ಬಂಟ್ವಾಳ: ಇಲ್ಲಿನ ಕರೆಂಕಿ ಕ್ಷೇತ್ರಲಾಯಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಮಾರ್ಚ್ ತಿಂಗಳಿನಲ್ಲಿ ನಡೆಯಲಿದ್ದು ಈ ಹಿನ್ನಲೆಯಲ್ಲಿ ದೇವಸ್ಥಾನದ ಪರಿಸರದಲ್ಲಿ ಸ್ವಚ್ಛ ಭಾರತ ಅಭಿಯಾನ, ವಿಜ್ಞಾಪನಾ ಪತ್ರ ಹಾಗೂ ಲಕ್ಕಿಕೂಪನ್ ಬಿಡುಗಡೆ ಹಾಗೂ ಶ್ರಮದಾನದ ಮೂಲಕ ಮುಖ್ಯ ರಸ್ತೆಯ ದುರಸ್ತಿ ಕಾರ್ಯ ಭಾನುವಾರ ನಡೆಯಿತು.


ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಜ್ಞಾಪನಾ ಪತ್ರ ಹಾಗು ಲಕ್ಕಿ ಕೂಪನನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ ಮಾ.7ರಿಂದ ಮಾ.9ರವರೆಗೆ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು ಎಲ್ಲರೂ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಂಟ್ವಾಳ ತಾಲೂಕು ಕಾರ್ಯವಾಹ ದಾಮೋದರ ನೆತ್ತರಕೆರೆ ಸ್ವಚ್ಛ ಭಾರತ ಕಲ್ಪನೆಯ ಮಾಹಿತಿ ನೀಡಿದರು. ಈ ಸಂದರ್ಭ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಮೇಲ್ವಿಚಾರಕ ವಿನಯ ಗುನಗ, ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ವಿಠಲ ಡಿ, ದೇವಸ್ಥಾನದ ಅರ್ಚಕ ಗುರುರಾಜ್, ರಾಮಣ್ಣ ಕುಲಾಲ್, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಚಂದಪ್ಪ ಮೂಲ್ಯ, ಚಂದ್ರಶೇಖರ ಡೆಚ್ಚಾರ್, ಪತ್ರಕರ್ತ ರಾಜಾ ಬಂಟ್ವಾಳ ವೇದಿಕೆಯಲ್ಲಿದ್ದರು.
ಉದ್ಯಮಿಗಳಾದ ಹರೀಶ್ ತಾಕೋಡೆ, ಹರೀಶ್ ಕಡಮಲಿಕೆ, ಸಮಿತಿಯ ಪ್ರಮುಖರಾದ ಕೇಶಾವ ಆಚಾರಿಪಲ್ಕೆ ಬಾಲಕೃಷ್ಣ ಜಿ, ಮನೋಜ್, ಗಣೇಶ್ ಜಿ, ಮತ್ತಿತರರು ಹಾಜರಿದ್ದರು. ಆನಂದ ಕೆ. ಸ್ವಾಗತಿಸಿ, ಪೂವಪ್ಪ ಮೆಂಡನ್ ವಂದಿಸಿದರು.
ಬಳಿಕ ದೇವಸ್ಥಾನದ ಪರಿಸರದಲ್ಲಿದ್ದ ಕಸ, ಪ್ಲಾಸ್ಟಿಕ್ಗಳನ್ನು ತೆರವುಗೊಳಿಸಿ ಸ್ವಚ್ಚಗೊಳಿಸಲಾಯಿತು. ಮಣ್ಣಿಹಳ್ಳದಿಂದ ವಾಮದಪದವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಣಿ ಎಂಬಲ್ಲಿ ಹೊಂಡ ಗುಂಡಿಗಳಿಂದ ತುಂಬಿದ್ದು ಗ್ರಾಮಸ್ಥರು ಶ್ರಮದಾನ ನಡೆಸಿ ರಸ್ತೆ ದುರಸ್ತಿಗೊಳಿಸಿದರು. ಶ್ರೀ ಕ್ಷೇ. ಧ.ಗ್ರಾ.ಯೋಜನೆ, ರಾಷ್ಟ್ರೀಯ ಸ್ವಯಂಸೇವಕ ಸಂಘ ಬಂಟ್ವಾಳ, ಶ್ರೀ ದುರ್ಗಾ ಫ್ರೆಂಡ್ಸ್ ಕರೆಂಕಿ ಶ್ರೀ ದುರ್ಗಾ ಮಹಿಳಾ ಸಮತಿ ಮತು ಗ್ರಾಮಸ್ಥರ ಜಂಟಿ ಆಶ್ರಯದಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಆಯೋಜಿಸಲಾಯಿತು.
