ಮೂಡುಬಿದಿರೆ:ದೇಹ, ಮನಸ್ಸು ಮತ್ತು ಭಾವನೆಗಳನ್ನು ಒಂದೆಡೆ ಸೇರಿಸಿ ಏಕಾಗ್ರತೆಯನ್ನು ಕಾಯ್ದುಕೊಳ್ಳುವುದೆ ಯೋಗ. ದೈಹಿಕ ಬೆಳವಣಿಗೆ ಮತ್ತು ಮಾನಸಿಕ ಕ್ಷಮತೆಗೆ ಯೋಗ ಪರಿಣಾಮಕಾರಿ ಔಷಧಿ ಎಂದು ಬೆಂಗಳೂರಿನ ಶ್ವಾಸ ಕೇಂದ್ರದ ಯೋಗ ಗುರು ವಚನಾನಂದ ಸ್ವಾಮೀಜಿ ಹೇಳಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ಐದು ದಿನ ನಡೆಯುವ ಯೋಗ ತರಬೇತಿಯನ್ನು ಅವರು ಸೋಮವಾರ ಸಂಜೆ ಉದ್ಘಾಟಿಸಿ ಮಾತನಾಡಿದರು. ದೇಹದಲ್ಲಿರುವ ವಿವಿಧ ಗ್ರಂಥಿಗಳ ಬೆಳವಣಿಗೆ ಆ ಮೂಲಕ ವ್ಯಕ್ತಿಯ ದೈಹಿಕ ಅಭಿವೃದ್ಧಿ, ಬುದ್ದಿಮತೆ ವಿಕಾಸಕ್ಕೆ ಥೈರಾಯ್ಡ್ ಗ್ರಂಥಿಯ ಸಹಕಾರ ಅಗತ್ಯ.ಇದು ಸಮರ್ಪಕವಾಗಿ ಕಾರ್ಯನಿರ್ವಹಿಸಲು ನಾವು ಪ್ರತಿನಿತ್ಯ `ಅ, ಆ’ ಅಕ್ಷರಭ್ಯಾಸ ಮಾಡಬೇಕು ಎಂದು ಸಲಹೆಯಿತ್ತರು.
ಭವಿಷ್ಯದಲ್ಲಿ ಒಳ್ಳೆಯ ವ್ಯಕ್ತಿಯಾಗಬೇಕೆಂದಾದರೆ ವಿದ್ಯಾರ್ಥಿ ಜೀವನದಲ್ಲಿ ಅದರ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಲು ಸಕಾಲ ಎಂದರು. ಪ್ರಾರಂಭದಲ್ಲಿ ಅವರು ವಿದ್ಯಾರ್ಥಿಗಳಿಂದ ಧ್ಯಾನ ಮಾಡಿಸಿ ಯೋಗದ ಮಹತ್ವ ವಿವರಿಸಿದರು.ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ವನಿತ ಶೆಟ್ಟಿ ಸ್ವಾಗತಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಸ್ಮಿತಾ ಐತಾಳ್ ಇದ್ದರು. ಲಾವಣ್ಯ ನಿರೂಪಿಸಿದರು. ಡಾ. ಆಶ್ಮಾ ವಂದಿಸಿದರು.