ಕೈಕಂಬ : ಬಿಲ್ಲವ ಸಮಾಜ ಸೇವಾ ಸಂಘದಿAದ ಸಮಾಜದ ಮಕ್ಕಳು ಶೈಕ್ಷಣಿಕವಾಗಿ ಬೆಳೆಯುವಂತಾಗಲಿ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶ, ಸಿದ್ಧಾಂತಗಳ ನೆಲೆಗಟ್ಟಿನಲ್ಲಿ ಸಂಘ ಬೆಳೆಯಲಿ. ಸಾಧನೆಯ ಪಥದಲ್ಲಿ ಮುನ್ನಡೆಯಿರಿ. ಎಲ್ಲೂ ಗುಲಾಮರಾಗಬೇಡಿ, ಅಸ್ತçಗಳಾಗಬೇಡಿ. ಎಲ್ಲೇ ಇರಿ, ನಿಮ್ಮಲ್ಲಿ ಸಮಾಜದ ಚಿಂತನೆ ಇರಲಿ ಎಂದು ಆರ್ಯ-ಈಡಿಗ(ಬಿಲ್ಲವ) ಮಹಾಸಂಸ್ಥಾನ ಮಠ ಸೋಲೂರು ಮಠದ ಪೀಠಾಧೀಶರಾದ ಶ್ರೀ ವಿಖ್ಯಾತಾನಂದ ಸ್ವಾಮಿ ಹೇಳಿದರು.

ಮಂಗಳೂರು ತಾಲೂಕಿನ ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿ ಮಟ್ಟಿಯ ಶ್ರೀ ಕಾಲಭೈರವ ಮಂಜುನಾಥೇಶ್ವರ ಬಳಿ ಭಾನುವಾರ(ಡಿ. ೨೫) ಆಯೋಜಿಸಲಾದ ಮಳಲಿ ವಲಯದ ನೂತನ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ಉದ್ಘಾಟನೆ ಮತ್ತು ಪದಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ದೀಪ ಬೆಳಗಿಸಿ, ತೆಂಗಿನ ಗೊನೆ ಅರಳಿಸಿ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಮಾತನಾಡಿ, ಮಳಲಿಯಲ್ಲಿ ಬಿಲ್ಲವ ಸಮಾಜದ ಇಷ್ಟೊಂದು ಜನರು ಸೇರಿರುವುದು ಕಂಡಾಗ ಆನಂದವಾಯಿತು. ಈ ಕಾರ್ಯದ ಹಿಂದೆ ಸಮಾಜದ ಜನರ ಹಿರಿ-ಕಿರಿಯರ ಶ್ರಮವಿದೆ. ಸಮಾಜದ ಸೇವೆಗಾಗಿ ಹುಟ್ಟಿಕೊಂಡಿರುವ ಈ ಸಂಘಕ್ಕೆ ದೇವರು ಒಳಿತು ಮಾಡಲಿ ಎಂದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ಸಂಘದ ಸ್ಥಾಪನೆಯಿಂದ ಸಮಾಜದಲ್ಲಿ ನಾರಾಯಣ ಗುರುಗಳ ಶಾಂತಿಯುತ ಹೋರಾಟ, ತತ್ವ ಸಿದ್ಧಾಂತ ಯಥಾವತ್ತಾಗಿ ಪಾಲನೆಯಾಗಬೇಕು. ವಿದ್ಯಾವಂತರಾಗಿ ಸಮಾಜ ಮತ್ತು ದೇಶದ ಸೇವೆ ಮಾಡುವ ಗುರಿ ಹೊಂದಬೇಕು. ಸಂಘಟನೆ ಬಲಯುತವಾದರೆ, ಸರ್ಕಾರದಿಂದ ನಮ್ಮ ಹಕ್ಕು ಪಡೆದುಕೊಳ್ಳಲು ಸುಲಭ ಸಾಧ್ಯವಾಗಲಿದೆ. ಸಮಾಜಕ್ಕೆ ರಾಜಕೀಯ ಶಕ್ತಿಯ ಅಗತ್ಯವಿದ್ದರೂ, ಸಂಘಟನೆಯಿಂದ ರಾಜಕೀಯ ಹೊರಗಿಡೋಣ ಎಂದರು.

ಮಳಲಿ ಮಟ್ಟಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಮಟ್ಟಿಯ ಶ್ರೀ ಕಾಳಭೈರವ ಮಂಜುನಾಥೇಶ್ವರ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ಸಾಗಿ ಬಂತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಅವರನ್ನು ಪತ್ನಿ ಸಹಿತ ಸನ್ಮಾನಿಸಲಾಯಿತು. ಹರೀಶ್ ಮಟ್ಟಿ ಅವರು ಸನ್ಮಾನ ಪತ್ರ ವಾಚಿಸಿದರು. ಗೌರವಾನ್ವಿತರೆಲ್ಲರೂ ಒಟ್ಟಾಗಿ ಬಿಲ್ಲವ ಸಮಾಜದ ಸಂಕೇತವಾಗಿರುವ `ಹಳದಿ ಧ್ವಜ’ ಅರಳಿಸಿ, ನೂತನ ಸಂಘಕ್ಕೆ ವಿಶೇಷ ಮೆರಗು ನೀಡಿದರು. ನಾರಾಯಣಗ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನೂತನ ಸಂಘದ ಅಧ್ಯಕ್ಷ ಕೇಶವ ಪೂಜಾರಿ ಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷ ಪೀತಾಂಬರ ಹೆರಾಜೆ, ಖಾಸಗಿ ಚಾನೆಲ್ ನಿರ್ದೇಶಕ ಲೀಲಾಕ್ಷ ಕರ್ಕೇರ, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಕುಳಾಯಿ ಫೌಂಡೇಶನ್ ಅಧ್ಯಕ್ಷೆ ಪ್ರತಿಭಾ ಕುಳಾಯಿ ಮಾತನಾಡಿದರು. ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕಾರ್ಯದರ್ಶಿ ಮೋಹನದಾಸ ಬಂಗೇರ ವಾಮಂಜೂರು, ಗಂಜಿಮಠ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಭುವನೇಶ್ ಪಚ್ಚಿನಡ್ಕ, ಸಮಾಜ ಬಾಂಧವರು ಹಾಗೂ ಸಂಘದ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಮಾಸ್ಟರ್ ತನ್ವಿತ್ ಎಸ್. ಕೋಟ್ಯಾನ್ ಪ್ರಾರ್ಥನೆಗೈದರು. ಸಚಿನ್ ಸಾಲ್ಯಾನ್ ಮಟ್ಟಿ ಸ್ವಾಗತಿಸಿದರು. ಉಮೇಶ್ ಪೂಜಾರಿ ಪ್ರಸ್ತಾವಿಕ ಮಾತನಾಡಿದರು. ಮನೋಜ್ ನಿರೂಪಿಸಿದರೆ, ರಮ್ಯಾ ವಂದಿಸಿದರು. ಸಂಜೆ ಸಭಾ ಕಾರ್ಯಕ್ರಮದ ಬಳಿಕ ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ `ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಂಡಿತು.



