ಅಭಿವೃದ್ಧಿ ಏರಿಯಾದ ರಸ್ತೆಯಲ್ಲಿ ಹೊಂಡ ವೃದ್ಧಿ
ಮೂಡುಬಿದರೆ: ರಸ್ತೆ ಇಕ್ಕೆಲಗಳ ಪಕ್ಕದಲ್ಲೇ ಬಹುಮಹಡಿ ಕಟ್ಟಡಗಳ ನಿರ್ಮಾಣಗೊಂಡು, ಏರಿಯಾವು ಅಭಿವೃದ್ಧಿಯಾಗುತ್ತಿದ್ದರೂ, ಕಳೆದ ಒಂದು ದಶಕಗಳಿಂದ ರಸ್ತೆ ಅಭಿವೃದ್ಧಿಯಿಲ್ಲ. ಮರು ಡಾಮರೀಕರಣ ಬಿಡಿ, ತೇಪೆ ಹಾಕುವ ಕೆಲಸವೂ ಆಗಿಲ್ಲ. ರಸ್ತೆ ಅಭಿವೃದ್ಧಿಯ ಬದಲು ಹೊಂಡ ವೃದ್ಧಿ ಆಗುತ್ತಿರುವ ರಸ್ತೆಯೇ ಮಾಸ್ತಿಕಟ್ಟೆ-ವಿದ್ಯಾಗಿರಿ ಸಂಪರ್ಕ ರಸ್ತೆ.
ಮೂಡುಬಿದರೆ ಪುರಸಭಾ ವ್ಯಾಪ್ತಿಯಲ್ಲಿ, ಪೇಟೆಯಿಂದ ಸುಮಾರು ಒಂದು ಕಿ.ಲೋ ಮೀಟರ್ ದೂರದಲ್ಲಿ ಮಾಸ್ತಿಕಟ್ಟೆ ಜಂಕ್ಷನ್ ಇದೆ. ಮಾಸ್ತಿಕಟ್ಟೆ ಜಂಕ್ಷನ್‍ನಿಂದ ವಿದ್ಯಾಗಿರಿ ಎದುರಿನ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಎರಡು ಕಿ.ಮೀ ರಸ್ತೆಯ ಮುಕ್ಕಾಲು ಭಾಗ ಹೊಂಡಗಳಿವೆ. ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯವಾಗಿರುವ ಈ ರಸ್ತೆಯ ಎರಡು ಪ್ರಮುಖ ಅಭಿವೃದ್ಧಿ ಕೇಂದ್ರಗಳ ಮಧ್ಯೆಯಿದೆ. ವಸತಿ ಹಾಗೂ ಬಹಮಹಡಿ ಕಟ್ಟಡಗಳು ಹೆಚ್ಚಾತ್ತಿರುವ ವಿದ್ಯಾಗಿರಿ ಹಾಗೂ ಈಗಾಗಲೇ ಕಟ್ಟಡಗಳ ಅಭಿವೃದ್ಧಿಯಾಗಿರುವ ಮೂಡುಬಿದರೆ ಪೇಟೆಯ ಮಧ್ಯಭಾಗದಲ್ಲಿದೆ. ಈ ಪರಿಸರದಲ್ಲಿ ಬಹುಮಹಡಿ ಕಟ್ಟಡಗಳು, ಮನೆಗಳು ಹೆಚ್ಚಾಗುತ್ತಿರುವ ಕಾರಣ ಪ್ರತಿದಿನ ನೂರಾರು ವಾಹನಗಳು, ಹೆಚ್ಚಿನ ಸಂಖ್ಯೆ ಜನರು ಓಡಾಡುತ್ತಿರುತ್ತಾರೆ.
ಈ ರಸ್ತೆಯ ಪಕ್ಕದಲ್ಲಿರುವ ಗಾಂಧಿನಗರ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೊಂಡಗಳಿದ್ದು, ರಸ್ತೆಯಲ್ಲಿ ವಾಹನಗಳು ಕಷ್ಟಪಟ್ಟು ಸಂಚರಿಸುವಂತಾಗಿದೆ. ಫುಟ್‍ಪಾತ್‍ನಲ್ಲೂ ದೊಡ್ಡ ಹೊಂಡಗಳಿದ್ದು, ಜನರು, ಮಕ್ಕಳು ಓಡಾಡುವುದು ಕಷ್ಟಕರವಾಗಿದೆ. ನೆಲ್ಲಿಗುಡ್ಡೆ ನಾಮಫಲಕವಿರುವ ಜಾಗದಲ್ಲೂ ಇದೇ ಪರಿಸ್ಥಿತಿಯಿದ್ದು ರಸ್ತೆ ಸ್ಥಿತಿ ಶೋಚನೀಯವಾಗಿದೆ.
mbd_aug5_10 (1)

mbd_aug5_10 (2)

mbd_aug5_10 (3)
ರಸ್ತೆ ಅವ್ಯವಸ್ಥೆಯು ದ್ವಿಚಕ್ರ ವಾಹನ, ಕಾರುಗಳು ಹೆಚ್ಚಿನ ತೊಂದರೆಗೆ ಒಳಪಡುತ್ತಿದ್ದು, ಪ್ರಸಕ್ತ ವರ್ಷದಲ್ಲಿ 1 ಕಾರು, 1 ಬೈಕ್ ಪಲ್ಟಿಯಾಗಿದ್ದು, 5 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. 100ರಷ್ಟು ಮನೆಯಿರುವ ಈ ಪರಿಸರದ ಜನರು ಮೂಡುಬಿದರೆ ಪೇಟೆ ಹಾಗೂ ವಿದ್ಯಾಗಿರಿಯತ್ತ ತೆರಳಲು ಇದೇ ರಸ್ತೆಗಿಳಿಯಬೇಕಾದ ಕಾರಣ ಅವರ ವಾಹನ ಮಾತ್ರವಲ್ಲ ಆರೋಗ್ಯದಲ್ಲೂ ಏರುಪೇರಾಗುತ್ತಿದೆ.
ವರ್ತುಲ ರಸ್ತೆಗೆ ಸೂಕ್ತ:
ಮಂಗಳೂರು-ಮೂಡುಬಿದರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ವಾಹನದಟ್ಟನೆ ಹೆಚ್ಚಾಗಿದ್ದು, ಮಾಸ್ತಿಕಟ್ಟೆ-ವಿದ್ಯಾಗಿರಿ ಸಂಪರ್ಕ ರಸ್ತೆಯನ್ನು ವರ್ತುಲ ರಸ್ತೆಯಾಗಿ ಅಭಿವೃದ್ಧಿ ಪಡಿಸುವ ಮೂಲಕ ಪರ್ಯಾಯ ವ್ಯವಸ್ಥೆ ಕ್ಲಪಿಸಬಹುದಾಗಿದೆ. ಮಂಗಳೂರು, ಮೂಲ್ಕಿ ಕಡೆಯಿಂದ ರಸ್ತೆಗಳು ಹಂಡೇಲು ಸುತ್ತು ಬಳಿ ಸಂಪರ್ಕಿಸುತ್ತದೆ. ಬಳಿಕ ವಿದ್ಯಾಗಿರಿ ಸಮೀಪ ಮೂಡುಬಿದರೆ ಪೇಟೆಗೆ ತೆರಳುವ ರಾ.ಹೆ. ಹಾಗೂ ಮಾಸ್ತಿಕಟ್ಟೆ ರಸ್ತೆಗಳು ಕವಲೊಡೆಯುತ್ತದೆ. ಮಂಗಳೂರು, ಮೂಲ್ಕಿ ಕಡೆಯಿಂದ ಬರುವ ವಾಹನಗಳು ಮೂಡುಬಿದರೆ ಪೇಟೆಗೆ ಸಾಗದೆ ನೇರವಾಗಿ, ಬಂಟ್ವಾಳದ ಕಡೆಗೆ ಸಾಗಬೇಕಾದರೆ ಮಾಸ್ತಿಕಟ್ಟೆಯೂ ಹೇಳಿ ಮಾಡಿಸಿದ ರಸ್ತೆಯಾಗಿದೆ. ವಿದ್ಯಾಗಿರಿ-ಮಾಸ್ತಿಕಟ್ಟೆ-ಲಾಡಿ-ಪೇಪರ್ ಮಿಲ್ಲ್ ಮುಖಾಂತರ ಬಂಟ್ವಾಳದತ್ತ ಯಾವುದೇ ವಾಹನದಟ್ಟನೆ ಇಲ್ಲದೆ ಪ್ರಯಾಣ ಮಾಡಬಹುದಾಗಿದೆ. ಮಾಸ್ತಿಕಟ್ಟೆಯಿಂದ ಪೇಟೆಯ ಮಾರ್ಗವಾಗಿ ಚಲಿಸಿ, ಪೇಟೆಗೆ ಹೋಗದೆ ಮೂಡುಬಿದರೆ ಕೋರ್ಪುಸ್ ಚರ್ಚ್ ಬಳಿಯ ಸಿಗುವ ಕವಲು ರಸ್ತೆ ಮೂಲಕ ಸಾಗಿ ಅಮರಶ್ರೀ ಎದುರಿನ ಏಕಮುಖ ರಸ್ತೆಯತ್ತಲೂ ಸಾಗಬಹುದಾಗಿದೆ. ಈ ವ್ಯವಸ್ಥೆಯಿಂದಾಗಿ ಬಂಟ್ವಾಳ ಮಾತ್ರವಲ್ಲದ ಅದೇ ದಿಕ್ಕಿನಲ್ಲಿರುವ ಬೆಳ್ತಂಗಡಿ ಮಾರ್ಗವನ್ನು, ಏಕಮುಖರಸ್ತೆಯ ಎಡಬದಿಯಲ್ಲಿ ಸಾಗಿದರೆ, ಕಾರ್ಕಳ, ನಾರಾವಿಯತ್ತಲೂ ಸಾಗಬಹುದು. ಇದರಿಂದ ಮಂಗಳೂರು-ಮೂಡುಬಿದರೆ ರಾಷ್ಟ್ರೀಯ ಹೆದ್ದಾರಿ ಹಾಗೂ ಪೇಟೆಯ ಮುಖ್ಯ ರಸ್ತೆಯ ವಾಹನ ದಟ್ಟನೆಯಿಂದಲೂ ಪಾರಾಗಬಹುದು. ವಿದ್ಯಾಗಿರಿ-ಮಾಸ್ತಿಕಟ್ಟೆ ಮಾರ್ಗವಾಗಿ ತೋಡಾರು ಹೊಸಬೆಟ್ಟು-ಇರುವೈಲು ಹಾಗೂ ಕುಪ್ಪೆಪದವನ್ನೂ ತಲುಪಬಹುದಾಗಿದೆ.
ಪ್ರತಿನಿದಿನವೂ ಈ ರಸ್ತೆಯ ಮುಖಾಂತರ ದ್ವಿಚಕ್ರ ವಾಹನಗಳು ಕಷ್ಟಕರವಾಗಿ ಸಂಚರಿಸುವಂತಾಗಿದೆ. ಹೊಂಡಗಳಿಂದಾಗಿ ರಸ್ತೆಯಲ್ಲಿ ನೇರವಾಗಿ ಸಂಚರಿಸಲು ಆಗದೆ, ಕೆಲವೊಮ್ಮೆ ಫುಟ್‍ಪಾತ್ ಇಳಿದು, ಮತ್ತೆ ಕೆಲವೊಮ್ಮೆ ರಸ್ತೆ ಇನ್ನೊಂದು ಬದಿಗೆ ಹೋಗುವ ಅನಿವಾರ್ಯತೆಯಿದೆ. ಎದುರಿಗೆ ಇನ್ನೊಂದು ವಾಹನ ಬಂದರೆ, ಹೆಚ್ಚಿನ ತೊಂದರೆಯಾಗುತ್ತಿದೆ.
ಮಗುವನ್ನು ಶಾಲೆಗೆ ಬಿಡಲು-ಮರಳಿ ಕರೆದುಕೊಂಡು ಬರಲು ಕನಿಷ್ಠ 4 ಸಲವಾದರೂ ಈ ಮಾರ್ಗದಲ್ಲಿ ಸಂಚರಿಸಬೇಕಗಾದೆ. ಹೊಂಡಗಳೇ ತುಂಬಿರುವ ಮಾರ್ಗದಿಂದಾಗಿ ಬೆನ್ನು ನೋವಿನಂತಹ ಬಾಧೆಗಳು ಹೆಚ್ಚಾಗುತ್ತಿದೆ. ಹೆಚ್ಚಿನ ಮನೆಯವರು ರಸ್ತೆ ಅವ್ಯವಸ್ಥೆಯಿಂದ ತೊಂದರೆ ಅನುಭವಿಸುವಂತಾಗಿದೆ. ಪ್ರತಿಬಾರಿಯೂ ಪುರಸಭೆಯವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ
ರಸ್ತೆಯ ದುಸ್ಥಿತಿ ಗಮನಕ್ಕೆ ಬಂದಿದೆ. ನನ್ನ ವಾರ್ಡ್‍ಗೆ ಸಿಗುವ 2015-16ನೇ ಸಾಲಿನ ಪುರಸಭಾ ನಿಧಿಯಿಂದ 3 ಲಕ್ಷ ಹಾಗೂ ಎಸ್‍ಎಫ್‍ಸಿ ಅನುದಾನದಲ್ಲಿ 10 ಲಕ್ಷ ಮೀಸಲಿರಿಸಿದ್ದೇವೆ. ಮಳೆಗಾಲ ಮುಗಿದೊಡನೆ ಕಾಮಗಾರಿ ಪ್ರಾರಂಭಿಸುತ್ತೇವೆ. ವರ್ತುಲ ರಸ್ತೆ ಮಾಡುವ ಕುರಿತು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೇವೆ.

By suddi9

Leave a Reply

Your email address will not be published. Required fields are marked *