ಯುವ ಶಕ್ತಿಯನ್ನು ಸಾಂಸ್ಕ್ರತಿಕ ಶಕ್ತಿಯನ್ನಾಗಿಸಿ: ಜಾನಕಿ ಬ್ರಹ್ಮಾವರ
ಸುದ್ದಿ9 ಮೂಡುಬಿದಿರೆ: ಯುವಶಕ್ತಿಯ ಸಾಮಥ್ರ್ಯ ಅಗಾಧವಾಗಿದ್ದು ಈ ಯುವ ಶಕ್ತಿಯನ್ನು ಸಾಂಸ್ಕ್ರತಿಕ ಶಕ್ತಿಯನ್ನಾಗಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಎಮ್. ಬ್ರಹ್ಮಾವರ ಹೇಳಿದರು. ಅವರು ಬುಧವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಹಳೆ ವಿದ್ಯಾರ್ಥಿ ಸಂಘ, ಹಾಗೂ ತುಳುಕೂಟ ಮೂಡಬಿದಿರೆ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ 8ನೇ ವರ್ಷದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ತುಳುನಾಡಸಿರಿ ಮದಿಪು 2015 ಉದ್ಘಾಟಿಸಿ ಮಾತನಾಡುತ್ತಿದ್ದರು.ಒಳಿತಿಗೆ ಹತ್ತಿರವಾಗಿ ಬದುಕುವುದು ತುಳು ಸಂಸ್ಕ್ರತಿ. ಈ ನಿಟ್ಟಿನಲ್ಲಿ ಜಡತ್ವ ತೊರೆದು ಹಿರಿಯರು ಹಚ್ಚಿದ ಸಾಂಸ್ಕ್ರತಿಕ ಹಣತೆಯನ್ನು ನಂದಾದೀಪವನ್ನಾಗಿಸುವ ಕೆಲಸ ಶಿಕ್ಷಣ ಸಂಸ್ಥೆಗಳ ಮೂಲಕ ಅರ್ಥಪೂರ್ಣವಾಗಿ ನಡೆಯಲು ಸಾಧ್ಯವಿದೆ ಎಂದವರು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಯಾಗಿದ್ದ ಆಳ್ವಾಸ್ ಎಜುಕೇಷನ್ ಫೌಂಡೇಶನ್‍ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ ಶಿಕ್ಷಣದ ಜತೆಗೆ ಮುಖ್ಯವಾಗಿ ಭಾಷೆ ಬದುಕನ್ನು ಬೆಳಗಿಸುತ್ತದೆ. ಎಲ್ಲರನ್ನೂ ಒಗ್ಗೂಡಿಸುವುದೇ ಭಾಷೆಯ ಸೊಗಸು. ಯಾವ ಕಾರಣಕ್ಕೂ ನಮ್ಮ ಆಡು ಭಾಷೆಯನ್ನು ಸೊರಗಲು ಬಿಡಬಾರದು ಎಂದರು.
Tulu nada siri udghatane

mbd_feb11_2
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಮಾತನಾಡಿ ಜಾಗತೀಕರಣದ ದಾಳಿಯ ಈ ದಿನಗಳಲ್ಲಿ ಅಂತರ್ಜಾಲದ ಭಾಷೆಯ ಅಬ್ಬರದ ನಡುವೆ ವಿದ್ಯಾರ್ಥಿ ಸಮುದಾಯ ತಮ್ಮ ನೆಲದ ತುಳು ಸಂಸ್ಕ್ರತಿಯ ಕುರಿತು ತೋರುತ್ತಿರುವ ಕಾಳಜಿ ಅಭಿನಂದನೀಯ ಎಂದರು, ವಿಶ್ವ ತುಳು ಸಮ್ಮೆಳನದ ನಂತರದ ದಿನಗಳಲ್ಲಿ ತುಳು ಸ್ವಾಭಿಮಾನದ ಭಾಷೆಯಾಗಿ ಬದಲಾಗಿದೆ ಎಂದವರು ಹೇಳಿದರು.
ಇದೇ ಸಂದರ್ಭದಲ್ಲಿ ತುಳುನಾಡಿನ ವಿಶಿಷ್ಟ ಕ್ರೀಡೆಯಾದ ಕಂಬಳ ಕ್ಷೇತ್ರಕ್ಕೆ ಅಪಾರ ಸೇವೆಯನ್ನು ಸಲ್ಲಿಸಿದ ಸಾಣೂರು ಸುಂದರ ಕೋಗ ಆಚಾರ್ ಅವರನ್ನು ಸನ್ಮಾನಿಸಲಾಯಿತು. ಮೂಡುಬಿದಿರೆ ತುಳು ಕೂಟದ ಅಧ್ಯಕ್ಷ ಸುಭಾಶ್ಚಂದ್ರ ಪಡಿವಾಳ್, ಕಾರ್ಯದರ್ಶಿ ಚಂದ್ರಹಾಸ ದೇವಾಡಿಗ ಅತಿಥಿಗಳಾಗಿ ಭಾಗವಹಿಸಿದ್ದರು. ವಿಜಯ ಲಕ್ಷ್ಮೀ ಮಾರ್¯ ಸಮ್ಮಾನ ಪತ್ರ ವಾಚಿಸಿದರು. ಸುಲೋಚನಾ ಪಚ್ಚಿನಡ್ಕ ಅತಿಥಿಗಳನ್ನು ಪರಿಚಯಿಸಿದರು.
ಕಾಲೇಜಿನ ಪ್ರಾಂಶುಪಾಲ ಹೆಚ್. ಚಂದ್ರಶೇಖರ್ ದೀಕ್ಷಿತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿ ನಾಯಕರುಗಳಾದ ಸುಧೀಂದ್ರ ಪ್ರಭು, ಆಯುಷ್ ಹೆಗ್ಡೆ, ಸುಶಾಂತ್ ಗೌಡ, ಅಶೋಕ್ ಮತ್ತು ರಕ್ಷಿತಾ , ತುಳು ಸಂಘದ ಕಾರ್ಯದರ್ಶಿ ಸೂರ್ಯತೇಜ ಉಪಸ್ಥಿತರಿದ್ದರು. ಮುಖ್ಯ ಸಂಯೋಜಕರಾದ ಪ್ರೊ. ಹರೀಶ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಮಧೂರು ಮೋಹನ ಕಲ್ಲೂರಾಯ ವಂದಿಸಿದರು. ಸಂಯೋಜಕಿ ನಳಿನಿ ಕಾರ್ಯಕ್ರಮ ನಿರ್ವಹಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿದ್ದು ಹಿಂಗಾರ ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ಡಾ. ಎಂ. ಮೋಹನ ಆಳ್ವ ಮಾತಿಗೆ ಮೈಕಿನೆದುರು ಬಂದಾಗ ದೈವದ ಕೋಲದ ಹಿಮ್ಮೇಳ ಕೇಳಿ ಬಂತು. ಆಳ್ವರೇನು ಮಾತನಾಡುತ್ತಾರೆ ಎನ್ನುವ ಕುತೂಹಲದಲ್ಲಿದ್ದವರಿಗೆ ಒಮ್ಮೆಲೇ ಏರು ಧ್ವನಿಯಲ್ಲಿ ತುಳುವಿನಲ್ಲಿ ದೈವದ ನುಡಿಗಳನ್ನು ಸರಾಗವಾಗಿ ಸಭೆಗೆ ಮಂಡಿಸಿದ ಮೋಹನ ಆಳ್ವ ದೈವದ ಆವೇಶದ ಮದುವನ್ನು ಅದೇ ಧಾಟಿಯಲ್ಲಿ ಹೇಳುತ್ತಾ ಸಾಗಿದರೆ ಸಭೆಯಲ್ಲಿ ಕರತಾಡನ ಹರ್ಷೊದ್ಘಾರ ಕೇಳಿ ಬಂತು. ಎಪ್ಪತ್ತರ ದಶಕದಲ್ಲಿ ಇದೇ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿ ಇದ್ದ ಅವಧಿಯುದ್ದಕ್ಕೂ ತಾವು ದೈವವಾಗಿ ಅಭಿನಯಿಸಿದ್ದ ದಿನಗಳನ್ನು ಮೆಲುಕು ಹಾಕಿದ ಆಳ್ವರು ಅಧ್ಯಾಪಕರು ಇಲ್ಲಿ ಕಲಿಸಿದ್ದು ಮರೆತಿರಬಹುದು. ಆದರೆ ಭಾಷೆ ಕಲಿಸಿದ್ದನ್ನು ಇಂದಿಗೂ ಮರೆತಿಲ್ಲ ಎಂದರು. ಕಾಲೇಜು ದಿನಗಳಲ್ಲಿ ಇಲ್ಲಿ ತಾವು ಪ್ರಿಯತಮನಾಗಿ ತುಳು ರಂಗಭೂಮಿಯಲ್ಲಿ ಹಾಡಿದ್ದ ಪ್ರಣಯ ಗೀತೆಯ ಸಾಲನ್ನೂ ಗುನುಗಿದ ಆಳ್ವರು ಸೇರಿದ್ದ ವಿದ್ಯಾರ್ಥಿಗಳ ಮನ ಗೆದ್ದರು.

By suddi9

Leave a Reply

Your email address will not be published. Required fields are marked *