ಯಡ್ಡಿ ಬಂಟ ಕಾಂಗ್ರೆಸ್ ಗೆ
ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದಕ್ಕೆ ಹೊಸ ಸೇರ್ಪಡೆಯೆಂಬಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪರಮಾಪ್ತ ಎಂ.ಡಿ ಲಕ್ಷ್ಮಿ ನಾರಾಯಣ ಕಾಂಗ್ರೆಸ್ ಕದ ತಟ್ಟುವ ಸನ್ನಾಹದಲ್ಲಿದ್ದಾರೆ. ತುಮಕೂರು ಜಿಲ್ಲೆಯ ತುರುವೆಕೆರೆಯ ಮಾಜಿ ಶಾಸಕರಾಗಿರುವ ಲಕ್ಷ್ಮಿ ನಾರಾಯಣ ಅವರು ಯಡಿಯೂರಪ್ಪ ಜೊತೆ ಬಿಜೆಪಿಗೆ ಮರಳಿದ್ದರು. ಆದರೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನಗಳನ್ನು ನೀಡದ ಕಾರಣದಿಂದ ಅಸಮಾಧಾನಗೊಂಡ ಅವರು ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರುವ ಸೂಚನೆ ನೀಡಿದ್ದಾರೆ.
ಭಾನುವಾರ ನಗರದಲ್ಲಿ ತಮ್ಮ ಬೆಂಬಲಿಗರ ಜೊತೆ ಸಮಾಲೋಚನೆ ನಡೆಸಿದ ನಾರಾಯಣ ಮಾರ್ಚ್ 18ಕ್ಕೆ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಯಡಿಯೂರಪ್ಪ ಅವರ ಮತ್ತೊಬ್ಬ ಆಪ್ತ ಧನಂಜಯ್ ಕುಮಾರ್ ಬಿಜೆಪಿಯ ನಿರ್ಲಕ್ಷ್ಯಕ್ಕೊಳಗಾಗಿ ಜೆಡಿಎಸ್ ಸೇರಿದ್ದರು. ಅವರ ಬೆನ್ನಲ್ಲೇ ಈಗ ಲಕ್ಷ್ಮಿ ನಾರಾಯಣ ಕಾಂಗ್ರೆಸ್ ಜೊತೆ ಕೈ ಜೋಡಿಸಲು ಮುಂದಾಗಿದ್ದಾರೆ.
