ಬಂಟ್ವಾಳ:ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ರಾಯಿ ಗ್ರಾಮೀಣ ಪ್ರದೇಶದಲ್ಲಿ ಎರಡು ಕಡೆ ಪ್ರತ್ಯೇಕ ‘ಷಷ್ಠಿ ಮಹೋತ್ಸವ’ವು ಇದೇ 27ರಂದು ನಡೆಯುವ ಮೂಲಕ ಗಮನ ಸೆಳೆಯಲಿದೆ.
ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಇಲ್ಲಿಗೆ ಸಮೀಪದಲ್ಲೇ ಇರುವ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಬುಧವಾರ (ನ.26) ಬೆಳಿಗ್ಗೆ ದೇವರಿಗೆ ಪಂಚಾಮೃತ ಮತ್ತು ಪವಮಾನ ಅಭಿಷೇಕ ಹಾಗೂ ಸಂಜೆ ಪಂಚಮಿ ಉತ್ಸವ ಮೂಲಕ ಈಗಾಗಲೇ ಕಾರ್ಯಕ್ರಮ ಆರಂಭಗೊಂಡಿದೆ. ನ.27ರಂದು ಗುರುವಾರ ಬೆಳಿಗ್ಗೆ ವಾರ್ಷಿಕ ಷಷ್ಠಿ ಮಹೋತ್ಸವ, ದೇವರ ಬಲಿ ಉತ್ಸವ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಬದನಡಿ ಕ್ಷೇತ್ರದಲ್ಲಿ ಗುರುವಾರ ರಾತ್ರಿ ಪರಿವಾರ ದೈವಗಳಾದ ರಕ್ತೇಶ್ವರಿ, ಕಲ್ಲುರ್ಟಿ ಮತ್ತು ಅಣ್ಣಪ್ಪ ಪಂಜುರ್ಲಿ ದೈವಗಳಿಗೆ ವಾರ್ಷಿಕ ನೇಮೋತ್ಸವವೂ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.