ಬಂಟ್ವಾಳ: ಸಹಕಾರಿ ರಂಗದಲ್ಲಿ ವಿಶಿಷ್ಠ ಛಾಪನ್ನು ಮೂಡಿಸಿರುವ ಬಂಟ್ವಾಳ ತಾಲೂಕಿನ “ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ” ತನ್ನ ೧೫ನೇ ವೇಣೂರು ಶಾಖೆಯ ಉದ್ಘಾಟನಾ ಸಮಾರಂಭವುವೇಣೂರಿನ ಮಹಾವೀರ ನಗರದಲ್ಲಿರುವ ಮಂಜುಶ್ರೀ ಕಾಂಪ್ಲೆಕ್ಸ್ ನಲ್ಲಿ ಜು.14 ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ನೂತನ ವೇಣೂರು ಶಾಖೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದು, ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸುವರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಕುದ್ರೋಳಿ ಗೋಕರ್ಣ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ನಾರಾಯಣ ಗುರು ವಿಚಾರ ವೇದಿಕೆಯ ರಾಜಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಜಿ.ಪಂ. ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ವೇಣೂರು ಚರ್ಚಿನ ಧರ್ಮಗುರುಗಳಾದ ಫಾದರ್ ಪೀಟರ್ ಅರಾನ್ಹ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೋಕ್ತೇಸರ ಜಯರಾಮ ಶೆಟ್ಟಿ, ವೇಣೂರು ಜುಮ್ಮಾ ಮಸೀದಿ ಅಧ್ಯಕ್ಷ ಝಕ್ರಿಯಾ, ಬೆಳ್ತಂಗಡಿ ಸಿಡಿಒ ಅಭಿವೃದ್ಧಿ ಅಧಿಕಾರಿ ಪ್ರತಿಮಾ, ವೇಣೂರು ವಲಯ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ವೇಣೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಪೂಜಾರಿ, ಸಿದ್ಧಕಟ್ಟೆ ಕಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ವಿನಯ್ ಕುಮಾರ್ ಜೈನ್ ಪ್ರಗತಿಪರ ಕೃಷಿಕ ಬಾಲಕೃಷ್ಣ ಶೆಟ್ಟಿ ರಾಯಿ, ಕಟ್ಟಡ ಮಾಲಕ ಕೆ. ಉದಯ ಕುಮರ್ ಕಂಬಳಿ ಭಾಗವಹಿಸುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಮೂರ್ತೆದಾರಿಕೆ ಮಾಡುವ ಕುಲ ಕಸುಬುದಾರರ ಶ್ರೇಯೋಭಿವೃದ್ಧಿ ಹಾಗೂ ಅವರ ಆರ್ಥಿಕ ಜೀವನ ಮಟ್ಟ ಸುಧಾರಿಸುವ ಸದುದ್ದೇಶದೊಂದಿಗೆ ೧೯೯೧ರಲ್ಲಿ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಸುಭಾಷ್ನಗರದ ಬ್ರಹ್ಮಶ್ರೀ ನಾರಾಯಣ ಗುರುಮಂದಿರದಲ್ಲಿ ಪ್ರಾರಂಭಗೊಂಡ ಬ್ಯಾಂಕ್, ೨೦೦೫ ನ. ೧೮ ರಂದು ಬೊಳ್ಳಾಯಿಯಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಆರಂಭಿಸಿತು. ಬಂಟ್ವಾಳ ತಾಲೂಕಿನ ಎಲ್ಲಾ ಭಾಗಗಳಲ್ಲಿರುವ ಮೂರ್ತೆದಾರರಿಗೆ ಅನುಕೂಲವಾಗ ಬೇಕೆನ್ನುವ ಉದ್ದೇಶದಿಂದ ಹಂತ ಹಂತವಾಗಿ ಬೋಳಂತೂರು, ಚೇಳೂರು, ಫಜೀರು, ವಾಮದಪದವು, ಸಿದ್ದಕಟ್ಟೆ, ಅಣ್ಣಳಿಕೆ, ಮಾರ್ನಬೈಲು, ಮಣಿಹಳ್ಳ, ಕಾವಳ ಮೂಡೂರು ಎನ್.ಸಿ. ರೋಡು, ಸಾಲೆತ್ತೂರು, ಕಂಬಳಬೆಟ್ಟು, ಪುಣಚ, ಬಿ.ಸಿ.ರೋಡಿನಲ್ಲಿ ಶಾಖೆಗಳನ್ನು ತೆರೆದು ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಿದೆ.
ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಆಭರಣ ಸಾಲ, ಅಡಮಾನ ಸಾಲ, ವಾಹನ ಸಾಲ, ಮೂರ್ತೆದಾರಿಕೆ ಸಾಲ, ವ್ಯಾಪಾರ ಸಾಲ, ವೈಯಕ್ತಿಕ ಸಾಲ, ಠೇವಣಾತಿ ಸಾಲ, ಸ್ವಸಹಾಯ ಸಾಲ, ಮಹಿಳೆಯರಿಗೆ ತ್ವರಿತ ಸಾಲ, ಪಿಗ್ಮಿ ಮುಂಗಡ ಸಾಲವನ್ನು ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಮತ್ತು ಸಂಘ ಸಂಸ್ಥೆಗಳ ಠೇವಣಿಗೆ ೦.೫% ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಸಿದ್ದಕಟ್ಟೆ ,ಪುಣಚ ಹಾಗೂ ಬಿ.ಸಿ. ರೋಡು ಶಾಖೆಯಲ್ಲಿ ಈ- ಸ್ಟ್ಯಾಂಪಿಂಗ್ ಸೌಲಭ್ಯ ಹಾಗೂ ನೆಫ್ಟ್ ,ಆರ್ ಟಿ ಜಿ ಎಸ್ ಸೌಲಭ್ಯವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ವೇಣೂರು ಶಾಖೆಯಲ್ಲು ಈ ಸ್ಟ್ಯಾಂಪಿಂಗ್ ಸೌಲಭ್ಯವನ್ನು ಕಲ್ಪಿಸಲಾಗುವುದು, ಸಂಘವು ಸಜೀಪಮೂಡ ಗ್ರಾಮದ ಸುಭಾಷ್ ನಗರದಲ್ಲಿ ಸ್ವಂತ ಪ್ರಕಚೇರಿ ೦೦.೫೦ ಸೆಂಟ್ಸ್ ಜಾಗವನ್ನು ೭೦ ಲಕ್ಷಕ್ಕೆ ಖರೀದಿಸಿದೆ.
ಸಂಘವು ಗುರುಶ್ರೀ ಎಂಬ ಹೆಸರಿನಲ್ಲಿ ಸ್ವಸಹಾಯ ಗುಂಪುಗಳನ್ನು ರಚಿಸಿದ್ದು ಸ್ವಸಹಾಯ ಸಂಘದ ಸದಸ್ಯರಿಗೆ ಅತೀ ಕಡಿಮೆ ಅವಧಿಯಲ್ಲಿ ಸಾಲವನ್ನು ನೀಡುವ ಯೋಜನೆಯನ್ನು ಹೊಂದಿದೆ. ಸೇವಾ ಕಾರ್ಯವಾಗಿ ಸಂಘದ ಸದಸ್ಯರಿಗೆ ವಿದ್ಯಾರ್ಥಿ ವೇತನ, ಕಡುಬಡತನದಲ್ಲಿರುವ ಅನಾರೋಗ್ಯ ಪೀಡಿತ ಮೂರ್ತೆದಾರರಿಗೆ ಸಹಾಯಧನ ನೀಡಲಾಗುತ್ತಿದೆ. ಪ್ರತೀವರ್ಷ ಹಿರಿಯ ಮೂರ್ತೆದಾರರನ್ನು ಗುರುತಿಸಿ ಗೌರವಿಸಲಾಗುತ್ತಿದೆ.ಹಾಗು ಒಬ್ಬ ವಿದ್ಯಾರ್ಥಿಯನ್ನು ವಿದ್ಯಾಬ್ಯಾಸಕ್ಕಾಗಿ ದತ್ತು ಸ್ವೀಕರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಒಟ್ಟು ೧೪,೧೫೦ ಸದಸ್ಯರನ್ನು ಹೊಂದಿದ್ದು ೨೩೬ ಕೋಟಿ ರೂಪಾಯಿ ವ್ಯಾಪಾರ ವಹಿವಾಟನ್ನು ನಡೆಸಿದೆ. ಕಳೆದ ಸಾಲಿನಲ್ಲಿ ೨೧ ಲಕ್ಷ ರೂಪಾಯಿ ವಾರ್ಷಿಕ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.೨೫ ಡಿವಿಡೆಂಡ್ ನೀಡಲಾಗಿದೆ. ೩೩,೮೦,೫೬,೨೪೨ ರೂಪಾಯಿ ಸಾಲ ನೀಡಿದ್ದು, ೩೯,೯೬,೩೯,೯೬೮ ರೂಪಾಯಿ ಠೇವಣಾತಿ ಇದೆ. ೩೦,೭೬,೮೫೦ ಷೇರುಗಳನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಶಾಖೆಗಳನ್ನು ತೆರೆಯುವ ಯೋಜನೆಯನ್ನು ಸಂಘ ಹೊಂದಿದೆ. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಿಂದ ಹಿಡಿದು ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಆಗಿದ್ದು ಮಹಿಳೆಯರ ಉದ್ಯೋಗ ಹಾಗೂ ಸ್ವಾವಲಂಬಿ ಬದುಕಿಗೆ ನಮ್ಮ ಸಂಘ ಅವಕಾಶ ನೀಡಿದೆ.
ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ, ಉಪಾಧ್ಯಕ್ಷರಾಗಿ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾಗಿ ರಮೇಶ್ ಅನ್ನಪ್ಪಾಡಿ, ವಿಠಲ ಬೆಳ್ಚಾಡ ಚೇಳೂರು, ಅಶೋಕ್ ಪೂಜಾರಿ ಕೋಮಾಲಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಾಲೆ, ಕೆ. ಸುಜಾತ ಎಂ., ವಾಣಿವಸಂತ್, ಅರುಣ್ ಕುಮಾರ್ ಎಮ್,ಆಶಿಶ್ ಪೂಜಾರಿ ಮುಖ್ಯ ಕಾರ್ಯನಿರ್ವಾಹಣಾ ಧಿಕಾರಿಯಾಗಿ ಮಮತಾ ಜಿ. ಸಂಘವನ್ನು ಮುನ್ನಡೆಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.