ಬಂಟ್ವಾಳ: ಕಳೆದ ತಿಂಗಳು ನಡೆದ ಗ್ರಾಮಪಂಚಾಯತ್ ಚುನಾವಣೆ ಮತ್ತು ಮುಂಜಾನೆಯವರೆಗಾದ ಮತ ಎಣಿಕೆ ಬಗ್ಗೆ ಗುರುವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿ, ಬಂಟ್ವಾಳ ತಾಲೂಕಿನಲ್ಲಿ ಚುನಾವಣಾ ಪ್ರಕ್ರಿಯೆಯೇ ಸಂಪೂರ್ಣ  ಗೊಂದಲ ಮತ್ತು ಅವ್ಯವಸ್ಥೆಯ ಅಗರವಾಗಿತ್ತು ಎಂದು ಸದಸ್ಯರು ಪಕ್ಷ ಭೇದ ಮರೆತು ತಾಲೂಕು ಕಂದಾಯ ಇಲಾಖೆಯ ವಿರುದ್ಧ ಅಸಮಾಧಾನ ,ಆಕ್ರೋಶ ವ್ಯಕ್ತ ಪಡಿಸಿದರು.DSC_8387

ಇಲಾಖಾವಾರು ಚರ್ಚೆಯ ವೇಳೆ ವಿಷಯ ಪ್ರಸ್ತಾವಿಸಿದ ಸದಸ್ಯ ಹೈದರ್ ಕೈರಂಗಳ ಅವರು ಚುನಾವಣೆಗೆ ಪೂರ್ವ ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯ ಇದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸದ ಕಾರಣ  ಚುನಾವಣೆಯಂದು ವಿದ್ಯುತ್ ದೀಪದ ಬೆಳಕಿಲ್ಲದೆ   ಮತದಾರರು  ಕತ್ತಲೆಯಲ್ಲಿ ಮತದಾನಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿತ್ತು‌. ಚುನಾವಣೆಯ ಹಿಂದಿನ ದಿನ ಮತಪೆಟ್ಟಿಗೆಯೊಂದಿಗೆ ಬಂದ ಸಿಬ್ಬಂದಿಗಳಿಗೆ  ಉಳಕೊಳ್ಳಲು,ಉಪಹಾರದ ವ್ಯವಸ್ಥೆಯು ಇರಲಿಲ್ಲ, ಮತ ಎಣಿಕೆಯ ದಿನದಂದು ಮಧ್ಯಾಹ್ನ ಎಣಿಕೆ ಕೇಂದ್ರಕ್ಕೆ ಹೋದ ಏಜೆಂಟರು,ಅಭ್ಯರ್ಥಿಗಳು ಮುಂಜಾನೆಯ ಹೊತ್ತಿಗೆ  ಹೊರಬೇಕಾಯಿತು.DSC_8384

ಆ ಸಂದರ್ಭ ಉಪಹಾರಕ್ಕು ವ್ಯವಸ್ಥೆ ಇರಲಿಲ್ಲ,ಕೆಲ ಸಿಬ್ಬಂದಿಗಳು ಮತ ಎಣಿಕೆಯ ವೇಳೆ  ಬಳಲಿ ತೂಕಡಿಸುತ್ತಿದ್ದ ದೃಶ್ಯಗಳು ಎಣಿಕಾ ಕೇಂದ್ರದಲ್ಲಿ ಕಂಡು ಬಂತು.  ಹೊರಗೆ ಪೊಲೀಸರು ಲಾಠಿ ಹಿಡಿದು ಅಟ್ಟಾಡಿಸುತ್ತಿದ್ದರು.  ಕೆಲ ಅಧಿಕಾರಿಗಳಿಂದಾಗಿ ಬೇಜವಾಬ್ದಾರಿಯಿಂದ  ಇದೇ ಮೊದಲ ಬಾರಿಗೆ ತಾಲೂಕಿನಲ್ಲಿ ಮುಂಜಾನೆಯ ವರೆಗೆ ಮತೆ ಎಣಿಕೆ ನಡೆಯುವಂತಾಗಿದೆ.ಇದು ಸರಿಯಾದ ಕ್ರಮವಲ್ಲ ಎಂದು ಹೈದರ್ ಅಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ,ಸದಸ್ಯರಾದ ಯಶವಂತ ಪೂಜಾರಿ, ರಮೇಶ್ ಕುಡ್ಮೇರ್,ಉಸ್ಮಾನ್ ಕರೋಪಾಡಿ,ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್ ಅವರು  ಮತದಾರರ ಪಟ್ಟಿ ಯಲ್ಲಿ ನ್ಯೂನ್ಯತೆ ,ವಾಡ್೯ ವಾರು ವಿಂಗಡಣೆಯಲ್ಲಾದ ಲೋಪದಿಂದ  ಮತದಾರರಿಗೆ ಆಗಿರುವ ಗೊಂದಲ ಎಸ್ಸಿ,ಎಸ್ಟಿ ಪಂಗಡದ ಅಭ್ಯರ್ಥಿಗಳಿಗೆ ಸರ್ಟಿಫಿಕೇಟ್ ಕೊಡುವ ವೇಳೆ ಉಂಟದ  ಅವ್ಯವಸ್ಥೆ,   ಗೊಂದಲ ಹೀಗೆ ಒಟ್ಟಾರೆಯಾಗಿ ಚುನಾವಣಾ ಪ್ರಕ್ರಿಯೆಯಲ್ಲಿಯೇ ಕಂದಾಯ ಇಲಾಖೆ ಸಂಪೂರ್ಣವಿಫಲವಾಗಿದೆ ಎಂದು ಅಸಮಾಧಾನ ಹೊರಹಾಕಿದರಲ್ಲದೆ.

ಇದು ವರೆಗೆ ತಾವು ಈ ರೀತಿಯ ಚುನಾವಣಾ ಪ್ರಕ್ರಿಯೆಯನ್ನೇ ಕಂಡಿಲ್ಲ ಎಂದು ಅಧ್ಯಕ್ಷ ಚಂದ್ರಹಾಸ ಕರ್ಕೇರ,ಎಂ.ಎಸ್. ಮಹಮ್ಮದ್ ಆಕ್ರೋಶ ವ್ಯಕ್ತಪಡಿಸಿದರು.ಈ ಹಂತದಲ್ಲಿ ಸಮಜಾಯಿಷಿ ನೀಡಿದ ಇಒ ರಾಜಣ್ಣ ಅವರು ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯದ ಬಗ್ಗೆ ಗ್ರಾಮ ಕರಣಿಕರು ಪರಿಶೀಲಿಸಿ ತಹಶೀಲ್ದಾರರಿಗೆ ವರದಿ ಸಲ್ಲಿಸಿದ ಬಳಿಕ ಅದನ್ನು ಅಂತಿಮಗೊಳಿಸಲಾಗುತ್ತಿದೆ.ಶಾಲೆಗಳಿಗೂ ಶಿಕ್ಷಣಾಧಿಕಾರಿ ಮೂಲಕ ತಿಳಿಸಲಾಗುತ್ತದೆ.ಸಿಬ್ಬಂದಿಗಳಿಗೆ ಅವರಿಗೆ ಸಿಗುವ ಗೌರವಧನದಿಂದಲೇ ಅವರು ಉಪಹಾರವನ್ನು ಮಾಡುವಂತೆ ಸೂಚಿಸಲಾಗಿದೆ  ಎಂದರು. ಭವಿಷ್ಯದಲ್ಲಿ ಸುವ್ಯವಸ್ಥಿತವಾಗಿ ಚುನಾವಣಾ ಪ್ರಕ್ರಿಯೇ ನಡೆಸುವಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ಪತ್ರ ಬರೆಯಲು  ನಿರ್ಣಯವನ್ನು ಕೈಗೊಂಡು ಚರ್ಚೆಗೆ ತೆರೆ ಎಳೆಯಲಾಯಿತು.

ರಾಜೀನಾಮೆ ಅಂಗೀಕಾರ:

ಸದಸ್ಯ ಕುಮಾರ ಭಟ್ ಅವರು  ವಯಕ್ತಿಕ ಕಾರಣದಿಂದ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ 25 ದಿನಗಳಾಗಿರುವ ಹಿನ್ನಲೆಯಲ್ಲಿ  ಇಒ ರಾಜಣ್ಣ ಸಭೆಗೆ ಮಂಡಿಸಿ ಅಂಗೀಕಾರ ಪಡೆದರು.

ಸ್ಪಷ್ಟನೆ ಬಯಸಿ ಪತ್ರ:

 ಅಡುಗೆ ಸಹಾಯಕರೊಬ್ಬರು ಗ್ರಾಪಂ ಗೆ ಸದಸ್ಯೆಯಾಗಿ ಚುನಾಯಿತರಾಗಿರುವುದರಿಂದ ಅವರನ್ನು ಅಡುಗೆ ಸಹಾಯಕ ಹುದ್ದೆಯಿಂದ ತೆರವುಗೊಳಿಸುವ ಕುರಿತ ವಿಚಾರ ಮತ್ತೆ ಚರ್ಚೆಗೆ ಕಾರಣವಾಯಿತು. ಚುನಾವಣಾ ಪೂರ್ವದಲ್ಲೆ ಚುನಾವಣಾ ಆರ್.ಒ.ಅವರಲ್ಲಿ ಚರ್ಚಿಸಲಾಗಿತ್ತು.ಆಗ ಅವರು ಈ ಬಗ್ಗೆ ಸಮರ್ಪಕ ಮಾಹಿತಿ ನೀಡಿರಲಿಲ್ಲ,ಮತ್ತು ಅಡುಗೆ ಸಹಾಯಕ ಹುದ್ದೆ ಲಾಭಾದಾಯಕವಲ್ಲ,ಈಗ ಹುದ್ದೆಯಿಂದ ತೆರವುಗೊಳಿಸುವುದು ಸರಿಯಲ್ಲ ಎಂದು ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್ ಹೇಳಿದರು.

ಅಧ್ಯಕ್ಷ ಚಂದ್ರಹಾಸ ಕರ್ಕೇರ,ಉಪಾಧ್ಯಕ್ಷ ಅಬ್ಬಾಸ್ ಆಲಿ,ಸದಸ್ಯರಾದ ರಮೇಶ್ ಕುಡ್ಮೇರು,ಯಶವಂತಪೂಜಾರಿ ಅವರು ದ್ವನಿಗೂಡಿಸಿದರು.ಆಗ ಇಒ ರಾಜಣ್ಣ ಉತ್ತರಿಸಿ ಏಕಕಾಲದಲ್ಲಿ  2 ಹುದ್ದೆ ನಿರ್ವಹಿಸಲು ತೊಂದರೆಯಾಗಬಹುದೆಂಬ ಹಿನ್ನಲೆಯಲ್ಲಿ ಒಂದು ಹುದ್ದೆ ತೆರವುಗೊಳಿಸಲು ಸೂಚಿಸಲಾಗುತ್ತಿದೆ ಎಂದರು. ಇದಕ್ಕೆ ಸದಸ್ಯರಿಂದ ಆಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ ಸರಕಾರದಿಂದ ಸ್ಪಷ್ಟನೆ ಬಯಸಿ ಪತ್ರ ಬರೆಯಲು ನಿರ್ಧರಿಸಲಾಯಿತು.

 ಅನುಷ್ಠಾನಕ್ಕೆ ಬರುತ್ತಿಲ್ಲ:

ಸಭೆಯಲ್ಲಿ ಚರ್ಚೆಯಾದ ವಿಷಯ ನಿರ್ಣಯವಾಗುತ್ತದೆಯೇ ವಿನಹ ಅದು ಅನುಷ್ಠಾನಕ್ಕೆ ಮಾತ್ರ ಬರುವುದಿಲ್ಲ,ಹಾಗಾದರೆ ನಾವು ಚಾ,ಊಟ ಮಾಡಲು ಸಭೆಗೆ ಬರುವುದೇ ಎಂದು ಉದಾಹರಣೆ ಸಹಿತವಾಗಿ ಆಡಳಿತ ಪಕ್ಷದ ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

30 ಸಕ್ರಿಯ ಪ್ರಕರಣ:

ಬಂಟ್ವಾಳ ತಾಲೂಕಿನಲ್ಲಿ 30 ಸಕ್ರಿಯ ಕೊರೊನಾ ಪ್ರಕರಣಗಳಿವೆ.ಜನವರಿಯಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿ ಆಗಿದೆ. ಈ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ವೈದ್ಯಾಧಿಕಾರಿ ಹೇಳಿದರು. ಬಂಟ್ವಾಳ ತಾಲೂಕಿನಲ್ಲಿ ಹಕ್ಕಿಜ್ವರ ಬಾರದಂತೆ ಪ್ರತಿಬಂಧಕಗಳನ್ನು ಮಾಡಲಾಗಿದ್ದು,ತಾಲೂಕಿನ ಸಾರಡ್ಕ ಮತ್ತು ಉಕ್ಕುಡದಲ್ಲಿ ಚೆಕ್ ಪೋಸ್ಟ್ ರಚಿಸಲಾಗಿದೆ. ಕೇರಳದಿಂದ ಕೋಳಿ ಸಾಗಾಟ ವಾಹನಗಳು ಬರುವಾಗ ತಪಾಸಣೆ ಮಾಡಲಾಗುತ್ತಿದೆ ಎಂದು ಬಂಟ್ವಾಳ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ. ಅವಿನಾಶ್ ಭಟ್ ತಿಳಿಸಿದರು.

ಎಪ್ರಿಲ್ ಗೆ 219 ರೂ. ಡಿಸೆಂಬರ್ ಗೆ 11078 ರೂ.ಬಿಲ್ಲು:ಕರೋಪಾಡಿಯ ಪರಿಸರದ ಪ.ಪಂ.ದ ವ್ಯಕ್ತಿಯೊಬ್ಬರಿಗೆ ಎಪ್ರಿಲ್ 2020 ರಲ್ಲಿ 219 ರೂ.ವಿದ್ಯುತ್ ಬಿಲ್ಲು ಬಂದಿದ್ದರೆ ಆದೇ ವರ್ಷ ಡಿಸೆಂಬರ್ ಗೆ 11,078 ರೂ .ಬಂದಿದೆ. ಈ ಎರಡು ಬಿಲ್ಲನ್ನು ವಿಟ್ಲ ಮೆಸ್ಕಾಂನವರೇ ನೀಡಿದ್ದಾರೆ.

ಇದರಲ್ಲಿ  ಎರಡೂವರೆ ಸಾ.ರೂ.ಆವ್ಯಕ್ತಿ ಪಾವತಿಸಿದ್ದಾನೆ. ಉಳಿದ ಹಣ ಪಾವತಿಗೆ ತಲೆ ಮೇಲೆ ಕೈ ಇಟ್ಟು ಕೂತಿದ್ದಾನೆ ಎಂದು ಸದಸ್ಯ ಉಸ್ಮಾನ್ ಸಭೆಯ ಗಮನ ಸೆಳೆದರು.ಇದಕ್ಕೆ ದ್ವನಿಗೂಡಿಸಿದ ಸದಸ್ಯರು ಇತ್ತೀಚಿನ ದಿನಗಳಲ್ಲಿ ಮನೆ ಖರ್ಚಿಗಿಂತ ವಿದ್ಯುತ್ ಬಿಲ್ಲೇ ಅತೀಯಾಗುತ್ತಿದೆ ಎಂದು ದೂರಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ ವೇದಿಕೆಯಲ್ಲಿದ್ದರು.

By suddi9

Leave a Reply

Your email address will not be published. Required fields are marked *