ಹುಬ್ಬಳ್ಳಿ: ಭಾರತ ಮತ್ತು ಪಾಕಿಸ್ತಾನದ ಗಡಿ ಸಮಸ್ಯೆಯಿಂದ ಮುಂದಿನ ಯುಗಾದಿಯೊಳಗೆ ಯುದ್ದ ಸಂಭವಿಸಲಿದೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿವರು ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿಯ ಗೋಪನಕುಪ್ಪದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ರಾಜಕೀಯ ಸ್ಥಿರತೆ, ಅಸ್ಥಿರತೆ, ಅತಿವೃಷ್ಠಿ, ಅನಾವೃಷ್ಠಿಯ ಬಗ್ಗೆ ಭವಿಷ್ಯ ನುಡಿಯುತ್ತಿದ್ದ ಶ್ರೀಗಳು, ಎರಡು ರಾಷ್ಟ್ರಗಳ ನಡುವೆ ಗಡಿ ಸಮಸ್ಯೆ ಉಲ್ಭಣಿಸುತ್ತಿದೆ. ಮುಂದಿನ ದಿನಗಳಲ್ಲಿ ಅಂದರೆ ಬರುವ ಯುಗಾದಿಯೊಳಗೆ ಎರಡು ದೇಶಗಳ ನಡುವೆ ಯುದ್ದ ನಡೆಯುವ ಸಂಭವವಿದೆ ಎಂದು ಹೇಳಿದ್ದಾರೆ.
ಈ ಹಿಂದೆ ‘ನಡೆಯುವ ಹಾದಿ ಮೂರು ಕವಲಾಯಿತು, ಮುತ್ತಿನಗಿಣಿ ಮುಪ್ಪಾಯಿತು, ನಡೆಯುವ ಹಾದಿ ಮೂರು ಕವಲಾಯಿತು, ಮುದುಕನ ಕೋಲ ಮೇಲೆ ಕಾಗಿ ಕುಳಿತಿತೋ’ ಎಂದು ನುಡಿದಿದ್ದೆ ಅದರಂತೆ ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿತು. ಮಳೆ ಹೆಚ್ಚಾಗಲಿದೆ, ಮಳೆಯಿಂದ ಸಮಸ್ಯೆಯೂ ಹೆಚ್ಚಾಗಲಿದೆ ಎಂದು ಶ್ರೀಗಳು ಭವಿಷ್ಯ ಹೇಳಿದರು.
ಗಡಿ ಸಮಸ್ಯೆ ಅಲ್ಲದೇ, ಮುಂಬರುವ ಸಂಕ್ರಾತಿಯವರೆಗೆ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತಪ್ಪಿದ್ದಲ್ಲ. ಸಂವಿಧಾನದ ಮೂರು ಅಂಗಗಳಲ್ಲಿನ ಪ್ರಮುಖ ವ್ಯಕ್ತಿಗಳಿಗೆ ಆಪತ್ತು ತಪ್ಪಿದ್ದಲ್ಲ ಎಂದು ಕೋಡಿಶ್ರೀಗಳು ಎಚ್ಚರಿಸಿದ್ದಾರೆ. ನಾನು ಹೇಳುವ ಸತ್ಯ ಕೆಲವರಿಗೆ ಪ್ರಿಯವಾಗುವುದಿಲ್ಲ ಎನ್ನುವ ಮಾತನ್ನು ಪುನರುಚ್ಚಿಸಿದ ಶ್ರೀಗಳು, ನನ್ನ ಒಗಟಿನ ಭವಿಷ್ಯದ ಸತ್ಯಾಸತ್ಯತೆಯನ್ನು ನಂಬುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರ, ನನ್ನ ಭವಿಷ್ಯವನ್ನು ನಂಬಿ ಎನ್ನುವುದು ನನ್ನ ಕೆಲಸವಲ್ಲ ಎಂದಿದ್ದಾರೆ.
ಧಾರವಾಡದಲ್ಲಿ ಇದೇ ವರ್ಷ ಜೂನ್ ತಿಂಗಳಲ್ಲಿ ಭವಿಷ್ಯ ನುಡಿದಿದ್ದ ಶ್ರೀಗಳು, ರಾಜ್ಯದಲ್ಲಿ ಸರಕಾರಕ್ಕೆ ಬಹುಮತವಿದ್ದರೂ ಅಸ್ಥಿರತೆ ಕಾಡುತ್ತಿದೆ. ಆದರೂ, ಸಿದ್ದು ಸರಕಾರಕ್ಕೆ ಸದ್ಯದ ಮಟ್ಟಿಗೆ ತೊಂದರೆಯಿಲ್ಲ ಎಂದಿದ್ದರು.