ಬಂಟ್ವಾಳ : ಮುಖ್ಯ ಪೇಟೆಯ ರಸ್ತೆಯಲ್ಲೇ ಚರಂಡಿ ತ್ಯಾಜ್ಯ ಹರಿಯುತ್ತಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿನ ಅಂಗಡಿ ಮಾಲಕರು ಹಾಗೂ ಸಾರ್ವಜನಿಕರು ದುರ್ನಾತವನ್ನೇ ಉಸಿರಾಡುತ್ತಾ ಜೀವನ ನಡೆಸುವ ಸಂಧಿಗ್ಧ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳ ಪೇಟೆಯ ವಾಸುದೇವ ವಾಣಿಜ್ಯ ಸಂಕೀರ್ಣದ ಮುಂಭಾಗ ರಸ್ತೆಯ ಚರಂಡಿ ಬ್ಲಾಕ್ ಆಗಿ ಅದರೊಳಗಿನ ಕೊಳಚೆ ನೀರು ಸಾರ್ವಜನಿಕ ರಸ್ತೆಗೆ ಹಾಗೂ ಅಂಗಡಿ ಬಾಗಿಲಿಗೆ ಹರಿದು ಬರುತ್ತಿದೆ.

ಇದು ಕಳೆದ ನಾಲ್ಕೈದು ವರ್ಷಗಳ ನಿರಂತರ ಸಮಸ್ಯೆಯಾಗಿದ್ದು, 2010 ರಿಂದ ಈ ಬಗ್ಗೆ ಹಲವು ಮನವಿಗಳನ್ನು ಪುರಸಭಾಧಿಕಾರಿಗಳಿಗೆ ಸಲ್ಲಿಸಿದರೂ ಸ್ಪಂದನೆ ಮಾತ್ರ ಶೂನ್ಯ ಎನ್ನುತ್ತಾರೆ ಇಲ್ಲಿನ ಅಂಗಡಿ ಮಾಲಕರು ಹಾಗೂ ಸಾರ್ವಜನಿಕರು. ಸಮೀಪದ ಹೊಟೇಲೊಂದರ ತ್ಯಾಜ್ಯ ನೀರು ಸಹಿತ ಕೊಳಚೆ ಹರಿದು ಹೋಗುವ ಈ ಚರಂಡಿಗೆ ಕಾಯಕಲ್ಪ ಇಲ್ಲದೆ ವರ್ಷಗಳೇ ಸಂದುಹೋಗಿವೆ ಎನ್ನುವ ಸ್ಥಳೀಯರು ಕಳೆದ ವರ್ಷ ಸ್ವತಃ ವಾಣಿಜ್ಯ ಸಂಕೀರ್ಣದ ಮಾಲಕರೇ ಚರಂಡಿಯ ಸ್ಲ್ಯಾಬ್ ತೆಗೆದು ಒಂದಷ್ಟು ದುರಸ್ತಿ ಪಡಿಸಿ ಪರಿಹಾರಕ್ಕೆ ಪ್ರಯತ್ನಿಸಿದ್ದರು. ಆದರೆ ಅದು ತಾತ್ಕಾಲಿಕ ಪರಿಹಾರ ಕಂಡಿದ್ದರೂ ಬಳಿಕ ಮತ್ತದೇ ಪರಿಸ್ಥಿತಿ ಮುಂದುವರಿದಿದೆ.
ಪ್ರತಿಭಟನೆ ಎಚ್ಚರಿಕೆ
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ಹಾಗೂ ಕಸದ ಸಮಸ್ಯೆಗಳು ಬೇಕಾಬಿಟ್ಟಿ ತಾಂಡವವಾಡುತ್ತಿದ್ದು, ಆಡಳಿತ ಪಕ್ಷ-ವಿರೋಧ ಪಕ್ಷಗಳ ಪ್ರತಿನಿಧಿಗಳು ಇದ್ಯಾವುದೂ ತಮಗೆ ಸಂಬಂಧಪಟ್ಟದ್ದೇ ಅಲ್ಲ ಎಂಬಂತೆ ವತರ್ಿಸುತ್ತಿದ್ದು, ಜನ ತೀವ್ರ ರೋಸಿ ಹೋಗುವಂತಾಗಿದೆ. ಅದರಲ್ಲೂ ಬಂಟ್ವಾಳ ಪೇಟೆಯ ಸಮಸ್ಯೆ ಹೇಳ ತೀರದಂತಾಗಿದೆ. ಶೀಘ್ರದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಸ್ಪಂದಿಸದಿದ್ದಲ್ಲಿ ಸಾರ್ವಜನಿಕರನ್ನು ಒಟ್ಟುಗೂಡಿಸಿ ಪುರಸಭಾ ಕಛೇರಿಗೆ ಮುತ್ತಿಗೆ ಹಾಕಿ ಭಾರೀ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸ್ಥಳೀಯ ಜೆಡಿಎಸ್ ಮುಖಂಡ ಹಾರೂನ್ ರಶೀದ್ ಬಂಟ್ವಾಳ ಎಚ್ಚರಿಸಿದ್ದಾರೆ.