ಉಳ್ಳಾಲ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಉಳ್ಳಾಲ ನಗರಸಭೆಯ ಸಹಯೋಗದೊಂದಿಗೆ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯು ಡಿ. 21 ರಂದು ಆಯೋಜಿಸಿರುವ “ವೀರರಾಣಿ ಅಬ್ಬಕ್ಕ ಉತ್ಸವ’ 2021 ರಜತ ಸಂಭ್ರಮ ಉಳ್ಳಾಲ ನಗರಸಭೆಯ ಆವರಣದಲ್ಲಿರುವ ಮಹಾತ್ಮ ಗಾಂಧಿ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದು ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಸಾಹಿತಿ ಚಂದ್ರಕಲಾ ನಂದಾವರ ಹಾಗೂ ವೀರರಾಣಿ ಅಬ್ಬಕ್ಕ ಪುರಸ್ಕಾರಕ್ಕೆ ಹಿರಿಯ ಚಿಂತಕಿ ಕೆ.ಎ. ರೋಹಿಣಿ ಆಯ್ಕೆಯಾಗಿದ್ದಾರೆ ಎಂದು ಉತ್ಸವ ಸಮಿತಿ ಸ್ವಾಗತಾಧ್ಯಕ್ಷ, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಹೇಳಿದರು.
ಕುತ್ತಾರು ಖಾಸಗಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಉತ್ಸವ ಆಯೋಜನೆ ಸಾಧ್ಯವಾಗಿರಲಿಲ್ಲ. ಪ್ರಶಸ್ತಿಗೆ ಬಹಳಷ್ಟು ಅರ್ಜಿ ಸಲ್ಲಿಕೆಯಾಗಿದ್ದು ಅಬ್ಬಕ್ಕ ಉತ್ಸವ ಸಮಿತಿಯ ಹಿರಿಯ ಸಲಹೆಗಾರ ಜನಪದ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ ಅವರ ಸಲಹೆ ಮೇರೆಗೆ ಇಬ್ಬರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಇದು ರಾಷ್ಟ್ರಮಟ್ಟದಲ್ಲಿ ಅಬ್ಬಕ್ಕಳ ಹೆಸರನ್ನು ಪಸರಿಸಲು ಕಾರಣವಾಗುತ್ತದೆ ಎಂದರು.

ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್ ಮಾತನಾಡಿ ಅಬ್ಬಕ್ಕ ಉತ್ಸವ ರಜತ ಸಂಭ್ರಮಕ್ಕೆ ಅಬ್ಬಕ್ಕ ಅಭಿಮಾನಿಗಳು ಹಿಂದಿನಿಂದಲೂ ಉತ್ಸವಕ್ಕೆ ತಮ್ಮ ಮನೆಮಗಳ ಹೆಸರಿನಲ್ಲಿ ನಡೆಯುವ ಹಬ್ಬ ಎಂಬಂತೆ ಎಲ್ಲ ಬಗೆಯಲ್ಲೂ ಸಹಕರಿಸಿಕೊಂಡು ಬಂದ ಕಾರಣ ಇದನ್ನು ನಾಡಹಬ್ಬದಂತೆ ಆಚರಿಸಲಾಗುತ್ತಿದೆ.
ನಮ್ಮ ಹಲವು ವರ್ಷಗಳ ಬೇಡಿಕೆಯಾಗಿದ್ದ ಅಭ್ಬಕ್ಕ ಭವನಕ್ಕೆ ಅದಾಗಲೇ ಐದು ಕೋಟಿ ರೂ. ಗಳನ್ನು ಸರಕಾರ ಮಂಜೂರು ಮಾಡಿದ್ದರೂ ಎರಡು ವರ್ಷ ಕಳೆದ ಬಳಿಕ ನಿರ್ಮಿತಿ ಕೇಂದ್ರ ನಿರ್ಮಾಣ ವೆಚ್ಚ ಹೆಚ್ಚಾಗುತ್ತದೆ ಎಂಬ ಕಾರಣದಿಂದ ಹಿಂದೆ ಸರಿದಿದ್ದು ಇದೀಗ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ತಾಂತ್ರಿಕ ತೊಂದರೆಯಿಂದ ಸ್ವಲ್ಪ ವಿಳಂಬವಾಗುತ್ತಿದೆ, ಮುಂದಿನ ತಿಂಗಳ ಅಂತ್ಯದಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಉಪಾಧ್ಯಕ್ಷರಾದ ದೇವಕಿ ಆರ್. ಉಳ್ಳಾಲ, ಆಲಿಯಬ್ಬ, ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ, ಸಂಚಾಲಕ ನರೇಂದ್ರ ಕೆರೆಕಾಡು, ಅಬ್ದುಲ್ ಅಜೀರ್ಜ ಹಕ್, ಸುಷ್ಮಾ ಜನಾರ್ದನ್, ಶಶಿಕಾಂತ್ ಉಳ್ಳಾಲ್ ಉಪಸ್ಥಿತರಿದ್ದರು.