ಬಂಟ್ವಾಳ: ತಾಲ್ಲೂಕಿನ ಅನಂತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಕ ಬಾಳಿಕ ಎಂಬಲ್ಲಿ ತೋಡು ಹೂಳೆತ್ತುವ ಕಾಯಕದಲ್ಲಿ ಸ್ಥಳೀಯರು ತೊಡಗಿರುವ ದೃಶ್ಯ. ಇಲ್ಲಿನ ಒಟ್ಟು ೫೮ ಗ್ರಾಮ ಪಂಚಾಯಿತಿಗಳ ಪೈಕಿ ಕಳೆದ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಅನಂತಾಡಿ ಗ್ರಾಮ ಪಂಚಾಯಿತಿ ಶೇ. ೧೯೧ ರಷ್ಟು ವೈಯಕ್ತಿಕ ಮತ್ತು ಸಾಮೂಹಿಕ ಕಾಮಗಾರಿ ನಡೆಸುವ ಮೂಲಕ ಗಮನ ಸೆಳೆದಿದೆ. ಉಳಿದಂತೆ ಗೋಳ್ತಮಜಲು ಮತ್ತು ಪುದು ಗ್ರಾಮ ಪಂಚಾಯಿತಿ ಕನಿಷ್ಟ ಶೇ ೭೦ರಷ್ಟು ಕಾಮಗಾರಿ ಪೂರ್ಣಗೊಳಿಸಿದೆ.
ತಾಲ್ಲೂಕಿನಲ್ಲಿ ಒಟ್ಟು ೩,೬೮,೯೪೭ ಮಾನವ ದಿನ ನಿಗದಿಪಡಿಸಲಾಗಿದ್ದು, ಒಟ್ಟು ೩,೭೬,೫೪೧ ಮಾನವ ದಿನ ಬಳಕೆಯಾಗುವ ಮೂಲಕ ಒಟ್ಟು ಶೇ.೧೦೨ರಷ್ಟು ಸಾಧನೆ ಮಾಡಿರುವುದಾಗಿ ತಾಲ್ಲೂಕು ಪಂಚಾಯಿತಿ ಇಒ ರಾಜಣ್ಣ ತಿಳಿಸಿದ್ದಾರೆ.
ಕಳೆದ ೧೯೯೪ರಲ್ಲಿ ಆರಂಭಗೊoಡ ಅನಂತಾಡಿ ಗ್ರಾಮ ಪಂಚಾಯಿತಿ ಕ್ಷೇತ್ರ ವಿಂಗಡಣೆ ಹಿನ್ನೆಲೆಯಲ್ಲಿ ೨೦೧೫ರ ಬಳಿಕ ನೆಟ್ಲಮುಡ್ನೂರು ಗ್ರಾಮ ಪಂಚಾಯಿತಿ ಪ್ರತ್ಯೇಕಗೊಂಡಿದೆ. ಒಟ್ಟು ೭ ಸದಸ್ಯರನ್ನು ಹೊಂದಿರುವ ಅನಂತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ೨,೯೪೭ ಮಂದಿ ಜನಸಂಖ್ಯೆ ಇದೆ. ಇಲ್ಲಿನ ಗೋಳಿಕಟ್ಟೆ ಬಳಿ ೨೨ ಸೆಂಟ್ಸ್ ಸರ್ಕಾರಿ ಜಮೀನಿನಲ್ಲಿ ರೂ ೨೮ಲಕ್ಷ ವೆಚ್ಚದಲ್ಲಿ ರಾಜೀವ ಗಾಂಧಿ ಸೇವಾ ಕೇಂದ್ರ ಮೂಲಕ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿಯೂ ಭರದಿಂದ ನಡೆಯುತ್ತಿದೆ. ಕಳೆದ ವರ್ಷ ಕೋವಿಡ್ ಸಂಕಷ್ಟದ ನಡುವೆ ಸುಮಾರು ೨೧ ತೋಡುಗಳ ಹೂಳೆತ್ತುವ ಮೂಲಕ ಜನತೆಗೆ ಉದ್ಯೋಗ ಖಾತರಿ ನೀಡಲಾಗಿದೆ. ಉಳಿದಂತೆ ೪ ಕಾಂಕ್ರೀಟು ರಸ್ತೆ ನಿರ್ಮಾಣಗೊಂಡಿದೆ. ಸಾರ್ವಜನಿಕ ಬಾವಿ, ಮಳೆ ಕೊಯ್ಲು, ಶಾಲಾ ಶೌಚಾಲಯ ನಿರ್ಮಾಣ, ಸ್ಮಶಾನ ನಿಮಾಣ, ತಡೆಗೋಡೆ ರಚನೆ, ಅಂಗನವಾಡಿ ಕೇಂದ್ರ ರಚನೆ, ಕಿಂಡಿ ಅಣೆಕಟ್ಟೆ, ಪೌಷ್ಠಿಕ ತೋಟ ರಚನೆಗೊಂಡಿದೆ.
ಉಳಿದoತೆ ಬಾವಿ, ತೋಟಗಾರಿಕೆ, ದನ, ಹಂದಿ, ಕೋಳಿ ಸಾಕಣೆ, ವಸತಿ ನಿರ್ಮಾಣ, ಕೃಷಿ ಹೊಂಡ, ಎರೆಹುಳು ಗೊಬ್ಬರ ಘಟಕ, ದ್ರವ ತ್ಯಾಜ್ಯ ಗುಂಡಿ ರಚನೆ ಹೀಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ೨,೫೮೬ ವೈಯಕ್ತಿಕ ಕಾಮಗಾರಿ ನಡೆದಿದೆ. ಘನ ತ್ಯಾಜ್ಯ ವಿಲೇವಾರಿಯಲ್ಲಿ ಕೂಡಾ ಪಂಚಾಯಿತಿ ಎಲ್ಲರಿಗಿಂತ ಮುಂದಿದ್ದು, ಈಗಾಗಲೇ ರಾಷ್ಟçಪತಿ ಪುರಸ್ಕಾರಕ್ಕೂ ಪಾತ್ರವಾಗಿದೆ. ಇಲ್ಲಿನ ಸದಸ್ಯರು ಮತ್ತು ಸಿಬ್ಬಂದಿಗಳ ಉತ್ಸಾಹ ಮತ್ತು ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.