ಸುದ್ದಿ9 ಮೂಡುಬಿದಿರೆ: ನಿಜವಾದ ನ್ಯಾಯವನ್ನು ಸರಿಯಾದ ಸಮಯದಲ್ಲಿ ಸೂಕ್ತ ಪರಿಶ್ರಮದೊಂದಿಗೆ ನ್ಯಾಯ ಕೇಳಲು ಬಂದವರಿಗೆ ನೀಡುವುದಕ್ಕೆ ನ್ಯಾಯಾಂಗ ವ್ಯವಸ್ಥೆ ಆದ್ಯತೆಯ ಸೇವೆ
ನೀಡಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ, ಸೌಲಭ್ಯಗಳಲ್ಲಿ ಅಭಿವೃದ್ಧಿ, ನ್ಯಾಯವಾದಿಗಳ ಸೌಲಭ್ಯಗಳಲ್ಲಿ ಬೆಳವಣಿಗೆಯಾಗುವುದರ ಜತೆಗೆ ಉತ್ತಮ ನ್ಯಾಯದಾನವೇ ಮಹತ್ವದ್ದಾಗಿದೆ ಎಂದು ರಾಜ್ಯ ಹೈಕೋಟ್‍ನ ಮುಖ್ಯ ನ್ಯಾಯಮೂರ್ತಿ ಡಿ.ಹೆಚ್. ವಘೇಲಾ ಹೇಳಿದರು. ಅವರು ಜಿಲ್ಲಾ ನ್ಯಾಯಾಂಗ, ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ, ಮೂಡುಬಿದಿರೆ ವಕೀಲರ ಸಂಘದ ಸಹಯೋಗದಲ್ಲಿ ಮೂಡುಬಿದಿರೆಯ ಪಶು ವೈದ್ಯಕೀಯ ಆಸ್ಪತ್ರೆಯ ಬಳಿ 6.60 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಸುಸಜ್ಜಿತ ನ್ಯಾಯಾಲಯ ಕಟ್ಟಡವನ್ನು ರವಿವಾರ ಉದ್ಘಾಟಿಸಿ ಮಾತನಾಡಿದರು.
ಮೂಡುಬಿದಿರೆಯ ನ್ಯಾಯಾಲಯದ ನೂತನ ಸುಸಜ್ಜಿತ ಕಟ್ಟಡ ಗುಜರಾತ್‍ನಂತಹ ದೇಶದ ಅಭಿವೃದ್ಧಿ ಹೊಂದಿದ ರಾಜ್ಯದಲ್ಲಾಗಲೀ, ಕರ್ನಾಟಕದ ಯಾವುದೇ ತಾಲೂಕುಗಳಲ್ಲಿ ಇಲ್ಲದಿರುವ ಅತ್ಯುತ್ತಮ ಕಟ್ಟಡದ ಸಂಕೀರ್ಣವಾಗಿದೆ ಎಂದವರು ಪ್ರಶಂಸೆಯ ಮಾತುಗಳನ್ನಾಡಿದ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿರುವ ಕ್ಷೇತ್ರ ದ.ಕ.ಜಿಲ್ಲೆ. ಇಲ್ಲಿ ಹಲವು ಐಸಿಹಾಸಿಕ ಸ್ಥಳಗಳು, ಸಾಧನೆಗಳು, ಸಾಹಿತಿಗಳು, ಸಾಧಕರ ಜೊತೆ ಅತ್ಯುತ್ತಮ ವಕೀಲರೂ ಇದ್ದಾರೆ. ರಾಜ್ಯ ಸರ್ಕಾರ ನ್ಯಾಯಾಂಗ ವ್ಯವಸ್ಥೆಗಳನ್ನು ಬಲಗೊಳಿಸಲು ಹೆಚ್ಚಿನ ಮುತುವರ್ಜಿ ವಹಿಸುತ್ತಿರುವುದು ಶ್ಲಾಘನೀಯ. ಎಂದು ಹೇಳಿದರು.
ಹೈಕೋರ್ಟ್ ನ್ಯಾಯಾಧೀಶ, ದ.ಕ. ಜಿಲ್ಲೆ ಆಡಳಿತಾತ್ಮಕ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯದಲ್ಲೆ ಹೋಬಳಿ ಕೇಂದ್ರದಲ್ಲಿ ನಿರ್ಮಾಣವಾಗಿರುವ ಮೊದಲ ಸುಸಜ್ಜಿತ ನ್ಯಾಯಾಲಯ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಈ ನ್ಯಾಯಾಲಯವು ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ನ್ಯಾಯಾಲಯವನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಮಾತುಕತೆ ನಡೆದಿದೆ ಎಂದರು.
ರಾಜ್ಯ ಹೈಕೋರ್ಟ್‍ನ ನ್ಯಾಯಮೂರ್ತಿ ಎನ್.ಕೆ.ಪಾಟೀಲ್, ಹೈಕೋರ್ಟ್‍ನ ರಿಜಿಸ್ಟ್ರಾರ್ ಜನರಲ್ ಬಿ.ಎ ಪಾಟೀಲ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್, ಮೂಡುಬಿದಿರೆ ವಕೀಲರ ಸಂಘದ ಸ್ಥಾಪಕಾಧ್ಯಕ್ಷ ಬಾಹುಬಲಿ ಪ್ರಸಾದ್, ಲೋಕೋಪಯೋಗಿ ಇಲಾಖೆ ಮಂಗಳೂರು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎ.ಜಿ. ಧರ್ಮರಾಜ್, ರಾಜ್ಯ ವಕೀಲರ ಪರಿಷತ್‍ನ ಅಧ್ಯಕ್ಷ ಪಿ.ಪಿ.ಹೆಗ್ಡೆ ಉಪಸ್ಥಿತರಿದ್ದರು, ಇದೇ ಸಂದರ್ಭದಲ್ಲಿ ಕಟ್ಟಡ ಗುತ್ತಿಗೆದಾರ ಸುಧಾಕರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶೆ ಉಮಾ ಎಂ.ಜಿ ಸ್ವಾಗತಿಸಿದರು. ಪಿ.ಸುಗಂಧ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ಪಂಡಿತ್ ವಂದಿಸಿದರು. ಉದ್ಘಾಟನಾ ಸಮಾರಂಭಕ್ಕೂ ಮೊದಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಹೆಚ್. ವಘೇಲಾ ಅವರಿಗೆ ಗೌರವ ರಕ್ಷೆ ನೀಡಲಾಯಿತು.
mbd_feb8_1(a)

mbd_feb8_1

By suddi9

Leave a Reply

Your email address will not be published. Required fields are marked *