ಬಂಟ್ವಾಳ: ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಗರಡಿ ಗದ್ದೆ ಬಳಿ ಮಾಜಿ ಸಚಿವ ಬಿ.ರಮಾನಾಥ ರೈ ಆ.10ರಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್, ಸುದರ್ಶನ್ ಜೈನ್, ಬೇಬಿ ಕುಂದರ್ ಮತ್ತಿತರರು ಇದ್ದಾರೆ.
ಬಂಟ್ವಾಳ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಗರಡಿ ಗದ್ದೆಯಲ್ಲಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಪ್ರಯುಕ್ತ ಇದೇ ೧೪ರಂದು ‘ಆಟಿದ ಕೆಸರ್ ಡ್ ಒಂಜಿ ದಿನ’ ಎಂಬ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಟಿದ ಕೂಟ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಇಲ್ಲಿನ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಗರಡಿ ಗದ್ದೆ ಬಳಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಿಗ್ಗೆ ಗಂಟೆ ೯ ಕ್ಕೆ ಇಲ್ಲಿನ ಬಾಲೇಶ್ವರ ಜೈನ ಬಸದಿಯಿಂದ ಬ್ರಹ್ಮಶ್ರೀ ನಾರಾಯಣಗುರು ಮಂದಿರ ತನಕ ಆಕರ್ಷಕ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಗೆ ಕಂಬಳದ ಕೋಣ ಸಹಿತ ಆಟಿ ಕಳೆಂಜ ವೇಷದಾರಿ ವಿಶೇಷ ಮೆರುಗು ನೀಡುವರು ಎಂದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತೀ ಗ್ರಾಮಗಳಿಂದಲೂ ವಿವಿಧ ಕ್ರೀಡಾ ತಂಡಗಳು ಭಾಗವಹಿಸಲಿದ್ದು, ಮಕ್ಕಳು, ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಕ್ರೀಡಾ ಸ್ಪರ್ಧೆ ಮತ್ತು ಬಹುಮಾನ ವಿತರಣೆ ನಡೆಯಲಿದೆ. ಅಂದು ಬೆಳಿಗ್ಗೆಯಿಂದ ಸಂಜೆ ತನಕ ಸುಮಾರು ೩ ಸಾವಿರಕ್ಕೂ ಮಿಕ್ಕಿ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಆಷಾಢ ಮಾಸದ ವೈಶಿಷ್ಟö್ಯಪೂರ್ಣ ತಿಂಡಿ-ತಿನಿಸು ಮತ್ತು ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಕಳೆದ ಕೆಲವು ತಿಂಗಳ ಹಿಂದೆ ನಾವೂರು ಕೂಡಿಬೈಲು ಎಂಬಲ್ಲಿ ‘ಮೂಡೂರು-ಪಡೂರು’ ಕಂಬಳ ಕೂಟ ಯಶಸ್ವಿಯಾಗಿ ಮುನ್ನಡೆಸಿದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್. ರಾಡ್ರಿಗಸ್ ಅಧ್ಯಕ್ಷತೆಯಲ್ಲಿ ಈ ಆಟಿದ ಕೂಟವೂ ಯಶಸ್ವಿಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಪಿಯೂಸ್ ಎಲ್. ರಾಡ್ರಿಗಸ್, ಪ್ರಧಾನ ಕಾರ್ಯದರ್ಶಿ ಸುದರ್ಶನ ಜೈನ್, ಕೋಶಾಧಿಕಾರಿ ದೇವಪ್ಪ ಕುಲಾಲ್, ಸಂಚಾಲಕ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಬಿ.ಪದ್ಮಶೇಖರ ಜೈನ್, ಎಡ್ತೂರು ರಾಜೀವ ಶೆಟ್ಟಿ, ಕೆ.ಪದ್ಮನಾಭ ರೈ, ಸುರೇಶ್ ಜೋರ, ಪ್ರಕಾಶ್ ಕುಮಾರ್ ಜೈನ್, ಕೃಷ್ಣರಾಜ ಜೈನ್, ಸೀತಾರಾಮ ಶೆಟ್ಟಿ ಕಾಂತಾಡಿ, ದಿನೇಶ್ ಶೆಟ್ಟಿ ಬುಡೋಳಿ, ಕೇಶವ ಪೂಜಾರಿ ಅಸಲ್ದೋಡಿ, ಸದಾನಂದ ಶೆಟ್ಟಿ ದರ್ಬೆ, ಚೇತನ್ ಬುಡೋಳಿ, ರಾಜೇಶ ಗೌಡ, ರಾಧಾಕೃಷ್ಣ ಆಚಾರ್ಯ, ವೆಂಕಪ್ಪ ಪೂಜಾರಿ ಮತ್ತಿತರರು ಇದ್ದರು.