ಬಂಟ್ವಾಳ: ಕರಿಯಂಗಳ ಗ್ರಾಮಪಂಚಾಯತ್ ವ್ಯಾಪ್ತಿಯ ಬೆಂಜನಪದವು ಎಂಬಲ್ಲಿ ಎಂಎಸ್ಐಎಲ್ ಮದ್ಯ ಮಾರಾಟದಂಗಡಿ ತೆರೆಯುವ ವಿರುದ್ದ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದರು. ಮದ್ಯದಂಗಡಿ ಆರಂಭಗೊಳಿಸುವ ಹಿನ್ನಲೆಯಲ್ಲಿ ಬೆಂಜನ ಪದವಿನ ಮಳಿಗೆಯೊಂದರಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದ್ದು ಸ್ಥಳೀಯ ಇಪ್ಪತ್ತಕ್ಕಿಂತಲೂ ಅಧಿಕ ಮಹಿಳೆಯರು ಸ್ಥಳದಲ್ಲಿ ಜಮಾಯಿಸಿ ತಮ್ಮ ವಿರೋಧ ವ್ಯಕ್ತ ಪಡಿಸಿದರು.


ಬೆಂಜನಪದವಿನ ಜ್ಯೂನಿಯರ್ ಕಾಲೇಜ್ ಬಳಿ ನೂರು ಮೀಟರ್ ಅಂತರದಲ್ಲೇ ಎಂಎಸ್ಐಎಲ್ ಮದ್ಯ ಮಾರಾಟದಂಗಡಿ ತೆರಯುವ ಬಗ್ಗೆ ವ್ಯಕ್ತಿಯೊಬ್ಬರಿಗೆ ಪರವಾನಗಿ ದೊರೆತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಗ್ರಾಮಸ್ಥರು ತಮ್ಮ ವಿರೋಧವನ್ನು ಗ್ರಾಮಸಭೆಯಲ್ಲಿ ವ್ಯಕ್ತ ಪಡಿಸಿದ್ದರು. ಅಲ್ಲದೆ ಪಂಚಾಯತ್ನ ಸಾಮನ್ಯ ಸಭೆಯಲ್ಲೂ ಈ ಬಗ್ಗೆ ಸದಸ್ಯರು ವಿರೋಧದಭಿಪ್ರಯಾ ವ್ಯಕ್ತ ಪಡಿಸಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ ಸಹಿತ ಸಂಬಂಧಪಟ್ಟ ಎಲ್ಲಾ ಇಲಾಖಾಧಿಕಾರಿಗಳಿಗೆ ಸಲ್ಲಿಸಿದ್ದರು.
ಕಾಲೇಜಿನ ನೂರು ಮೀಟರ್ ಅಂತರದಲ್ಲಿ ಮದ್ಯದಂಗಡಿ ತೆರೆಯುವುದರಿಂದ ವಿದ್ಯಾಥರ್ಿಗಳ ಭವಿಷ್ಯಕ್ಕೂ ತೊಂದರೆ ಎಂದು ಮನಗಂಡ ಕಾಲೇಜಿನ ಆಡಳಿತ ಮಂಡಳಿಯೂ ಇದರ ವಿರುದ್ದ ಧ್ವನಿ ಎತ್ತಿದ್ದು ಪರವಾನಗಿ ನೀಡದಂತೆ ಒತ್ತಾಯಿಸಿತ್ತು. ಮಾತ್ರವಲ್ಲದೆ ಸ್ಥಳೀಯ ಸ್ತ್ರೀ ಶಕ್ತಿ ಗುಂಪು ಹಾಗೂ ಮಸೀದಿ ಆಡಳಿತ ಮಂಡಳಿಯೂ ಆಕ್ಷೇಪ ವ್ಯಕ್ತ ಪಡಿಸಿತ್ತು. ಇದೀಗ ಸದ್ದಿಲ್ಲದೆ ಮದ್ಯ ಮಾರಾಟದಂಗಡಿ ಪ್ರಾರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ಮಹಿಳೆಯರು ಈ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಬಂಟ್ವಾಳ ಗ್ರಾಮಾಂತರ ಎಸೈ ರಕ್ಷಿತ್ ಎ.ಕೆ. ಹಾಗೂ ಸಿಬ್ಬಂದಿಗಳು ಹಾಜರಿದ್ದರು.