ಬಂಟ್ವಾಳ: ಎಂಟು ವರ್ಷದ ಹಿಂದೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯಿತ್
2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಳ್ಳುವ ಮೂಲಕ ಹೊಸ ಗರಿಯನ್ನು ಮುಡಿಗೇರಿಸಿದೆ.

ಅಮ್ಮುಂಜೆ ಗ್ರಾಮ ಪಂಚಾಯಿತ್ ಕಳೆದ ಎರಡುವರೆ ವರ್ಷಗಳಲ್ಲಿ ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಮೂಲ ಸೌಕರ್ಯಕ್ಕಾಗಿ ಸರಕಾರ ಒದಗಿಸಿದ ಸೌಲಭ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಗ್ರಾಮದ ನಾಗರಿಕರಿಗೆ ತಲುಪಿಸಿರುವುದರ ಜತೆಗೆ ಅದರ ದಾಖಲೀಕರಣದ ಕಾರ್ಯಕ್ಕೆ ಈ ಬಾರಿಯ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
8 ವರ್ಷದ ಹಿಂದೆ ಕರಿಯಂಗಳ ಗ್ರಾ.ಪಂ.ನಿಂದ ಬೇರ್ಪಟ್ಟು ಅಮ್ಮುಂಜೆ ಗ್ರಾ.ಪಂ.ಹೊಸದಾಗಿ ಅಸ್ತಿತ್ವಕ್ಕೆ ಬಂದಿತ್ತು.ಅತೀ ಕಡಿಮೆ ಅವಧಿಯಲ್ಲೇ ಅಮ್ಮುಂಜೆ ಗ್ರಾ.ಪಂ.ತನ್ನ ಸಾಧನೆಯ ಮೂಲಕ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವುದು ಹೊಸ ದಾಖಲೆ ಬರೆದಿದೆ.
ಮಾಡಿರುವ ಸಾಧನೆ:
ನಾಗರಿಕರಿಗೆ ಗರಿಷ್ಠ ಸರಕಾರಿ ಸೌಲಭ್ಯ ತಲುಪಿಸಿರುವುದು,ಹೆಣ್ಣುಮಕ್ಕಳ ಜನನವೃದ್ಧಿ,ಮರಣಪ್ರಮಾಣ ಇಳಿಕೆ,ಕುಡಿಯುವ ನೀರಿನ ನಿರ್ವಹಣೆ,ಬಾಪೂಜಿ ಸೇವಾ ಕೇಂದ್ರದಲ್ಲಿ ವ್ಯವಸ್ಥೆಯನ್ನ ಬಲಪಡಿಸಿರುವುದು,ಸ್ವಚ್ಚತೆ,ಶೌಚಾಲಯ,ತ್ಯಾಜ್ಯ ನಿರ್ವಹಣೆಗೆ ಆದ್ಯತೆ
ಅಮ್ಮುಂಜೆ ಗ್ರಾ.ಪಂ.ನಲ್ಲಿ ಕಳೆದ ಎರಡುವರೆ ವರ್ಷದ ಆಡಳಿತದ ಅವಧಿಯಲ್ಲಿ ವಾಮನ ಆಚಾರ್ಯ ಅವರು ಅಧ್ಯಕ್ಷರಾಗಿ,ಪ್ರಮೀಳಾ ಅವರು ಉಪಾಧ್ಯಕ್ಷರಾಗಿ ಆಡಳಿತ ನಡೆಸಿದ್ದಾರೆ,ಪ್ರಸ್ತುತ ಅಧ್ಯಕ್ಷರಾಗಿ ಲಕ್ಷ್ಮೀ ಬೆಂಜನಪದವು,ಉಪಾಧ್ಯಕ್ಷರಾಗಿ ರಾಧಕೃಷ್ಣ ತಂತ್ರಿ ಹಾಗೂ ಅಭಿವೃದ್ಧಿ ಅಧಿಕಾರಿಯಾಗಿ ನಯನ ಕುಮಾರಿ ಅವರು ಸೇವೆ ಸಲ್ಲಿಸುತ್ತಿದ್ದು,ಒಟ್ಟು 13 ಮಂದಿ ಸದಸ್ಯರನ್ನು ಹೊಂದಿದೆ.
ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ:
ಅಲ್ಪ ಅವಧಿಯಲ್ಲಿ ನಮ್ಮ ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ ಬಂದಿರುವುದು ಸಂತಸ ತಂದಿದೆ.ನಿಯಾಮಾನುಸಾರವಾಗಿ ಸರಕಾರದ ಸವಲತ್ತುಗಳನ್ನು ನಾಗರಿಕರಿಗೆ ತಲುಪಿಸುವಲ್ಲಿ ಗರಿಷ್ಠ ಪ್ರಯತ್ನ ಮಾಡಿದ್ದು,ಈ ದೆಸೆಯಲ್ಲಿ ಹೆಚ್ಚಿನ ಅಂಕದ ಆಧಾರದಲ್ಲಿ ಪುರಸ್ಕಾರ ಲಭಿಸಿದೆ
ಎಂದು ಗ್ರಾ.ಪಂ.ಉಪಾಧ್ಯಕ್ಷ ರಾಧಕೃಷ್ಣ ತಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕರ ಅಭಿನಂದನೆ
ಅಮ್ಮುಂಜೆ ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿರುವುದಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಗ್ರಾ.ಪಂ.ಆಡಳಿತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.ಹಾಗೆಯೇ ಗ್ರಾಮ ಪಂಚಾಯತ್ ಸದಸ್ಯರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.