ಮೂಡುಬಿದರೆ: ಮಾರ್ಪಾಡಿ ಗ್ರಾಮದ ಕೋಟೆಬಾಗಿಲಿನಲ್ಲಿ ಅಜೀರ್ಣಾವಸ್ಥೆಯಲ್ಲಿರುವ ಮನೆಯಲ್ಲಿ ಅತಂತ್ರರಾಗಿರುವ ಮಾನಸಿಕ ಅಸ್ವಸ್ಥ ಸಹೋದರಿಯರನ್ನು ರೋಟರಿ ಕ್ಲಬ್ ಪದಾಧಿಕಾರಿಗಳು ಮತ್ತು ಪುರಸಭೆ ಅಧ್ಯಕ್ಷರು ಭೇಟಿ ನೀಡಿ ಸಮಸ್ಯೆಯ ವಿವರ ಪಡಕೊಂಡರು.


ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿ ಬದುಕು ಸಾಗಿಸುತ್ತಿರುವ ಚಂದ್ರಾವತಿ(65)ಮತ್ತು ಆಕೆಯ ಸಹೋದರಿ ರಾಜೀವಿ(62)ಅವರನ್ನು ಈ ತಂಡ ಭೇಟಿ ನೀಡಿ ಮಾತನಾಡಿಸಿತು. ಸಹೋದರಿಯರಿಬ್ಬರು ಮಾನಸಿಕವಾಗಿ ದುರ್ಬಲರಾಗಿರುವುದರಿಂದ ಅವರಿಗೆ ತಕ್ಷಣಕ್ಕೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದು ಬಳಿಕವಷ್ಟೆ ಅವರ ಮನೆ ದುರಸ್ತಿ, ಶೌಚಾಲಯ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ರೋಟರಿ ಅಧ್ಯಕ್ಷ ಪಿ.ಕೆ ಥೋಮಸ್ ಮಾಧ್ಯಮಕ್ಕೆ ತಿಳಿಸಿದರು. ಮನೆ ಒಳಗಡೆ ಮತ್ತು ಹೊರಗಡೆ ಗಲೀಜಿನ ವಾತಾವರಣ ಸೃಷ್ಟಿಯಾಗಿದೆ. ಮನೆಯೊಳಗೆ ಹುತ್ತ ಬೆಳೆದಿದೆ. ಮಲಗುವ ಕೋಣೆಯಲ್ಲೆ ಕೋಳಿಗಳ ವಾಸ ಸ್ಥಾನ ಕೂಡ ಆಗಿದೆ. ಪುರಸಭೆಯಿಂದ ಅಗತ್ಯ ಸಹಕಾರ ಒದಗಿಸುವ ಬಗ್ಗೆ ಪುರಸಬೆ ಅಧ್ಯಕ್ಷೆ ರೂಪಾ ಎಸ್. ಶೆಟ್ಟಿ ಭರವಸೆ ನೀಡಿದರು. ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ತನ್ನ ಸ್ನೇಹಿತರೊಂದಿಗೆ ಈಚೆಗೆ ಈ ಮನೆ ಆವರಣದ ಗಿಡಗಂಟೆಗಳನ್ನು ತೆಗೆದು ಸ್ವಚ್ಛಗೊಳಿಸಿದ್ದರು.
ಬಿಲ್ಲವ ಸಂಘ ಭೇಟಿ:ಸದ್ರಿ ಮನೆಗೆ ಬಿಲ್ಲವ ಸಂಘದ ಅಧ್ಯಕ್ಷ ಪೂವಪ್ಪ ಕುಂದರ್, ಉಪಾಧ್ಯಕ್ಷ ವಾಸು ಪೂಜಾರಿ, ಪ್ರಮುಖರಾದ ನವೀನ್, ರಾಜೇಂದ್ರ, ಲಕ್ಷ್ಮಣ ಪೂಜಾರಿ ಬುಧವಾರ ಭೇಟಿ ಹಾಗೂ ಮನೆ ಹಾಗೂ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದರು. ಸಹೋದರಿಯರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವ ಬಗ್ಗೆ ಸಂಘ ನಿರ್ಧರಿಸಿತು.