ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ.) ಬಿ.ಸಿ.ಟ್ರಸ್ಟ್ (ರಿ) ಬಂಟ್ವಾಳ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬಂಟ್ವಾಳ ವಲಯದ ವತಿಯಿಂದ ಪರಿಸರ ಮಾಹಿತಿ ಕಾರ್ಯಕ್ರಮ ಹಾಗೂ ಸ್ವಸಹಾಯ ಸಂಘದ ಲಾಭಾಂಶ ವಿತರಣೆ ಕಾರ್ಯಕ್ರಮ ಕನಪಾದೆ ಸತ್ಯದೇವತಾ ಗೆಳೆಯರ ಬಳಗ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಅವರು ಮಾತನಾಡಿ ಪ್ರತಿಯೊಬ್ಬರು ಪ್ರೀತಿ , ವಿಶ್ವಾಸ ನಂಬಿಕೆಗೆ ಚ್ಯುತಿ ಬರದ ರೀತಿಯಲ್ಲಿ ಬದುಕಿದಾಗ ಜೀವನದಲ್ಲಿ ಸಾರ್ಥಕತೆ ಪಡೆಯಲು ಸಾಧ್ಯ ಎಂದು ಅವರು ಹೇಳಿದರು. ಇಂತಹ ಸಂಘಟನೆಯ ಮೂಲಕ ಆರ್ಥಿಕವಾಗಿ ಸದೃಢ ಹೆಜ್ಜೆಯನ್ನು ಇಡುವ ಜೊತೆಗೆ ಸಂಸ್ಕಾರಯುತ ಬದುಕಿಗೆ ಸಹಾಯ ವಾಗುತ್ತದೆ ಎಂಬುದು ಶ್ರೀ ಕ್ಷೇತ್ರ ಧರ್ಮಸ್ಥಳ ಹೆಗ್ಗಡೆಯವರ ಕಂಡ ಕನಸು ಅಗಿದ್ದು ಪ್ರಸ್ತುತ ನನಸಾಗಿದೆ ಎಂದು ಅವರು ಹೇಳಿದರು.
ಸಂಘಟನಾತ್ಮಕ ಅಭಿವೃದ್ಧಿಯ ಜೊತೆ ಸಾಮಾಜಿಕ ಕಳಕಳಿಯ ಕಾರ್ಯ ಕ್ರಮಗಳು ನಡೆಯುತ್ತಿರುವುದು ಅಭಿನಂದನೀಯ ಎಂದರು. ವಾತಾವರಣದ ಸಮತೋಲನದ ಮೇಲೆ ನಿಯಂತ್ರಣ ಸಾಧಿಸಲು ಮರಗಳಿಂದ ಸಾಧಿಸಲು ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು , ಹಣ್ಣು , ಹಂಪಲು, ಔಷಧೀಯ ಗುಣಗಳುಳ್ಳ ಹೆಚ್ಚು ಗಿಡಗಳ ನೆಡುವ ಜೊತೆ ಸಂರಕ್ಷಣೆ ಜವಬ್ದಾರಿ ವಹಿಸಿಕೊಳ್ಳಿ ಎಂದು ಅವರು ಹೇಳಿದರು.
ಕಳೆದ ವರ್ಷ 146 ಕೋಟಿ ಸಾಲ ವಿತರಣೆ ಆಗಿದ್ದು 60 ಮಂದಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಯ ಸೇವಾ ಕಾರ್ಯಕರ್ತರು ಸಾಲ ನೀಡುವಲ್ಲಿ ಕಳಂಕ ರಹಿತವಾಗಿ ಕೆಲಸ ಮಾಡಿರುವುದು ಇತರರಿಗೆ ಮಾದರಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ವಲಯದ ವಲಯ ಅಧ್ಯಕ್ಷ ವಸಂತ ಮೂಲ್ಯ ಅವರು ಮಾತನಾಡಿ ಸಂಘದ ಬೆಳವಣಿಗೆಯ ದೃಷ್ಟಿಯಿಂದ ಸದಸ್ಯರು ತಮ್ಮ ಜವಬ್ದಾರಿ ಗಳನ್ನು ಯಾವ ರೀತಿಯಲ್ಲಿ ನಿರ್ವಹಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಕಳೆದ 9 ವರ್ಷಗಳಿಂದ ಸಂಘದ ಲ್ಲಿ ಸೇವಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿ ಅನಾರೋಗ್ಯದ ಕಾರಣ ನಿವೃತ್ತಿ ಹೊಂದಿದ ಶಾಂತ ಅವರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು. ಕನಪಾದೆಯಲ್ಲಿ ಸಮೀಪ ನಾವೂರ ದಂಡೆ ತೀರ್ಥ ಎಂಬಲ್ಲಿ ನಿರ್ಮಾಣ ವಾಗುತ್ತಿರುವ ಹಿಂದೂ ರುದ್ರಭೂಮಿಗೆ 2.5 ಲಕ್ಷ ರೂ ಸಹಾಯಧನವನ್ನು ನೀಡಿದ್ದು ಈ ಸಂದರ್ಭದಲ್ಲಿ ಚೆಕ್ ವಿತರಣೆ ನಡೆಸಲಾಯಿತು.
ಪರಿಸರ ದಿನಾಚರಣೆ ಅಂಗವಾಗಿ ಸ್ವಸಹಾಯ ಸಂಘದ ಸದಸ್ಯರಿಗೆ ಗಿಡ ವಿತರಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟ ದ ಪದಾಧಿಕಾರಿಗಳಾದ ಪದ್ಮಲತಾ, ಜನಾರ್ದನ, ರಮೇಶ್ ಉಪಸ್ಥಿತರಿದ್ದರು. ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಸದಾನಂದ ನಾವೂರ ಸ್ವಾಗತಿಸಿ ,ಸೇವಾ ಪ್ರತಿನಿಧಿ ಅಂಬಿಕಾ ಧನ್ಯವಾದ ನೀಡಿದರು. ಮೇಲ್ವಿಚಾರಕ ಕೇಶವ ನಾಯ್ಕ್ ಅವರು ಕಾರ್ಯಕ್ರಮ ನಿರೂಪಿಸಿದರು.