರಕರ್ತರು ಈ ವಿಮೆ ಮಾಡಿಕೊಂಡಿರಬಹುದೆಂಬುದು ನನ್ನ ವಿಶ್ವಾಸ. ಮಾಡದಿದ್ದಲ್ಲಿ ಮಾಡಿಸಿಕೊಳ್ಳಲು ಇನ್ನೂ ಅವಕಾಶವಿದೆ. ಹೀಗೆ ಸರ್ಕಾರದ ಮೂರುಮೂರು ವಿಮೆ, ಉಳಿದಂತೆ ಮಾಡಿಸಿಕೊಂಡಿದ್ದರೆ `ಜೀವ ವಿಮೆ’ಯೂ ಇದ್ದಿರಬಹುದು. ಹಾಗಾಗಿ ಪತ್ರಕರ್ತರಿಗೆ ಇನ್ನೊಂದು ವಿಮೆ ಬೇಕೇ ಎಂಬುದು ಪ್ರಸಕ್ತ ಪ್ರಶ್ನೆಯಾಗಿದೆ. ಇದರ ಬದಲಾಗಿ ಎಲ್ಲ ಕಾರ್ಮಿಕರಿಗೆ ಸರ್ಕಾರ ಸಂದಾಯ ಮಾಡಿದಂತೆ ಸ್ಟಿಂಜರುಗಳಿಗೆ ತಿಂಗಳಿಗೆ ಐದು ಅಥವಾ ಅದಕ್ಕಿಂತ ಹೆಚ್ಚುಕಡಿಮೆ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದರೆ ಆಗದೇ ? ವಿಮೆ ಹಣ ಸತ್ತ ಮೇಲೆ ಸಿಗುತ್ತದೆ. ಪತ್ರಕರ್ತರಿಗೆ ಸಿಗಬಹುದಾದ ೫೦ ಲಕ್ಷ ಅಥವಾ ಅದಕ್ಕಿಂತ ಹೆಚ್ಚುಕಡಿಮೆ ಮೊತ್ತದ ಸ್ಥಿತಿಯೂ ಇದೇ ಆಗಿರುತ್ತದೆ. ಆ ಹಣ ಪಡೆಯುವ ಸಂದರ್ಭದಲ್ಲಿ ಪತ್ರಕರ್ತರ ಕುಟುಂಬಿಕರು ಕೊರೊನಾ ಬಾಧಿತರಾದರೆ ಭವಿಷ್ಯದಲ್ಲಿ ಸರ್ಕಾರದ ವಿಮೆ ಪಡೆಯುವವರೇ ಇಲ್ಲದಂತಾಗಬಹುದು. ಯಾಕೆಂದರೆ ಕೊರೊನಾ ಮಹಾಮಾರಿಯ ಸ್ಥಿತಿ ನಮ್ಮ ಈವರೆಗಿನ ಎಲ್ಲ ಸಂಶಯಗಳನ್ನೂ ಮೀರಿ ಸಾಗಬಹುದು. ಆದ್ದರಿಂದ ವರ್ತಮಾನದಲ್ಲೇ ವರ್ತಮಾನ ಪತ್ರಿಕೆಗಳಲ್ಲಿ ಕೆಲಸ ಮಾಡುವವರಿಗೆ ಸರ್ಕಾರ ಇನ್ನಷ್ಟು ವಿಮೆ ಬದಲಾಗಿ ಹಣಕಾಸಿನ ನೆರವು ಅಥವಾ ಯೋಜನೆ ರೂಪಿಸಿದರೆ ಒಳಿತಿದೆ ಎಂಬುದು ಆ ವರ್ಗದ ಪತ್ರಕರ್ತರ ದೂರಾಲೋಚನೆಯಾಗಿದೆ.
ಜಿಯುಆರ್-ಸ್ಟಿಂಗರ್