ಬಂಟ್ವಾಳ ತಾಲ್ಲೂಕಿನ ಗ್ರಾಮೀಣ ಪ್ರದೇಶ ನಯನಾಡು ಸರ್ಕಾರಿ ಪ್ರೌಢಶಾಲೆಯು ಈ ಬಾರಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿ ಸುದ್ದಿಯಾಗಿದ್ದು, ಇದೀಗ ಇಲ್ಲಿನ ವಿದ್ಯಾರ್ಥಿ ನಾಯಕರ ಆಯ್ಕೆಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಶುಕ್ರವಾರ ನಡೆದ ‘ಸಂಸತ್ ಚುನಾವಣೆ’ಯಲ್ಲಿ ಶೇ.100 ಮತದಾನ ದಾಖಲಿಸುವ ಮೂಲಕ ಮತ್ತೆ ಸುದ್ದಿಯಾಗಿದೆ.
ಇದರಿಂದಾಗಿ ಚುನಾವಣಾ ಆಯೋಗ ನಡೆಸುತ್ತಿರುವ ಸಾರ್ವತ್ರಿಕ ಚುನಾವಣೆಯ ‘ಕಡ್ಡಾಯ ಮತದಾನ’ಕ್ಕೆ ಇಲ್ಲಿನ ವಿದ್ಯಾರ್ಥಿಗಳು ಇತರರಿಗೆ ಮಾದರಿಯಾಗಿದ್ದಾರೆ.
ಇಲ್ಲಿನ ಒಟ್ಟು 100 ಮಂದಿ ವಿದ್ಯಾರ್ಥಿಗಳ ಪೈಕಿ ಎಲ್ಲರೂ ತಪ್ಪದೆ ಮತದಾನ ಮಾಡುವ ಮೂಲಕ ತಮ್ಮ ಶಾಲಾ ನಾಯಕ, ಉಪ ನಾಯಕ, ಕಾರ್ಯದರ್ಶಿ ಮತ್ತು ಕ್ರೀಡಾ ಮಂತ್ರಿ ಆಯ್ಕೆಗೊಳಿಸಿದ್ದಾರೆ.
ಜೂ. 9ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದಿದ್ದು, ಇಲ್ಲಿನ ಒಟ್ಟು ನಾಲ್ಕು ಸ್ಥಾನಗಳಿಗೆ ಒಟ್ಟು 13 ಮಂದಿ ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಜೂ. 10ರಂದು ನಾಮಪತ್ರ ಪರಿಶೀಲನೆ ನಡೆದಿದ್ದು, ಯಾವುದೇ ನಾಮಪತ್ರ ತಿರಸ್ಕಾರಗೊಂಡಿರಲಿಲ್ಲ.
ಅಂತಿಮವಾಗಿ ಸ್ಪರ್ಧಾಳುಗಳಾದ ನಿಶ್ಮಿತಾ, ವಿಲ್ಮಾ, ಮಲ್ಲಿಕಾ, ಸಂಗೀತ, ಪ್ರಭಾಶ್ರಿ, ರೋಶನ್, ಮಂಜುನಾಥ, ಮನೋಜ, ಜೋಯೆಲ್, ನವೀನ ಕುಮಾರ್, ಪ್ರಶಾಂತ್, ರೀವನ್ ಲೋಬೊ, ಲತೀಶ್ ಇವರು ಸ್ಪರ್ಧಾ ಕಣದಲ್ಲಿ ಉಳಿದಿದ್ದರು. ಇವರಿಗೆ ಗಡಿಯಾರ, ಪೆನ್ನು, ಸೂರ್ಯ, ದೀಪ, ಪುಸ್ತಕ, ಪೆಂಗ್ವಿನ್, ಹೂವು, ಎಲೆ, ಕೊಡೆ, ಚೆಂಡು ಮತ್ತಿತರ ಚಿಹ್ನೆ ನೀಡಿ ಮತಪತ್ರವೂ ಮುದ್ರಣಗೊಂಡಿತ್ತು.
ಜೂ. 12ರಂದು ನಡೆದ ಮತದಾನದಲ್ಲಿ ಇಲ್ಲಿನ ಮತದಾರರು ಚುನಾವಣಾಧಿಕಾರಿ ಪ್ರಕಾಶ ನಾಯ್ಕ್ (ಹಿಂದಿ ಶಿಕ್ಷಕ) ಅವರಿಗೆ ತಮ್ಮ ಶಾಲಾ ಗುರುತಿನ ಚೀಟಿ ತೋರಿಸಿ ಸಾಲಾಗಿ ನಿಂತು ಶಾಂತಿಯುತವಾಗಿ ಮತದಾನ ನಡೆಸಿದರು. ಈ ಸಂದರ್ಭದಲ್ಲಿ ಶಾಂತಿಯುತ ಮತದಾನಕ್ಕೆ ಇಲ್ಲಿನ ವಿದ್ಯಾರ್ಥಿಗಳೇ ಪೊಲೀಸರಂತೆ ಸಮವಸ್ತ್ರದಲ್ಲಿ ಪಹರೆ ಕಾಯುವ ಮೂಲಕ ಸಹಕರಿಸಿದರು.


ಯಾವುದೇ ರೀತಿಯ ನಕಲಿ ಮತದಾನಕ್ಕೆ ಅವಕಾಶವಾಗದಂತೆ ಪ್ರತೀ ಮತದಾರರ ಎಡಗೈ ತೋರ್ಬೆರಳಿಗೆ ನೀಲಿ ಮಾರ್ಕರ್ ಮೂಲಕ ಸಹಾಯಕ ಚುನಾವಣಾಧಿಕಾರಿಗಳು ಗುರುತು ಮಾಡಲಾಗುತ್ತಿದ್ದುದು ಇಲ್ಲಿನ ವಿಶೇಷತೆಯಾಗಿತ್ತು.
ಗೆಲುವು:
ಶಾಲಾ ನಾಯಕನಾಗಿ ಮಂಜುನಾಥ, ಉಪನಾಯಕನಾಗಿ ನವೀನ ಕುಮಾರ್, ಕಾರ್ಯದರ್ಶಿಯಾಗಿ ಪ್ರಭಾಶ್ರಿ, ಕ್ರೀಡಾ ಮಂತ್ರಿಯಾಗಿ ಪ್ರಶಾಂತ ಇವರು ಭರ್ಜರಿ ಗೆಲುವು ಸಾಧಿಸುವ ಮೂಲಕ ಆಯ್ಕೆಗೊಂಡರು.
ಸಹಾಯಕ ಚುನಾವಣಾಧಿಕಾರಿಯಾಗಿ ರಮಾ ಮೋಹನ್, ವಿದ್ಯಾಶ್ರೀ, ವಾಸು, ಹೇಮಣ್ಣ ನಿಂಬಣ್ಣನವರ್ ಮತ್ತಿತರರು ಪಾಲ್ಗೊಂಡಿದ್ದರು.
ಶಾಲೆಯಲ್ಲಿ ಪಾರದರ್ಶಕವಾಗಿ ಮಂತ್ರಿಮಂಡಲ ರಚನೆಯಾಗಿದ್ದು, ಅಧಿಕಾರ ಸ್ವೀಕಾರ ಇನ್ನಷ್ಟೇ ನಡೆಯಬೇಕಿದೆ. ಆದರೆ ಗೆದ್ದ ಬಳಿಕ ಯಾವುದೇ ರೀತಿಯ ‘ಕುದುರೆ ವ್ಯಾಪಾರ’ ಭೀತಿ ಮಾತ್ರ ಇಲ್ಲಿಲ್ಲ ಎಂದು ಮುಖ್ಯಶಿಕ್ಷಕ ಅಶೋಕ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
