ಸುದ್ದಿ9 ಬಂಟ್ವಾಳ : ಕಾಂಗ್ರೆಸ್ ಪಕ್ಷದಿಂದ ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳು ಬಳಿಕ ಅಹಂಬಾವದಲ್ಲಿ ಮೆರೆಯುವುದು ಸರಿಯಲ್ಲ. ಪಕ್ಷಕ್ಕೆ ನಿಷ್ಠರಾಗಿ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಸೋಮವಾರ ನಡೆದ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಐದು ಮಂದಿ ಹಿಂದುಳಿದ ವರ್ಗದವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿದೆ. ಮಹಿಳೆ ಮತ್ತು ಅಲ್ಪಸಂಖ್ಯಾತ ಸಿಖ್ ಸಮುದಾಯದ ವ್ಯಕ್ತಿಗೆ ಪ್ರಧಾನ ಮಂತ್ರಿ ಸ್ಥಾನ, ಭೂಮಸೂದೆ ಕಾನೂನಿನ ಮೂಲಕ ಜನಸಾಮಾನ್ಯರಿಗೆ ಸ್ವಾಭಿಮಾನದ ಬದುಕು, ಲಕ್ಷಾಂತರ ಮಂದಿಗೆ ನಿವೇಶನ, ಬಡವ-ದೀನ ದಲಿತ, ಶೋಷಿತ, ಮರ್ದಿತರ ಹಾಗೂ ರೈತರಿಗೆ ವಿಶೇಷವಾದ ಸ್ಥಾನಮಾನವನ್ನು ಕಲ್ಪಿಸಿದ್ದ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಎಂ.ಎಸ್. ಮುಹಮ್ಮದ್, ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಭೂಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬಿ.ಎಂ. ಅಬ್ಬಾಸ್ ಅಲಿ, ಮಾಯಿಲಪ್ಪ ಸಾಲಿಯಾನ್, ಪಕ್ಷ ಪ್ರಮುಖರಾದ ಪಿಯೂಸ್ ಎಲ್. ರೋಡ್ರಿಗಸ್, ಪದ್ಮಶೇಖರ್ ಜೈನ್, ಸಂಜೀವ ಪೂಜಾರಿ ಬೊಳ್ಳಾಯಿ, ಐಡಾ ಸುರೇಶ್, ವಸಂತಿ ಚಂದಪ್ಪ, ಯಾಸ್ಮೀನ್ ಹಾಮದ್, ಹೇಮಾವತಿ, ಧನಲಕ್ಷ್ಮಿ ಬಂಗೇರ, ಲುಕ್ಮಾನ್, ಪ್ರಶಾಂತ್ ಕುಲಾಲ್, ಭಾಸ್ಕರ್ ಮೊೈಲಿ, ಜಗದೀಶ್ ಕೊೈಲ ಮೊದಲಾದವರು ವೇದಿಕೆಯಲ್ಲಿದ್ದರು.ಬಂಟ್ವಾಳ ತಾಲೂಕಿನ ಬಹುಕಾಲದ ಬೇಡಿಕೆಯಾದ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಟೆಂಡರ್ ಮಂಜೂರಾಗಿದ್ದು, ಶೀಘ್ರವೇ ಕರೋಪಾಡಿ ಹಾಗೂ ಸಿದ್ದಕಟ್ಟೆಯಲ್ಲಿ ಶಿಲಾನ್ಯಾಸ ಕಾರ್ಯ ನಡೆಯಲಿದೆ. ಬಂಟ್ವಾಳದಲ್ಲಿ 10 ಕೋಟಿ ರೂಪಾಯಿ ವೆಚ್ಚದ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಈಗಾಗಲೇ ಐದು ಕೋಟಿ ರೂಪಾಯಿ ಮಂಜೂರಾಗಿದ್ದು, ಶೀಘ್ರದಲ್ಲಿ ಶಿಲಾನ್ಯಾಸ ನಡೆಯಲಿದೆ. ಬಿ.ಸಿ.ರೋಡಿನಲ್ಲಿ ಏಳೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಬಸ್ ನಿಲ್ದಾಣ ಕಾಮಗಾರಿಗೆ ಟೆಂಡರ್ ಕೆರಯಲಾಗಿದೆ.
ಬಂಟ್ವಾಳಕ್ಕೆ ಟಾಫಿಕ್ ಪೊಲೀಸ್ ಠಾಣೆ ಮಂಜೂರಾಗಿದೆ ಹಾಗೂ ಅಂಬೇಡ್ಕರ್ ಭವನಕ್ಕೆ 2 ಕೋಟಿ ರೂಪಾಯಿ ಮಂಜೂರಾಗಿದ್ದು, ಸ್ಥಳ ಪರಿಶೀಲನೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಎಆರ್‍ಟಿಒ ಹಾಗೂ ಎಸಿ ವಿಭಾಗೀಯ ಕಛೇರಿ ಬಂಟ್ವಾಳಕ್ಕೆ ಶೀಘ್ರದಲ್ಲೇ ತರಲಾಗುವುದು.
KAR_8799

By suddi9

Leave a Reply

Your email address will not be published. Required fields are marked *