ಬಂಟ್ವಾಳ : ತಾಲೂಕಿನ ವಾಮದಪದವು ಸಮೀಪ ನಡೆದ ಅಪ್ರಾಪ್ತ ಬಾಲಕಿಯ ನಾಪತ್ತೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಘಟನೆಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಈರ್ವರನ್ನು ಬಂಧಿಸಿದ್ದಾರೆ.
ಬಂಧಿತನನ್ನು ಸಕಲೇಶಪುರ ನಿವಾಸಿ ಮಂಜು(20) ಎಂದು ಗುರುತಿಸಲಾಗಿದ್ದು ಈತನ ವಿರುದ್ದ ಅಪಹರಣ, ಪೋಸ್ಕೋ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಅಪಹರಣಕ್ಕೆ ಸಹಕಾರ ನೀಡಿದ ಆರೋಪದಲ್ಲಿ ಖಾಸಿಂ(41) ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ;
ಅಂಗಡಿಪಲ್ಕೆ ನಿವಾಸಿ ಅಪ್ರಾಪ್ತ ವಯಸ್ಸಿನ ಬಾಲಕಿ ಕಳೆದ ಜು. 7 ರಂದು ಅಂಕಪಟ್ಟಿ ತರಲೆಂದು ಮನೆಯಿಂದ ತೆರಳಿದವಳು ವಾಪಾಸು ಬಾರದೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ತಾಯಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಮನೆಮಂದಿ ನೀಡಿದ ದೂರಿನಲ್ಲಿ ಯುವಕನೊಬ್ಬ ಅಪಹರಿಸಿದ್ದಾನೆ ಎಂದು ಆರೋಪ ವ್ಯಕ್ತವಾಗಿತ್ತು. ಘಟನೆಯ ಬೆನ್ನತ್ತಿದ ಪೊಲೀಸರಿಗೆ ಆಕೆ ಪ್ರೇಮಿ ಯುವಕನ ಜೊತೆ ತೆರಳಿರುವ ಅಂಶ ಬಯಲಾಗಿತ್ತು.

ಅದರಂತೆ ಆರೋಪಿಗಾಗಿ ಶೋಧ ಕಾರ್ಯ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ ಮತ್ತವರ ಸಿಬ್ಬಂದಿಗಳಾದ ಲಕ್ಷ್ಮಣ್ , ಜಗದೀಶ್ ಮೂಡಿಗೆರೆಯ ಬಿಳಗುಲ ಎಂಬಲ್ಲಿ ಕಾರ್ಯಚರಣೆ ನಡೆಸಿದ್ದು, ಅಪ್ರಾಪ್ತ ಬಾಲಕಿ ಸಹಿತ ಆರೋಪಿ ಮಂಜುವನ್ನು ಪತ್ತೆಹಚ್ಚಿದ್ದಾರೆ. ವಿಚಾರಣೆ ವೇಳೆ ಈರ್ವರು ಮದುವೆಯಾಗಲು ಮನೆಯಲ್ಲಿ ಒಪ್ಪಿಗೆ ಇಲ್ಲದ ಹಿನ್ನೆಲೆಯಲ್ಲಿ, ಮದುವೆಯಾಗುವ ಉದ್ದೇಶದಿಂದ ಜೊತೆಯಾಗಿ ತೆರಳಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ವಾಮದಪದವಿನಿಂದ ತೆರಳಿದ ಬಳಿಕ ಮಂಜುವಿನ ಮೂಡಿಗೆರೆಯ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯಿದ್ದು, ಈರ್ವರ ನಡುವೆ ಸಮ್ಮತಿ ಇದ್ದು ದೈಹಿಕ ಸಂಪರ್ಕ ನಡೆದಿದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಆದರೆ ಬಾಲಕಿ ಅಪ್ರಾಪ್ತವಯಸ್ಸಿನವಳಾಗಿರುವ ಹಿನ್ನೆಲೆಯಲ್ಲಿ ಆರೋಪಿ ಮಂಜು ವಿರುದ್ದ ಮದುವೆಯಾಗುವ ಕಾರಣಕ್ಕೆ ಅಪಹರಣ, ಪೋಸ್ಕೋ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ , ಬಾಲ ಅಪ್ರಾಪ್ತ ವಯಸ್ಸಿನವಳೆಂದು ಅರಿತಿದ್ದೂ ಅಪಹರಣಕ್ಕೆ ಸಹಕರಿಸಿದ ಆರೋಪದಲ್ಲಿ ಮೀನುವ್ಯಾಪಾರಿ ಖಾಸಿಂ ವಿರುದ್ದವೂ ಪ್ರಕರಣ ದಾಖಲಿಸಲಾಗಿದೆ ಎಂದು ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

By suddi9

Leave a Reply

Your email address will not be published. Required fields are marked *