ಬಂಟ್ವಾಳ:ಕೇವಲ ಜನಪ್ರಿಯತೆಗೋಸ್ಕರ ಮಹಾರಾಷ್ಟ್ರ ಮುಖ್ಯಮಂತ್ರಿ ಪದೇ ಪದೇ ಗಡಿ ವಿಚಾರ ತೆಗೆಯುತ್ತಿದ್ದಾರೆ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಬಂಟ್ವಾಳದಲ್ಲಿ ಭಾನುವಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟನೆಗೆ ಆಗಮಿಸಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕರ್ನಾಟಕದ ಭೂಮಿ ಬಗ್ಗೆ ಮಾತನಾಡಿದರೆ ಮರಾಠಿಗರು ತನ್ನ ಪರವಾಗಿ ಇರುತ್ತಾರೆ ಎನ್ನುವ ಭ್ರಮೆಯಲ್ಲಿ ಅವರಿದ್ದಾರೆ. ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮವಾಗಿದ್ದು, ಈ ವರದಿ ನೀಡಿದ ಬಳಿಕವೂ ಹುಚ್ಚು ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಶಾಸಕ ಬಸವರಾಜ ಪಾಟೀಲ ಯತ್ನಾಳ್ ಹೇಳಿದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿ, ಈ ವಿಚಾರ ಬಿಟ್ಟು ಬೇರೆ ಏನಾದ್ರು ಕೇಳಿ ಉತ್ತರಿಸುತ್ತೇನೆ ಎಂದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಿತ ಇಲ್ಲಿನ ಶಾಸಕರು ಒಟ್ಟಾಗಿ ಕುಳಿತು ಚಹಾ ಕುಡಿದು ಮಾತುಕತೆ ನಡೆಸಿದರೆ ಇದನ್ನೂ ಮುಖ್ಯಮಂತ್ರಿ ವಿರುದ್ಧ ಪ್ರತ್ಯೇಕ ಸಭೆ ಎನ್ನಲು ಆಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಮೂಲಬಿಜೆಪಿ, ವಲಸೆ ಬಿಜೆಪಿ ಎಂಬುದು ಇಲ್ಲ. ಅದು ಮಾಧ್ಯಮ ಸೃಷ್ಟಿ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು , ಇದ್ದರು.