ಸುದ್ದಿ9ಉಡುಪಿ: ಬೈಂದೂರಿನ ರತ್ನಾ ಕೊಠಾರಿ ಅನ್ನೋ ಅಪ್ರಾಪ್ತ ಬಾಲಕಿಯ ಸಾವಿಗೆ ಮೂರು ತಿಂಗಳು ತುಂಬಿದೆ. ಹೈದರಾಬಾದಿನ ವಿಧಿ ವಿಜ್ಞಾನ ಪ್ರಯೋಗಾಲಯ ಆಕೆಯ ಕೊಲೆ ನಡೆದಿಲ್ಲ, ಅನಾರೋಗ್ಯದ ಕಾರಣದಿಂದಾಗಿ ಇಲ್ಲವೇ ಇನ್ನಿತರ ಕಾರಣಕ್ಕೆ ಸಹಜ ಸಾವು ಸಂಭವಿಸಿದೆ ಎಂದು ವರದಿ ನೀಡಿದೆ. ಆದರೆ ಡಿಎನ್ಎ ವರದಿ ಇನ್ನಷ್ಟೇ ಪೊಲೀಸರ ಕೈಸೇರಬೇಕಿದ್ದು, ಆ ಬಳಿಕವಷ್ಟೇ ಪ್ರಕರಣದ ಸಂಪೂರ್ಣ ಚಿತ್ರಣ ಹೊರಬೀಳುವ ಸಾಧ್ಯತೆಯಿದೆ.
ಘಟನೆಯ ಹಿನ್ನೆಲೆ: ಬೈಂದೂರಿನ ಸರಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿಕೊಂಡಿದ್ದ ರತ್ನಾ ಜುಲೈ 9ರಂದು ಮನೆಗೆ ಬರುವ ದಾರಿಯಲ್ಲಿ ತೂದಳ್ಳಿ ಸೇತುವೆ ಸಮೀಪ ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದಳು. ಬಡಕುಟುಂಬಕ್ಕೆ ಸೇರಿದ ಆಕೆ ಕಾಣೆಯಾದ ಕೂಡಲೇ ಹೆತ್ತವರು ಆತಂಕಗೊಂಡು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಪೊಲೀಸರು, ಸ್ಥಳೀಯರೂ ಅವರ ಜೊತೆ ಸೇರಿಕೊಂಡು ಇದೇ ತೂದಳ್ಳಿ ಸೇತುವೆ, ಪಕ್ಕದ ಗುಡ್ಡ ಎಲ್ಲವನ್ನೂ ಜಾಲಾಡಿದ್ದರು. ಆದರೂ ರತ್ನಾ ಸುಳಿವು ಸಿಕ್ಕಿರಲಿಲ್ಲ. ಆದರೆ ಶನಿವಾರ ಜುಲೈ 12ರ ಮುಂಜಾನೆ ರತ್ನಾ ಶವ ಅಲ್ಲೇ ಪಕ್ಕದ ಸೇವಂತಗುಡ್ಡ ಪ್ರದೇಶದಲ್ಲಿ ಪತ್ತೆಯಾಗುವುದರೊಂದಿಗೆ ಹುಡುಕಾಟಕ್ಕೆ ತೆರೆಬಿತ್ತು.
ಪೊಲೀಸರಿಂದ ತನಿಖೆ:
ಕಾಲೇಜ್ ವಿದ್ಯಾರ್ಥಿನಿ ರತ್ನಾ ಕೊಠಾರಿ ನಾಪತ್ತೆಯಾಗಿ ಶವವಾಗಿ ಪತ್ತೆಯಾದ ಕೂಡಲೇ ಸ್ಥಳೀಯ ಸಂಘಟನೆಗಳು ಪೊಲೀಸರಲ್ಲಿ ಒತ್ತಡ ಹೇರಿದವು. ಪೊಲೀಸ್ ವರಿಷ್ಠಾಧಿಕಾರಿ ಬೋರಲಿಂಗಯ್ಯ ಅವರು ಖುದ್ದು ತನಿಖೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ಬೈಂದೂರು ಠಾಣಾ ಸರ್ಕಲ್ ಇನ್ಸ್ಪೆಕ್ಟರ ಸುದರ್ಶನ್ ನೇತೃತ್ವದಲ್ಲಿ ವಿಶೇಷ ತಂಡವನ್ನೂ ರಚಿಸಲಾಯಿತು. ರತ್ನಾ ಕೊಠಾರಿ ಮನೆಗೆ ಹೋಗುವುದನ್ನು ದಾರಿಯಲ್ಲಿ ಕಂಡವರಿದ್ದರು. ಆದರೆ ನಂತರ ಆಕೆ ಎಲ್ಲಿ ಹೋದಳು ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ರತ್ನಾ ಕೊಠಾರಿ ಕಾಣೆಯಾಗುವ ದಿನ ಆ ರಸ್ತೆಯಲ್ಲಿ ಬಂದವರನ್ನೆಲ್ಲ ವಿಚಾರಣೆ ನಡೆಸಲಾಯಿತು. ಕಾರ್, ಬೈಕ್ ಸವಾರರನ್ನು ಬಿಡದೆ ವಿಚಾರಣೆ ಮಾಡಲಾಯಿತು. ಆದರೆ ಫಲಿತಾಂಶ ಮಾತ್ರ ಶೂನ್ಯ.
ಜಿಲ್ಲೆಯೆಲ್ಲೆಡೆ ಪ್ರತಿಭಟನೆಯ ಕಾವು:
ಯಾವಾಗ ರತ್ನಾ ಕೊಠಾರಿ ನಿಗೂಢ ಸಾವಿನ ರಹಸ್ಯ ಬೇಧಿಸುವುದು ಪೊಲೀಸರಿಂದ ವಿಳಂಬವಾಯಿತೋ… ಆಗ ಜಿಲ್ಲೆಯ ವಿವಿಧ ಸಾಮಾಜಿಕ ಸಂಘಟನೆಗಳು ಪ್ರತಿಭಟನೆಗೆ ಇಳಿದವು. ಪೊಲೀಸರ ಕಾರ್ಯವೈಖರಿ ಖಂಡಿಸಿ ಕುಂದಾಪುರ ತಾಲೂಕು ಬಂದ್ ಕರೆ ನೀಡಲಾಯಿತು. ಹಿಂದೂ ಸಂಘಟನೆಗಳು, ವಿದ್ಯಾರ್ಥಿನಿಯರ ಸಂಘಟನೆಗಳು ಮಾತ್ರವಲ್ಲದೆ ನೂರಾರು ಸಾಮಾಜಿಕ ಸಂಘಟನೆಗಳು ಹೋರಾಟಕ್ಕೆ ಇಳಿದಿದ್ದರಿಂದ ಎಲ್ಲೆಡೆ ಪ್ರತಿಭಟನೆಯ ಕಾವು ಏರಿತು. ಕೇಮಾರು ಈಶ ವಿಠಲದಾಸ ಸ್ವಾಮೀಜಿ ನೇತೃತ್ವದಲ್ಲಿ `ಜಸ್ಟೀಸ್ ಫಾರ್ ಕುಮಾರಿ ರತ್ನಾ’ ಹೋರಾಟ ಕೂಡಾ ಆರಂಭವಾಯಿತು.
ವಾರದ ಹಿಂದಷ್ಟೇ ಬಂತು ರಿಪೋರ್ಟರ್:
ರತ್ನಾ ಕೊಠಾರಿ ಸಾವಿನ ರಹಸ್ಯ ಬೇಧಿಸಲು ಆಕೆಯ ದೇಹದ ವಿವಿಧ ಭಾಗಗಳ ಸ್ಯಾಂಪಲ್ ಅನ್ನು ಹೈದರಾಬಾದ್ನಲ್ಲಿರುವ ಫೊರೆನ್ಸಿಕ್ ಲ್ಯಾಬ್ಗೆ ಕಳುಹಿಸಿಕೊಡಲಾಗಿತ್ತು. ಹೈದರಾಬಾದಿನಲ್ಲಿ ಮಾತ್ರ ವಿಧಿವಿಜ್ಞಾನ ಪ್ರಯೋಗಾಲಯ ಇರುವ ಕಾರಣ ರಿಪೋರ್ಟರ್ ವಿಳಂಬವಾಗುತ್ತದೆ ಎಂದು ಹೇಳಲಾಗಿತ್ತು. ಇದೀಗ ಮೂರು ತಿಂಗಳು ಸರಿಯುವಷ್ಟರಲ್ಲಿ ಪೋಸ್ಟ್ ಮಾರ್ಟಂ ಹಾಗೂ ಫೊರೆನ್ಸಿಕ್ ರಿಪೋರ್ಟರ್ ಬಂದಿದ್ದು ಎರಡರಲ್ಲೂ ಆಕೆಯ ಸಾವು `ನ್ಯಾಚುರಲ್’ ಎಂದು ಬರೆಯಲಾಗಿದೆ. ಮೃತದೇಹದ ಡಿಎನ್ಎ ವರದಿ ಮಾತ್ರ ಇನ್ನಷ್ಟೇ ಬರಬೇಕಿದೆ.
ಸದ್ದಡಗಿದ ಪ್ರತಿಭಟನೆಗಳು:
ಎಲ್ಲ ಪ್ರಕರಣಗಳಂತೆ ರತ್ನಾ ಕೊಠಾರಿ ಪ್ರಕರಣದಲ್ಲೂ ಕೆಲವು ಸಾಮಾಜಿಕ ಸಂಘಟನೆಗಳು ಆರಂಭ ಶೂರತ್ವ ಮೆರೆದಿವೆ. ಬಂದ್, ಪ್ರತಿಭಟನೆ, ಹೋರಾಟ ಎಂದೆಲ್ಲ ಬೊಬ್ಬಿರಿಯುತ್ತಿದ್ದ ಹೋರಾಟಗಾರರು ನಂತರದ ದಿನಗಳಲ್ಲಿ ಒಮ್ಮಿಂದೊಮ್ಮೆಲೇ ಕಾಣೆಯಾಗಿದ್ದಾರೆ. ರತ್ನಾ ಕೊಠಾರಿ ಸಾವಿನ ಒಂದು ತಿಂಗಳಲ್ಲಿ ಮಾತ್ರ ಉಡುಪಿ ಜಿಲ್ಲೆಯ ಅಲ್ಲಲ್ಲಿ ಹೋರಾಟ ನಡೆಸಿದ ವಿದ್ಯಾಥರ್ಿ ಸಂಘಟನೆಗಳು, ಸಾಮಾಜಿಕ ಸಂಘಟನೆಗಳ ನಾಯಕರಿಗೆ ಈಗ ರತ್ನಾ ಕೊಠಾರಿ ಯಾರೆಂದು ವಿವರಿಸಿ ಹೇಳಬೇಕಾದ ಪರಿಸ್ಥಿತಿ ಬಂದಿದೆ.
`ತನಿಖೆ ಮುಂದುವರಿದಿದೆ’
-ಸುದರ್ಶನ್, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್
`ರತ್ನಾ ಕೊಠಾರಿ ನಿಗೂಢ ಸಾವಿನ ಕುರಿತಂತೆ ತನಿಖೆ ನಡೆಯುತ್ತಿದೆ. ಆಕೆಯ ಸಾವಿನ ಕುರಿತಂತೆ ಇರುವ ಸಂಶಯ ಫೊರೆನ್ಸಿಕ್ ವರದಿಯಿಂದ ಅಲ್ಪಮಟ್ಟಿಗೆ ನಿವಾರಣೆಯಾಗಿದ್ದರೂ ಆಕೆಯ ಸಾವಿಗೆ ಇದೇ ಕಾರಣ ಎಂದು ಹೇಳುವಂತಿಲ್ಲ. `ನ್ಯಾಚುರಲ್ ಡೆತ್’ ಅಂದರೆ ಹೃದಯಾಘಾತ, ಉಸಿರು ಕಟ್ಟುವಿಕೆ ಹಾಗೂ ಇನ್ನಿತರ ಕಾರಣಗಳಿಂದ ಸಾವು ಸಂಭವಿಸಿರುವ ಸಾಧ್ಯತೆಯಿದೆ. ಇನ್ನು ತನಿಖೆಗೆ ಪೂರಕವಾಗಿ ಡಿಎನ್ಎ ಟೆಸ್ಟ್ ನಡೆಸಲಾಗಿದ್ದು, ಅದರ ವರದಿಗಾಗಿ ಕಾಯಲಾಗುತ್ತಿದೆ’
ರತ್ನಾ ಕೊಠಾರಿ ಪ್ರಕರಣ ಸದ್ಯ ಉಡುಪಿ ಜಿಲ್ಲೆಯ ಜನರು ಮರೆತಿದ್ದಾರೆ. ಆದರೆ ಆಕೆಯ ಬಡಪಾಯಿ ಹೆತ್ತವರು ಇನ್ನೂ ಕಣ್ಣೀರು ಸುರಿಸುತ್ತಿದ್ದಾರೆ. ಹಾಸಿಗೆ ಹಿಡಿದಿರುವ ಅಮ್ಮ, ಕೂಲಿ ಕೆಲಸ ಮಾಡಿಕೊಂಡಿರುವ ಅಪ್ಪ, ಮನೆಗೆ ಜವಾಬ್ದಾರಿ ನೋಡಿಕೊಂಡಿರುವ ಮಗ ಇವರೆಲ್ಲ ರತ್ನಾ ಕೊಠಾರಿ ಸಾವಿಗೆ ನ್ಯಾಯ ಕೊಡಿಸಲೇಬೇಕು ಎಂದು ಹೋರಾಡುವಷ್ಟು ಶ್ರೀಮಂತರಲ್ಲ. ಸಾಮಾಜಿಕ ಸಂಘಟನೆಗಳು ತಮ್ಮ ಜವಾಬ್ದಾರಿ ಮರೆಯದೇ ಇದ್ದಲ್ಲಿ ರತ್ನಾಳಂಥ ಬಡ, ಅಮಾಯಕ ಹೆಣ್ಮಕ್ಕಳ ಸಾವಿನ ಸರಣಿ ನಿಲ್ಲಬಹುದೇನೋ…


