ಬಂಟ್ವಾಳ:ಗ್ರಾಮೀಣಾಭಿವೃದ್ಧಿ,ಪಂಚಾಯತ್ ರಾಜ್ ಸಚಿವರಾದ ಕೆ.ಎಸ್ ಈಶ್ವರಪ್ಪರವರ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಕುರಿತಾದ ಸಭೆ ನಡೆಯಿತು.
ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಭಾಗವಹಿಸಿದ್ದರು. ಸಭೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಅಮ್ಮುಂಜೆ ಗ್ರಾಮದ 1215 ಮನೆಗಳು, ಬಡಗಬೆಳ್ಳೂರು ಗ್ರಾಮದ 823 ಮನೆಗಳು, ತೆಂಕಬೆಳ್ಳೂರು ಗ್ರಾಮದ 314 ಮನೆಗಳು,ಕಳ್ಳಿಗೆ ಗ್ರಾಮದ 1273 ಮನೆಗಳು, ಕರಿಯಂಗಳ ಗ್ರಾಮದ 890 ಮನೆಗಳಿಗೆ ಒಟ್ಟು 4 ಗ್ರಾ.ಪಂನ 51 ಜನ ವಸತಿಗಳ 4815 ಮನೆಗಳಿಗೆ ಕಾರ್ಯಾತ್ಮಕ ನಳ್ಳಿನೀರು ಸಂಪರ್ಕ ಒದಗಿಸುವ ಬಗ್ಗೆ ಕಾರ್ಯಯೋಜನೆ ರೂಪಿಸಲಾಗಿದ್ದು, ಸಚಿವರು ಅನುಮೋದನೆ ನೀಡಿ ತಕ್ಷಣವೇ ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಾಗೆಯೇ ಮಂಗಳೂರು ಹಾಗೂ ಮೂಡಬಿದಿರೆ ತಾಲೂಕಿನ ಜಲಜೀವನ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಚಿವ ಕೆ.ಎಸ್. ಈಶ್ವರಪ್ಪರವರು ಅನುಮೋದನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ,ಪಂಚಾಯತ್ ರಾಜ್ ಇಲಾಖೆಯ ಸರಕಾರದ ಪ್ರ.ಕಾರ್ಯದರ್ಶಿ ಎಲ್.ಕೆ ಅತಿಕ್,ಗ್ರಾಮೀಣ ಕುಡಿಯುವ ನೀರಿನ ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಇಂಜಿನೀಯರ್ ಹೊಳೆಯಾಜಿ ಉಪಸ್ಥಿತರಿದ್ದರು.