ಕೊನೆಗೂ ಕುಡಿಯುವ ನೀರು ಬಂತು…!
ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾ.ಪಂ.ವ್ಯಾಪ್ತಿಯ ಕೈತ್ರೋಡಿ ಪರಿಸರದಲ್ಲಿ ಕಳೆದ ಹಲವು ಸಮಯದಿಂದ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ಕೊನೆಗೂ ಪರಿಹಾರದ ಹಂತಕ್ಕೆ ತಲುಪಿದ್ದು, ಇಲ್ಲಿನ ಕಂಬಳದಡ್ಡ ಹೊಸ ಕೊಳವೆ ಬಾವಿ ಕುಡಿಯುವ ನೀರಿನ ಯೋಜನೆ ಬುಧವಾರ ಉದ್ಘಾಟನೆಗೊಂಡಿದೆ.
20btl-neeru
ಇಲ್ಲಿನ ಕಂಬಳದಡ್ಡ ಎಂಬಲ್ಲಿ ಇದೇ 14ರಂದು ಕೊರೆದ ಹೊಸ ಕೊಳವೆ ಬಾವಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಕಾಣಿಸಿಕೊಂಡಿತ್ತು. ಈ ಕೊಳವೆ ಬಾವಿಯಲ್ಲಿ ನೀರು ಉಕ್ಕಿ ಬಂದು ಒಂದು ವಾರ ಕಳೆದರೂ ಪಂಪ್ ಮತ್ತು ಪೈಪ್‍ಲೈನ್ ಅಳವಡಿಸಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದರಿಂದಾಗಿ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಜಗದೀಶ್ ನಿಂಬಾಳ್ಕರ್ ಮತ್ತು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ (ಪಿಡಿಒ) ವೆಂಕಟೇಶ್ ಧಾವಿಸಿ ಬಂದು ಕಳೆದ ಎರಡು ದಿನಗಳಲ್ಲಿ ಹೊಸ ಪೈಪ್‍ಲೈನ್, ಪಂಪ್ ಅಳವಡಿಕೆ ಮತ್ತು ವಿದ್ಯುತ್‍ಸಂಪರ್ಕ ನೀಡಿ ಬುಧವಾರ ಬೆಳಗ್ಗೆ ಕುಡಿಯುವ ನೀರು ಪೂರೈಕೆಗೆ ಚಾಲನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಅಂಗನವಾಡಿ ಕೇಂದ್ರ ಸಹಿತ ನೂರಾರು ಮನೆಗಳಿಗೆ ಕಳೆದ ಹಲವು ಸಮಯದಿಂದ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕೆ ನಿವಾರಣೆಗೊಂಡಿದೆ.
ಇದರಿಂದಾಗಿ ಇದೇ 29ರಂದು ನಡೆಯುವ ಗ್ರಾ.ಪಂ.ಚುನಾವಣೆಗೆ ಸ್ಪರ್ಧಿಸುತ್ತಿರುವ ಇಲ್ಲಿನ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮತಯಾಚಿಸಲು ಕೂಡಾ ಅನುಕೂಲಕರವಾಗಿದೆ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ.
ಸ್ಥಳೀಯ ನಿವಾಸಿಗಳಾದ ದಿನಕರ ಭಟ್, ಹರೀಶ್ ಶೆಟ್ಟಿ, ಸುರೇಶ್ ಆಚಾರ್ಯ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *