ಸುದ್ದಿ9 ಬಂಟ್ವಾಳ :ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ ದಂಪತಿಯನ್ನು ಸನ್ಮಾನಿಸಲಾಯಿತು. ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲು, ಏರ್ಯ ಲಕ್ಷ್ಮೀನಾರಾಯಣ ಆಳ್ವ ಮತ್ತಿತರರು ಇದ್ದಾರೆ.
ಈ ಹಿಂದೆ ಬಂಟ್ವಾಳದಲ್ಲಿ ನೇತ್ರಾವತಿ ನದಿ ಉಕ್ಕಿ ಹರಿದು ನೆರೆ ಕಾಣಿಸಿಕೊಂಡಾಗ ಇಲ್ಲಿನ ನಾಗರಿಕರಿಗೆ ಆಶ್ರಯ ನೀಡಿದ್ದ ಇಲ್ಲಿನ ಕಾರಣಿಕ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತನ್ನದೇ ಆದ ವೈಶಿಷ್ಯ ಇದೆ. ಈ ದೇವಸ್ಥಾನ ಸಮೀಪದಲ್ಲೇ ಇರುವ ಜಿಲ್ಲೆಯ ಜೀವನದಿ ನೇತ್ರಾವತಿಯು ಆಳುವವರ ನದಿ ತಿರುವು ಯೋಜನೆ ಮೂಲಕ ಕಣ್ಮರೆಯಾದರೂ ಶಿವಾಲಯ ಮಾತ್ರ ಎಂದೆಂದಿಗೂ ಶಾಶ್ವತವಾಗಿ ಭಕ್ತರಿಗೆ ಉಳಿಯುತ್ತದೆ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ಸಂಜೆ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಸಂಸದ ನಳಿನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 192 ದೇವಸ್ಥಾನಗಳಲ್ಲಿ ಬ್ರಹ್ಮಕಲಶೋತ್ಸವ, 92 ನಾಗಬನಗಳಲ್ಲಿ ನಾಗಮಂಡಲೋತ್ಸವ, 64 ದೈವಸ್ಥಾನಗಳಲ್ಲಿ ಧರ್ಮನೇಮೋತ್ಸವ ನಡೆದಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಭಕ್ತರ ಮೂಲಕ ಸುಮಾರು ರೂ 600ಕೋಟಿ ಮೊತ್ತದ ಆರ್ಥಿಕ ವ್ಯವಹಾರ ನಡೆದಿದೆ. ಆದರೆ ಬಹುರಾಷ್ಟ್ರೀಯ ಕಂಪೆನಿಗಳು ಅದೆಷ್ಟು ಕೋಟಿ ಮೊತ್ತದ ಆರ್ಥಿಕ ವ್ಯವಹಾರ ನಡೆಸಿದರೂ ಜನಸಾಮಾನ್ಯರಿಗೆ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಜಯರಾಮ ಭಟ್, ಮುಂಬೈ ಹೋಟೆಲ್ ಉದ್ಯಮಿ ಪದ್ಮನಾಭ ಪಯ್ಯಡೆ, ಪುರಸಭಾಧ್ಯಕ್ಷೆ ವಸಂತಿ, ಸದಸ್ಯ ಎ.ಗೋವಿಮದ ಪ್ರಭು ಮತ್ತಿತರರು ಶುಭ ಹಾರೈಸಿದರು.
ಇದೇ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ ದಂಪತಿ, ಸದಸ್ಯ ಬಿ.ಎಸ್.ವಸಂತ ರಾವ್, ಅಡುಗೆ ಪಾಕತಜ್ಞ ಓಣಿಬೈಲು ಶಂಕರ ಐತಾಳ್ ಇವರನ್ನು ಸನ್ಮಾನಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಸದಸ್ಯೆ ಮೀನಾಕ್ಷಿ ವಿ.ರಾವ್ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.